
ಬೆಂಗಳೂರು, ಸೆ.8: ಮಣ್ಣಿನಿಂದ ಉದ್ಭವಿಸಿ, ಜಲದಲ್ಲಿ ಕರಗಿ ಪ್ರಕೃತಿಯಲ್ಲೇ ಲೀನವಾಗುವ ತತ್ವವನ್ನು ಸಾರುವ ಗಣೇಶ ಚತುರ್ಥಿ ಹಬ್ಬದ ಮೂಲ ಆಶಯಕ್ಕೆ ಇತ್ತೀಚಿನ ವಾಸ್ತವಗಳು ತೀವ್ರ ಸವಾಲೊಡ್ಡುತ್ತಿವೆ. ಕಮರ್ಷಿಯಲೈಸೇಶನ್ (ವ್ಯಾಪಾರೀಕರಣ) ಪ್ರಭಾವದಿಂದಾಗಿ ಜಲಮಾಲಿನ್ಯದ ಭೀಕರ ಮೂಲವಾಗಿ ಬದಲಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಈ ಬಾರಿ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಗಣೇಶ್ನ್ನು ನಿಷೇಧ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಮತ್ತೊಂದು ಕಡೆ ಜನರು ಕೂಡ ಪರಿಸರ ಸ್ನೇಹಿ ಗಣೇಶನತ್ತ ಮುಖ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನ ಈ ಬಾರಿ ಗಣೇಶ ಹಬ್ಬಕ್ಕೆ ಪಿಒಪಿ ಗಣೇಶನಿಗಿಂತ ಪರಿಸರ ಸ್ನೇಹಿ ಗಣೇಶನನ್ನು ತರಲು ಮುಂದಾಗಿದ್ದಾರೆ. ಇನ್ನು ಪಿಒಪಿ ಗಣೇಶನನ್ನು ಪರಿಸರ ಸ್ನೇಹಿ ಗಣೇಶ ಎಂದು ಮಾರಾಟ ಮಾಡುವ ಸಾಧ್ಯತೆ ಕೂಡ ಇದೆ. ಹಾಗಾಗಿ ಕೆಮಿಕಲ್ ರಹಿತ ಹಾಗೂ ನೈಗಿಸರ್ಗಿಕ ಗಣೇಶನ್ನು ಹುಡುಕಿ ತರಲುವುದು ಹೇಗೆ? ಅದನ್ನು ಪತ್ತೆ ಮಾಡುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಾಸ್ತ್ರಗಳ ಪ್ರಕಾರ, ನೈಸರ್ಗಿಕ ಮಣ್ಣಿನಿಂದ (Clay) ಮಾಡಿದ ಗಣೇಶನ ಮೂರ್ತಿಗಳನ್ನು ಪೂಜಿಸಿ ಜಲದಲ್ಲಿ ವಿಸರ್ಜಿಸುವುದು ಪದ್ಧತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಣ್ಣಿನ ಮೂರ್ತಿಗಳ ಜಾಗವನ್ನು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (PoP) ಮತ್ತು ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳು ಆಕ್ರಮಿಸಿಕೊಂಡಿವೆ.ಮುಂಬೈ ಕರಾವಳಿ ಮತ್ತು ಅರೇಬಿಯನ್ ಸಮುದ್ರ ಒಂದರಲ್ಲೇ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ರಾಸಾಯನಿಕಯುಕ್ತ PoP ಮೂರ್ತಿಗಳಿಂದಾಗಿ ಹಬ್ಬ ಮುಗಿದ ತಕ್ಷಣ ಸಮುದ್ರದಲ್ಲಿನ ಆಮ್ಲಜನಕದ ಪ್ರಮಾಣ ಶೇ. 50 ರಷ್ಟು ತೀವ್ರವಾಗಿ ಕುಸಿಯುತ್ತಿದೆ.
