ಪಿತೃಪಕ್ಷದ ಆಚರಣೆ, ಮಹತ್ವ, ಧರ್ಮ ಸಮ್ಮತವಾದ ಶಾಸ್ತ್ರೋಕ್ತ ವಿವರಗಳು ಇಲ್ಲಿವೆ
ಇದೇ ತಿಂಗಳ 30ನೇ ತಾರೀಕಿನಿಂದ ಪಿತೃಪಕ್ಷ ಆರಂಭವಾಗುತ್ತದೆ. ಇದನ್ನು ಮಹಾಲಯ ಎಂದು ಸಹ ಕರೆಯಲಾಗುತ್ತದೆ. ಒಂದು ಪಕ್ಷ ಪರ್ಯಂತವಾಗಿ ಇದರ ಆಚರಣೆ ಇರುತ್ತದೆ. ಒಂದು ಪಕ್ಷ ಅಂದರೆ ಹದಿನೈದು ದಿನಗಳು ಎಂದರ್ಥ. ಇನ್ನು ಈ ವರ್ಷ 2023ನೇ ಇಸವಿಯಲ್ಲಿ 30-9-2023ರಿಂದ 14-10-2023ರ ತನಕ ಪಿತೃ ಪಕ್ಷದ ಆಚರಣೆ ಇರುತ್ತದೆ.
ಇದೇ ತಿಂಗಳ 30ನೇ ತಾರೀಕಿನಿಂದ ಪಿತೃಪಕ್ಷ ಆರಂಭವಾಗುತ್ತದೆ. ಇದನ್ನು ಮಹಾಲಯ ಎಂದು ಸಹ ಕರೆಯಲಾಗುತ್ತದೆ. ಒಂದು ಪಕ್ಷ ಪರ್ಯಂತವಾಗಿ ಇದರ ಆಚರಣೆ ಇರುತ್ತದೆ. ಒಂದು ಪಕ್ಷ ಅಂದರೆ ಹದಿನೈದು ದಿನಗಳು ಎಂದರ್ಥ. ಇನ್ನು ಈ ವರ್ಷ 2023ನೇ ಇಸವಿಯಲ್ಲಿ 30-9-2023ರಿಂದ 14-10-2023ರ ತನಕ ಪಿತೃ ಪಕ್ಷದ ಆಚರಣೆ ಇರುತ್ತದೆ. ಶಾಸ್ತ್ರಗಳಲ್ಲಿ ಇರುವಂತೆ ಈ ಪಕ್ಷದ ಪರ್ಯಂತವಾಗಿ ಪಿತೃದೇವತೆಗಳ ಕಾರ್ಯವನ್ನು ಮಾಡಬೇಕು, ಅಂದರೆ ಪ್ರತಿ ದಿನವೂ ಮಾಡಬೇಕು. ಆದರೆ ಅನುಕೂಲ ಮತ್ತಿತರ ಕಾರಣಗಳಿಗಾಗಿ, ಕನಿಷ್ಠ ಒಂದು ದಿನವಾದರೂ ಕಾರ್ಯವನ್ನು ಮಾಡುವುದಕ್ಕೆ ಒಂದು ಅವಕಾಶ ನೀಡಲಾಗಿದೆ. ಯಾರು ಶಕ್ತರೋ ಮತ್ತು ಸಾಧ್ಯವಿದೆಯೋ ಅಂಥವರು ಪಿತೃ ಪಕ್ಷದಲ್ಲಿ ಎಲ್ಲ ದಿನವೂ ಮಾಡಿದರೆ ಉತ್ತಮ.
ನಿಮಗೆ ಗೊತ್ತಿರಲಿ, ಗತಿಸಿದ ಪಿತೃಗಳಿಗೆ ಮಾಡುವ ಕರ್ಮಗಳಿಂದ ಮುಂದಿನ ಪೀಳಿಗೆಗಳಿಗೆ ಸದ್ಬುದ್ಧಿ, ಆಯುರಾರೋಗ್ಯ ವೃದ್ಧಿ ಆಗುತ್ತದೆ ಎಂಬುದು ತತ್ವ. ಕಣ್ಣಿಗೆ ಕಾಣದ, ಯಾವುದೇ ವೈದ್ಯಕೀಯ ಶೋಧನೆಗೆ ಸಿಗದಂತಹ ಕಾಯಿಲೆಗಳು, ವ್ಯಾವಹಾರಿಕ ದುರ್ಗತಿಗಳೆಲ್ಲ ಪಿತೃ ಅನುಗ್ರಹ ಸಿಗದಿದ್ದರೆ ಉಂಟಾಗುತ್ತದೆ. ಪಿತೃಗಳಲ್ಲಿ ಎರಡೇ ವಿಚಾರ: ಒಂದು, ಆಗ್ರಹ, ಇನ್ನೊಂದು ಅನುಗ್ರಹ. ಪಿತೃಗಳು ಕರ್ಮಾದಿಗಳನ್ನು ಮಾಡಲು ಆಗ್ರಹಿಸುತ್ತಾರೆ. ಶ್ರದ್ಧಾ- ಭಕ್ತಿ ಪೂರ್ವಕವಾಗಿ, ಶಾಸ್ತ್ರೋಕ್ತವಾಗಿ ಮಾಡಿದರೆ ಅನುಗ್ರಹಿಸುತ್ತಾರೆ. ಮಾನವ ಮಾತ್ರರಿಗೆ ದೇವತೆಗಳಿಗಿಂತಲೂ ಪಿತೃಗಳ ಅನುಗ್ರಹ ಬಹಳ ಮುಖ್ಯ.
