Garuda Purana: ಮಾನಸಿಕ ಖಿನ್ನತೆಗೆ ರಹದಾರಿ ಆಗುವ 4 ಅಂಶಗಳು ಇಲ್ಲಿವೆ
ಸಂತೋಷದ ಜೀವನಕ್ಕಾಗಿ ನೀತಿ, ನಿಯಮ ಪಾಲನೆ ಕುರಿತು ಹೇಳುವುದರೊಂದಿಗೆ ವ್ಯಕ್ತಿಯನ್ನು ಖಿನ್ನತೆಯತ್ತ ತಳ್ಳುವ ಮುಖ್ಯ 4 ಸನ್ನಿವೇಶಗಳ ಬಗ್ಗೆಯೂ ಗರುಡ ಪುರಾಣ ಬೆಳಕು ಚೆಲ್ಲುತ್ತದೆ. ಅದರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸನಾತನ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹಾಪುರಾಣ ಎಂದು ಕರೆಯಲಾಗುತ್ತದೆ. ಆದರೂ ಗರುಡ ಪುರಾಣವೆಂದರೆ ಅದು ಸಾವಿನ ನಂತರ ಆತ್ಮದ ಸ್ಥಿತಿಯನ್ನು ವಿವರಿಸುವ ಗ್ರಂಥ, ಸೂತಕದ ಮನೆಯನ್ನು ಹೊರತುಪಡಿಸಿ ಬೇರೆಡೆಗೆ ಅದನ್ನು ಓದುವುದು ಸರಿಯಲ್ಲ ಎಂಬೆಲ್ಲಾ ನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಆ ರೀತಿಯ ನಂಬಿಕೆಗಳಿಂದಾಗಿಯೇ ಗರುಡ ಪುರಾಣದಲ್ಲಿನ ಎಷ್ಟೋ ವಿಚಾರಗಳು ಜನರನ್ನು ತಲುಪದೇ ಹಾಗೆ ಉಳಿದಿದೆ ಎನ್ನುವುದು ಸತ್ಯ. ವಾಸ್ತವವಾಗಿ ಗರುಡ ಪುರಾಣವು ಸಾವಿನ ನಂತರದ ರಹಸ್ಯಗಳನ್ನು ವಿವರಿಸುವುದು ಮಾತ್ರವಲ್ಲದೇ, ಮಾನವನ ಜೀವನವನ್ನು ಸುಧಾರಿಸುವ ಎಲ್ಲಾ ನೀತಿಗಳ ಬಗ್ಗೆ ವಿವರಿಸುತ್ತದೆ. ಅವುಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡರೆ ಸಾಕಷ್ಟು ಅನುಕೂಲವನ್ನೂ ಪಡೆಯಬಹುದು. ಸಂತೋಷದ ಜೀವನಕ್ಕಾಗಿ ನೀತಿ, ನಿಯಮ ಪಾಲನೆ ಕುರಿತು ಹೇಳುವುದರೊಂದಿಗೆ ವ್ಯಕ್ತಿಯನ್ನು ಖಿನ್ನತೆಯತ್ತ ತಳ್ಳುವ ಮುಖ್ಯ 4 ಸನ್ನಿವೇಶಗಳ ಬಗ್ಗೆಯೂ ಗರುಡ ಪುರಾಣ ಬೆಳಕು ಚೆಲ್ಲುತ್ತದೆ. ಅದರ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1. ಗರುಡ ಪುರಾಣದ ಪ್ರಕಾರ, ವೈವಾಹಿಕ ಜೀವನದ ಅಡಿಪಾಯ ನಂಬಿಕೆಯ ಮೇಲೆ ನಿಂತಿದೆ. ಆದ್ದರಿಂದ, ಗಂಡ ಮತ್ತು ಹೆಂಡತಿ ಇಬ್ಬರೂ ಯಾವುದೇ ಪರಿಸ್ಥಿತಿಯಲ್ಲಿರಲಿ ಅವರು ಎಂದಿಗೂ ಸಂಗಾತಿಗೆ ಮೋಸ ಆಗದಂತೆ ನೋಡಿಕೊಳ್ಳಬೇಕು. ಒಮ್ಮೆ ನೀವು ನಂಬಿಕೆಯನ್ನು ಮುರಿದರೆ ಅದನ್ನು ಮರಳಿ ತರಲು ಯಾವ ಕಾಲಕ್ಕೂ ಸಾಧ್ಯವಾಗುವುದಿಲ್ಲ ಮತ್ತು ವೈವಾಹಿಕ ಜೀವನವನ್ನು ಕೈಯ್ಯಾರೆ ಹಾಳುಮಾಡಿಕೊಂಡಂತೆ ಆಗುತ್ತದೆ. ಸಂಗಾತಿ ಮಾಡುವ ಮೋಸವು ವ್ಯಕ್ತಿಗೆ ಮಾನಸಿಕ ಆಘಾತವನ್ನು ಉಂಟುಮಾಡುವುದರಿಂದ ಅದು ಒಬ್ಬರನ್ನು ಖಿನ್ನತೆಯ ಕಡೆಗೆ ನೂಕಬಹುದು. ಬಹುತೇಕರು ಜೀವನದಲ್ಲಿ ಈ ಕಷ್ಟಕಾಲವನ್ನು ತಮಗರಿವಿಲ್ಲದಂತೆಯೇ ಆಹ್ವಾನಿಸಿಕೊಳ್ಳುತ್ತಾರೆ.