ನೀರಿನಲ್ಲಿ ಬೇಗನೆ ಕರಗದ PoP ಮತ್ತು ವಿಷಕಾರಿ ರಾಸಾಯನಿಕ ಬಣ್ಣಗಳು ಮೀನು ಹಾಗೂ ಇತರ ಜಲಚರ ಜೀವಿಗಳ ಸಾವಿಗೆ ನೇರ ಕಾರಣವಾಗುತ್ತಿವೆ. ಕರಗದೆ ಉಳಿಯುವ PoP ಮೂರ್ತಿಗಳ ತುಂಡುಗಳನ್ನು ಕೊನೆಗೆ ಸ್ಥಳೀಯ ಆಡಳಿತಗಳು ಬುಲ್ಡೋಜರ್ ಮೂಲಕ ತೆರವುಗೊಳಿಸುವ ಪರಿಸ್ಥಿತಿ ಬಂದೊದಗಿದ್ದು, ಇದು ಧಾರ್ಮಿಕ ಭಾವನೆ ಹಾಗೂ ಪಾರಂಪರಿಕ ಕಲ್ಪನೆಗೂ ಧಕ್ಕೆ ತರುತ್ತಿದೆ.
ಪರಿಸರ ಸ್ನೇಹಿ ಗಣೇಶ ಮೂರ್ತಿ ಎಂದರೆ ಯಾವುದೇ ರೀತಿಯ ರಾಸಾಯನಿಕ ವಸ್ತುಗಳು, ಪ್ಲ್ಯಾಸ್ಟಿಕ್ ಅಥವಾ ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ (PoP) ಬಳಸದೆ, ಸಂಪೂರ್ಣವಾಗಿ ನೈಸರ್ಗಿಕ ಹಾಗೂ ಜೈವಿಕವಾಗಿ ವಿಘಟನೆಯಾಗುವ ವಸ್ತುಗಳಿಂದ ತಯಾರಿಸಿದ ಗಣಪತಿಯ ಮೂರ್ತಿ. ಕಚ್ಚಾ ಮಣ್ಣು, ಕೆಂಪು ಮಣ್ಣು, ಕಾಗದದ ತಿರುಳು , ಸಸ್ಯಾಧಾರಿತ ಅಥವಾ ಅರಿಶಿನ, ಕುಂಕುಮದಂತಹ ನೈಸರ್ಗಿಕ ಬಣ್ಣಗಳನ್ನು ಮಾತ್ರ ಇದಕ್ಕೆ ಬಳಸಲಾಗುತ್ತದೆ.
ಈ ಮೂರ್ತಿಗಳನ್ನು ಜಲಾವೃತಗೊಳಿಸಿದಾಗ (ವಿಸರ್ಜನೆ) ಕೆಲವೇ ಗಂಟೆಗಳಲ್ಲಿ ನೀರಿನಲ್ಲಿ ಸಂಪೂರ್ಣವಾಗಿ ಕರಗಿ ಮಣ್ಣಿನಲ್ಲಿ ಲೀನವಾಗುತ್ತವೆ. ಇತ್ತೀಚೆಗೆ ಮೂರ್ತಿಯೊಳಗೆ ಸಸ್ಯದ ಬೀಜಗಳನ್ನಿಡುವ ‘ಸೀಡ್ ಗಣೇಶ’ ಕೂಡ ಜನಪ್ರಿಯವಾಗಿದ್ದು, ವಿಸರ್ಜನೆಯ ನಂತರ ಕುಂಡದಲ್ಲಿ ಗಿಡವಾಗಿ ಬೆಳೆಯುತ್ತದೆ.
ಮಾರುಕಟ್ಟೆಯಲ್ಲಿ PoP ಮೂರ್ತಿಗಳನ್ನು ‘ಮಣ್ಣಿನ ಮೂರ್ತಿ’ ಎಂದು ಹೇಳಿ ಮಾರಾಟ ಮಾಡುವ ಸಾಧ್ಯತೆ ಇದೆ, ನೈಜ ಇಕೋ-ಫ್ರೆಂಡ್ಲಿ ಮೂರ್ತಿಯನ್ನು ಗುರುತಿಸಲು ಈ ಕೆಳಗಿನ ಪ್ರಮುಖ ವ್ಯತ್ಯಾಸಗಳನ್ನು ಗಮನಿಸಿ:
ತೂಕ :
ಮಣ್ಣಿನ ಮೂರ್ತಿ: ನೈಸರ್ಗಿಕ ಮಣ್ಣಿನಿಂದ ಮಾಡಲ್ಪಟ್ಟಿರುವುದರಿಂದ ತೂಕ ಹೆಚ್ಚಿರುತ್ತದೆ (ಬಾರವಾಗಿರುತ್ತದೆ).