ಸಾಮಾನ್ಯವಾಗಿ ನಮ್ಮಲ್ಲಿ ಒಂದು ಅನುಕೂಲಸಿಂಧುವಾದ ಶಾಸ್ತ್ರ ಮುಂದುವರಿದಿದೆ. “ನಿಮ್ಮ ಮನೆಯಲ್ಲಿ ಯಾವಾಗ ಮಹಾಲಯ?” ಅಂತ ಕೇಳಿದರೆ, ಉತ್ತರವಾಗಿ- “ಅದು ನಮ್ಮ ಕುಟುಂಬದ ತರವಾಡು (ಮೂಲ) ಮನೆಯಲ್ಲಿ ಆಗುತ್ತದೆ. ಹಾಗಾಗಿ ನಾವೆಲ್ಲ ಮಾಡೋದಿಲ್ಲ. ಅವರು ಹೇಳಿಕೆ ಮಾಡಿದರೆ ಹೋಗ್ತೇವೆ, ಮಂತ್ರಾಕ್ಷತೆ ಪಡೆಯುತ್ತೇವೆ,” ಎನ್ನುತ್ತಾರೆ. ಕೆಲವೊಮ್ಮೆ ಹೇಳಿಕೆ ಇಲ್ಲದಿದ್ದರೂ ಹೋಗುವವರಿದ್ದಾರೆ. ಆದರೆ ಇದಕ್ಕೆಲ್ಲ ಹೇಳಿಕೆ ಬೇಕಾಗಿಲ್ಲ ಎಂಬುದು ಒಂದು ವಾಡಿಕೆಯಲ್ಲಿ ನಡೆದುಕೊಂಡು ಬಂದಿದೆ. ಅಂದರೆ ನಮ್ಮನ್ನು ಅವರು ಮಹಾಲಯ ಶ್ರಾದ್ಧಕಾಗಿ ಕರೆಯುವುದಿಲ್ಲ, ಆದ್ದರಿಂದ ನಾವು ಹೋಗುವುದಿಲ್ಲ ಎನ್ನಲಿಕ್ಕೆ ಬರುವುದಿಲ್ಲ. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದಲ್ಲಿ ಒಬ್ಬ ವ್ಯಕ್ತಿಗೆ ಕ್ಷಮೆ ಅಥವಾ ಪರಿಹಾರ ಎಂಬುದಿಲ್ಲ. ಅಂದ ಹಾಗೆ, ಇದು ಸರಿಯಾದದ್ದೇ, ಶಾಸ್ತ್ರ ಸಮ್ಮತವೇ ಎಂಬುದು ಹಲವರ ಪ್ರಶ್ನೆ.
ಇದನ್ನೂ ಓದಿ: ಪಿತೃಪಕ್ಷ ಆರಂಭವಾಗುವುದು ಯಾವಾಗ, ಯಾವ ದಿನಾಂಕದಂದು ಯಾವ ಶ್ರಾದ್ಧ? ಇಲ್ಲಿದೆ ಮಾಹಿತಿ
ನಿರ್ಣಯ ಸಿಂಧು, ಧರ್ಮ ಸಿಂಧು ಇತ್ಯಾದಿ ಗ್ರಂಥಗಳಲ್ಲಿ ಉಲ್ಲೇಖ ಸಕೃಣ್ಮಯ ಮಹಾಲಯ ಶ್ರಾದ್ಧವು ಸಾಂವತ್ಸರಿಕವಾಗಿ ಮಾಡಿಕೊಂಡು ಬರುವಂಥದ್ದು. ಇದನ್ನು ಯಾರು ಮಾಡಲೇ ಬೇಕು ಎಂಬುದಕ್ಕೊಂದು ನಿರ್ಣಯವಿದೆ. ಅನೇಕ ಗ್ರಂಥಗಳಲ್ಲಿ ಈ ಬಗ್ಗೆ ವಿವರಣೆ ಇದೆ. ನಿರ್ಣಯ ಸಿಂಧು, ಧರ್ಮ ಸಿಂಧು ಇತ್ಯಾದಿ ಗ್ರಂಥಗಳಲ್ಲಿ ಸವಿಸ್ತಾರ ವಿವರಣೆಗಳಿವೆ.