2. ಸಂತೋಷಕ್ಕೆ ಆರೋಗ್ಯಕರ ದೇಹವೂ ಪ್ರಮುಖ ಕಾರಣ. ದೇಹ ಆರೋಗ್ಯದಿಂದ ಇದ್ದಾಗ ಮನಸ್ಸು ಕೂಡಾ ಸಹಜವಾಗಿಯೇ ಸಂತಸದಿಂದ ತುಂಬಿಕೊಂಡಿರುತ್ತದೆ. ಆದರೆ ನೀವು ಅಥವಾ ನಿಮ್ಮ ಸಂಗಾತಿಗೆ ಯಾವುದೇ ಕಾಯಿಲೆ ಬಂದು ಹಾಸಿಗೆ ಹಿಡಿಯುವಂತಾದರೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಹೋದರೆ ಅಂತಹ ಪರಿಸ್ಥಿತಿಯು ವ್ಯಕ್ತಿಯನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಅದು ವ್ಯಕ್ತಿಯ ಖಿನ್ನತೆಗೂ ಕಾರಣವಾಗುತ್ತದೆ. ಆದ್ದರಿಂದ, ಇಂತಹ ಸನ್ನಿವೇಶ ಬಾರದಿರುವ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನ ಹರಿಸಬೇಕು. ಒಂದುವೇಳೆ ಕೈಮೀರಿ ಸಂಕಷ್ಟ ಎದುರಾದರೂ ಒಬ್ಬರಿಗೊಬ್ಬರು ಹೆಗಲಾಗಿ ನಿಂತು ಬದುಕು ಸಾಗಿಸಬೇಕು.
3. ಸಮಾಜದಲ್ಲಿ ಗೌರವ ಸಂಪಾದಿಸುವುದು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ಹೀಗೆ ನ್ಯಾಯಯುತ ಹಾದಿಯಲ್ಲಿ ಗೌರವ ಸಂಪಾದಿಸಿದವರು ಕೆಲವೊಮ್ಮೆ ಅನಾವಶ್ಯಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಕೆಲವರಿಂದ ಅವಮಾನ ಎದುರಿಸುವ ಸಂದರ್ಭ ಬರುತ್ತದೆ. ಯಾವ ತಪ್ಪು ಕೂಡಾ ಇಲ್ಲದೇ ನಿಂದನೆಗೆ ಒಳಗಾಗುವುದು ಯಾರನ್ನೇ ಆದರೂ ಮಾನಸಿಕವಾಗಿ ಕುಗ್ಗಿಸಬಲ್ಲದು. ಹೀಗಾಗಿ ಕೆಲವೊಂದು ಸನ್ನಿವೇಶದಲ್ಲಿ ನಾವು ಅನಾವಶ್ಯಕವಾಗಿ ನಿಂದನೆಗೆ ಒಳಗಾಗುತ್ತಿದ್ದೇವೆ ಎಂದು ಗೊತ್ತಾದಾಗ ಅದರ ಬಗ್ಗೆ ತೀರಾ ತಲೆಕೆಡಿಸಿಕೊಳ್ಳದೇ ವಿವಾದ ಅಥವಾ ಚರ್ಚೆಯನ್ನು ಹುಟ್ಟುಹಾಕದಿರುವುದು ಉತ್ತಮ. ಒಂದುವೇಳೆ ಅಂತಹವರ ಜತೆ ಗುದ್ದಾಟಕ್ಕೆ ಇಳಿದಲ್ಲಿ ಸುಖಾಸುಮ್ಮನೆ ಖಿನ್ನತೆಗೆ ಆಹ್ವಾನ ನೀಡಿದಂತಾಗುತ್ತದೆ.
4. ನೀವು ಯಶಸ್ಸನ್ನು ಪಡೆಯುವವರೆಗೂ ಪ್ರಯತ್ನಿಸುತ್ತಲೇ ಇರಿ. ಸೋಲಿಗೆ ಕಂಗೆಡಬೇಡಿ ಎಂದು ಬುದ್ಧಿವಾದ ಹೇಳಲಾಗುತ್ತದೆ. ಆದರೆ ಅದನ್ನು ಪಾಲಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಪದೇ ಪದೇ ವೈಫಲ್ಯಗಳ ನಂತರ ಕೆಲವರ ಮನಸ್ಸು ಖಿನ್ನತೆಯ ಕಡೆಗೆ ಹೋಗುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸುವ ಮಾರ್ಗವೆಂದರೆ ಮಾಡಿದ ಕೆಲಸವನ್ನು ವಿಶ್ಲೇಷಿಸುವುದು ಮತ್ತು ಕೊರತೆ ಎಲ್ಲಿದೆ ಎಂದು ಕಂಡುಹಿಡಿಯುವುದು. ಆ ಕೊರತೆಯನ್ನು ಸರಿಪಡಿಸಿ ಧನಾತ್ಮಕ ರೀತಿಯಲ್ಲಿ ಮತ್ತೊಮ್ಮೆ ಶ್ರಮಿಸಿದಾಗ ಮಾತ್ರ ಯಶಸ್ಸು ಬರಲು ಸಾಧ್ಯ. ಅದನ್ನು ಬಿಟ್ಟು ಕೊರಗುತ್ತಾ ಕುಳಿತರೆ ಖಿನ್ನತೆ ನಿಶ್ಚಿತ.
ಇದನ್ನೂ ಓದಿ: Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?
Garuda Purana: ಹುಟ್ಟಿಗೂ ಮೊದಲು ನಾವು, ನೀವು ಅನುಭವಿಸಿದ ಕಷ್ಟ ಎಂಥದ್ದು? ಗರುಡ ಪುರಾಣ ಹೇಳುವುದೇನು?
(Garuda Purana these 4 situations push a person towards depression)