PoP ಮೂರ್ತಿ: ತೂಕದಲ್ಲಿ ಅತ್ಯಂತ ಹಗುರವಾಗಿರುತ್ತದೆ. (ಗಮನಿಸಿ: ಕೆಲವು ವ್ಯಾಪಾರಿಗಳು PoP ಮೂರ್ತಿಯ ಅಡಿಯಲ್ಲಿ ಸಿಮೆಂಟ್ ತುಂಬಿ ಬಾರ ಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ಒಳಗಿನ ಭಾಗವನ್ನೂ ಪರಿಶೀಲಿಸಿ).
ಹಿಂಭಾಗದೊಳ್ಳುತನ :
ಮೂರ್ತಿಯನ್ನು ತಳಭಾಗದಿಂದ ನೋಡಿದಾಗ, PoP ಮೂರ್ತಿಗಳು ಒಳಗಿನಿಂದ ಸಂಪೂರ್ಣವಾಗಿ ಡೊಳ್ಳಾಗಿ (Hollow) ಹಾಗೂ ನಯವಾಗಿರುತ್ತವೆ.
ಮಣ್ಣಿನ ಮೂರ್ತಿಗಳ ತಳಭಾಗ ದಪ್ಪನಾಗಿದ್ದು, ಕೈಯಿಂದ ಒತ್ತಿ ಮಾಡಿದ ಗುರುತುಗಳಿರುತ್ತವೆ.
ಬಣ್ಣಗಳು ಮತ್ತು ಹೊಳಪು:
ಪರಿಸರ ಸ್ನೇಹಿ ಮೂರ್ತಿಗಳಿಗೆ ನೈಸರ್ಗಿಕ/ಜಲವರ್ಣ ಬಳಸುವುದರಿಂದ ಅವುಗಳ ಬಣ್ಣ ಕೊಂಚ ಮಂದವಾಗಿ ಮತ್ತು ನೈಸರ್ಗಿಕವಾಗಿ ಕಾಣುತ್ತದೆ.
PoP ಮೂರ್ತಿಗಳಿಗೆ ರಾಸಾಯನಿಕ ಎನಾಮೆಲ್ ಬಣ್ಣಗಳನ್ನು ಬಳಸಿರುವುದರಿಂದ ಅವು ಅತಿಯಾದ ಹೊಳಪು =ಹೊಂದಿರುತ್ತವೆ.
ವಿನ್ಯಾಸ ಮತ್ತು ಸಣ್ಣ ವಿವರಗಳು :
PoP ಅನ್ನು ಅಚ್ಚುಗಳಿಗೆ ಹಾಕಿ ಸುಲಭವಾಗಿ ಮಾಡುವುದರಿಂದ ಅವುಗಳ ಆಭರಣ, ಮುಖದ ರೇಖೆಗಳು ಅತಿ ನಿಖರ ಹಾಗೂ ತೀಕ್ಷ್ಣವಾಗಿರುತ್ತವೆ.
ಮಣ್ಣಿನ ಮೂರ್ತಿಗಳನ್ನು ಕೈಯಿಂದ ರೂಪಿಸುವುದರಿಂದ ವಿನ್ಯಾಸಗಳು ಕೊಂಚ ಸರಳ ಹಾಗೂ ಕಲಾತ್ಮಕ ನಯವನ್ನು ಹೊಂದಿರುತ್ತವೆ.
ಪ್ಲಾಸ್ಟಿಕ್/ಚಮಕಿ/ಕಲ್ಲುಗಳ ಅಲಂಕಾರ :
ನೈಜ ಪರಿಸರ ಸ್ನೇಹಿ ಮೂರ್ತಿಗಳಿಗೆ ಪ್ಲಾಸ್ಟಿಕ್ ಕಲ್ಲುಗಳು, ಚಮಕಿ ಅಥವಾ ಕೃತಕ ಅಲಂಕಾರಿಕ ವಸ್ತುಗಳನ್ನು ಅಂಟಿಸಿರುವುದಿಲ್ಲ, ಏಕೆಂದರೆ ಅವು ನೀರನ್ನು ಕಲುಷಿತಗೊಳಿಸುತ್ತವೆ.
ಮಣ್ಣಿನ ಪೂರೈಕೆ, ಸಾಗಣೆ ವೆಚ್ಚ ಮತ್ತು ನೈಸರ್ಗಿಕ ಬಣ್ಣಗಳ ಬಳಕೆಯಿಂದಾಗಿ ಇಕೋ-ಫ್ರೆಂಡ್ಲಿ ಮೂರ್ತಿಗಳ ಬೆಲೆ ಕೊಂಚ ಹೆಚ್ಚಾಗಿದ್ದರೂ, ದೀರ್ಘಾವಧಿಯಲ್ಲಿ ಪರಿಸರಕ್ಕೆ ಆಗುವ ಹಾನಿಯನ್ನು ತಡೆಯಲು ಇದು ಅಗತ್ಯವಾಗಿದೆ.ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತು, ‘ಟ್ರೀ ಗಣೇಶ’ದಂತಹ ನವೀನ ಕಾರ್ಯಕ್ರಮಗಳು ಮುನ್ನೆಲೆಗೆ ಬಂದಿವೆ. ಈ ಮಾದರಿಯಲ್ಲಿ ಮಣ್ಣಿನ ಮೂರ್ತಿಯೊಳಗೆ ವೃಕ್ಷದ ಬೀಜಗಳನ್ನು ಇರಿಸಲಾಗಿರುತ್ತದೆ. ಹಬ್ಬ ಮುಗಿದ ನಂತರ ಮನೆಯ ಗಾರ್ಡನ್ ಅಥವಾ ಕುಂಡದಲ್ಲೇ ಗಣೇಶನಿಗೆ ನೀರೆರೆದು ವಿಸರ್ಜನೆ ಮಾಡಿದರೆ, ಕೆಲವೇ ದಿನಗಳಲ್ಲಿ ಅದು ಗಿಡವಾಗಿ ಬೆಳೆದು ಗಣಪತಿಯ ನೈಸರ್ಗಿಕ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ, ನಮ್ಮ ಹಬ್ಬಗಳು ಪರಿಸರಕ್ಕೆ ಮಾರಕವಾಗದಂತೆ ತಡೆಯಲು ಈ ಬಾರಿ ‘ಪರಿಸರ ಸ್ನೇಹಿ’ ಮಣ್ಣಿನ ಗಣಪತಿಯನ್ನೇ ಮನೆಗೆ ತಂದು ಪೂಜಿಸೋಣ.
ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ‘ಇಕೋ-ಫ್ರೆಂಡ್ಲಿ’ ನೈಸರ್ಗಿಕ ಮಣ್ಣಿನ ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ನಗರದಲ್ಲಿ ಪರಿಸರ ಸ್ನೇಹಿ ಮೂರ್ತಿಗಳು ದೊರೆಯುವ ಪ್ರಮುಖ ಸ್ಥಳಗಳು ಮತ್ತು ಮಾರ್ಗಗಳ ವಿವರ ಇಲ್ಲಿದೆ.
ಪಾಟರ್ಸ್ ಟೌನ್ (ಶಿವಾಜಿನಗರ ಹತ್ತಿರ): ಸಾಂಪ್ರದಾಯಿಕ ಕುಂಬಾರರು ಮತ್ತು ಮಣ್ಣಿನ ಕಲಾವಿದರ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ವಿಭಿನ್ನ ವಿನ್ಯಾಸದ, ಕಚ್ಚಾ ಮಣ್ಣಿನ ಸುಂದರ ಮೂರ್ತಿಗಳು ಸಿಗುತ್ತವೆ.
ಬಸವನಗುಡಿ (ಗಾಂಧಿ ಬಜಾರ್) ಮತ್ತು ಮಲ್ಲೇಶ್ವರಂ (8ನೇ ಕ್ರಾಸ್): ಈ ಪ್ರಸಿದ್ಧ ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ಸಮಯದಲ್ಲಿ ನೂರಾರು ಬೀದಿ ಬದಿ ಹಾಗೂ ಕಾಯಂ ಮಳಿಗೆಗಳಲ್ಲಿ ಮಣ್ಣಿನ ಹಾಗೂ ಸಸ್ಯದ ಬೀಜಗಳಿರುವ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತದೆ.
ಜಯನಗರ (4ನೇ ಬ್ಲಾಕ್)ಮತ್ತು ಇಂದಿರಾನಗರ: ಸ್ಥಳೀಯ ಕೈಕಸುಬುಗಾರರು ಮತ್ತು ಕಲಾ ಮಳಿಗೆಗಳು ಇಲ್ಲಿ ಪರಿಸರ ಸ್ನೇಹಿ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸುತ್ತಾರೆ.
ಬಿಬಿಎಂಪಿ ತಾತ್ಕಾಲಿಕ ಕೇಂದ್ರಗಳು: ಪರಿಸರ ಮಾಲಿನ್ಯ ತಡೆಯಲು ಬಿಬಿಎಂಪಿ ನಗರದ ವಿವಿಧ ವಾರ್ಡ್‌ಗಳಲ್ಲಿ, ಮೈದಾನಗಳಲ್ಲಿ ಇಕೋ-ಫ್ರೆಂಡ್ಲಿ ಮೂರ್ತಿ ಮಾರಾಟಕ್ಕೆ ಹಾಗೂ ಉಚಿತ ಜಲಾವೃತ ಕೇಂದ್ರಗಳಿಗೆ ಅವಕಾಶ ಮಾಡಿಕೊಡುತ್ತದೆ.
ಇದನ್ನೂ ಓದಿ: 64ನೇ ಬೆಂಗಳೂರು ಗಣೇಶೋತ್ಸವ: ಶೂನ್ಯ ತಾಜ್ಯ, ಪರಿಸರ ಸ್ನೇಹಿ ಆಚರಣೆಗೆ ಹೆಜ್ಜೆ
ಟ್ರೀ ಗಣೇಶ: ಮಣ್ಣಿನ ಮೂರ್ತಿಯೊಳಗೆ ಗಿಡದ ಬೀಜಗಳನ್ನಿಟ್ಟು ತಯಾರಿಸಲಾಗುವ ಮೂರ್ತಿಗಳು. ಮನೆ ಕಾಂಪೌಂಡ್ ಅಥವಾ ಕುಂಡದಲ್ಲೇ ವಿಸರ್ಜಿಸಿ ಗಿಡವಾಗಿ ಬೆಳೆಸಬಹುದು.
ಶ್ರೀ ಕಲಾ ನಿಕೇತನ ಮತ್ತು ಸ್ಥಳೀಯ ಕಲಾಕೃತಿ ಕೇಂದ್ರಗಳು: ಶೇಂದಿ ಮಣ್ಣು , ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಿ ತಯಾರಿಸಿದ ಮೂರ್ತಿಗಳು ಲಭ್ಯವಿರುತ್ತವೆ.
ಮನೆಬಾಗಿಲಿಗೇ ತಲುಪಿಸಲು ಬಯಸುವವರಿಗೆ ಆನ್‌ಲೈನ್ ಸೌಲಭ್ಯವೂ ಲಭ್ಯವಿದೆ:
ಕ್ವಿಕ್ ಡೆಲಿವರಿ ಆಪ್‌ಗಳು: Zepto, Blinkit, Swiggy Instamart ಹಾಗೂ BigBasket ಆಪ್‌ಗಳ ಮೂಲಕ 10 ರಿಂದ 15 ನಿಮಿಷಗಳಲ್ಲಿ 6 ರಿಂದ 10 ಇಂಚಿನ ಮಣ್ಣಿನ ಗಣೇಶ ಮೂರ್ತಿಗಳನ್ನು ಆರ್ಡರ್ ಮಾಡಬಹುದು.
ವಿಶೇಷ ಇ-ಕಾಮರ್ಸ್ ವೆಬ್‌ಸೈಟ್‌ಗಳು: Satvikstore.in, Ibhanan, EcoFriendlyGanesha.com ನಂತಹ ವೆಬ್‌ಸೈಟ್‌ಗಳ ಮೂಲಕ ಕಸ್ಟಮೈಸ್ಡ್ ಮೂರ್ತಿಗಳನ್ನು ಮುಂಗಡವಾಗಿ ಬುಕ್ ಮಾಡಬಹುದು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Tue, 8 September 26