ಇದು ಉಭಯ ಕುಲದ ಪಿತೃಗಳ ಶ್ರಾದ್ಧ. ಅಂದರೆ ಎರಡು ಗೋತ್ರಗಳ ಪಿತೃಗಳ ಶ್ರಾದ್ಧ. ಎರಡು ಗೋತ್ರ ಎಂದರೆ, ಒಂದನೆಯದ್ದು ತಂದೆಯ ವಂಶ. ಎರಡನೆಯದ್ದು ತಾಯಿಯ ವಂಶ. ನಮ್ಮ ಜನ್ಮಕ್ಕೆ ಇವರೇ ಕಾರಣರು. ದೇಹ ಪ್ರಧಾನ ತಂದೆಯದ್ದಾದರೆ, ಅದರ ಪೋಷಣೆ ಮಾಡಿ, ಭೂಮಿಗೆ ಕರೆತರುವುದು ತಾಯಿ. ಆ ತಾಯಿಯು ಅವರ ವಂಶದ ದೇಹ ಪಡೆದವಳು. ತಂದೆಯೂ ಅವರ ವಂಶದ ದೇಹವಾದರೂ ಅದಕ್ಕೆ ಕಾರಣ ತಂದೆಯ ಮಾತೃ ವಂಶ. ಹಾಗಾಗಿ ಮಹಾಲಯದಲ್ಲಿ ಉಭಯ ಕುಲದ ಪಿತೃಗಳಿಗೆ ಪ್ರಾಧಾನ್ಯ. ಇದರ ಜತೆಗೆ ಬಂಧು- ಭಗಿನಿ, ಸಹೋದರ ಇತ್ಯಾದಿಗಳೂ ವಂಶಕ್ಕೆ (ಉಭಯ ಕುಲಕ್ಕೆ) ಸಂಬಂಧಿಸಿದವರಿಗೆ ಪಿಂಡ ಪ್ರದಾನ, ತರ್ಪಣಾದಿಗಳಿವೆ.
ಉಭಯ ಕುಲ ಪಿತೃಗಳ ಸ್ಮರಣೆ, ಇನ್ನೊಂದು ಜಿಜ್ಞಾಸೆ ಎಂದರೆ, ನಮ್ಮ ಮೂಲ ತರವಾಡಿನಲ್ಲಿ ನಡೆಯುತ್ತದೆ ಅಂದರೆ ಯಾರಾಗುತ್ತಾರೆ ಉಭಯ ಕುಲ ಪಿತೃಗಳು? ಮಹಾಲಯ ಮಾಡುವ ಕತೃವಿನ ಉಭಯ ಕುಲಕ್ಕೇ ಹೋಗುತ್ತದೆಯಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ಒಂದು ಕುಟುಂಬದಲ್ಲಿ ಅನೇಕ ಉಭಯ ಕುಲ ಗೋತ್ರಗಳು ಸೇರಿರುತ್ತವೆ. ಅವರೆಲ್ಲರನ್ನೂ ಒಂದೇ ಕಡೆ ಮಹಾಲಯ ಶ್ರಾದ್ಧದಲ್ಲಿ ಕರೆಯಲಾಗದು. ಅದೇನಿದ್ದರೂ ಬಂಧು ಪಿಂಡ ತರ್ಪಣದಲ್ಲೇ ಆಗುತ್ತದೆಯೇ ವಿನಾ, ಪ್ರಧಾನ ಪಿಂಡಗಳಾಗದು.
ಒಂದು ತಾಯಿಗೆ ನಾಲ್ಕು ಗಂಡು ಮಕ್ಕಳಿದ್ದರೆ, ಅದರಲ್ಲಿ ಒಬ್ಬನು ಮಹಾಲಯ ಮಾಡಿದರೆ ಉಭಯ ಕುಲಕ್ಕೆ ಸಲ್ಲುತ್ತದೆ. ಹಾಗಾಗಿ, ಆ ಸಹೋದರರೆಲ್ಲ ಮಾಡಬೇಕಾಗಿಲ್ಲ. ಅವರ ನಂತರದಲ್ಲಿ ಆ ಪೀಳಿಗೆಗಳು ಬೇರೆ ಬೇರೆ ಮಾಡಬೇಕು. ಅಂದರೆ ಮಾತೃವಂಶದ ಆಧಾರದಲ್ಲೇ ಉಭಯ ಕುಲ ಪಿತೃಗಳಾಗುತ್ತಾರೆ. ಇನ್ನೊಂದೆಡೆ ತಾಯಿ ಇರುವಲ್ಲಿಯವರೆಗೆ (ತಂದೆ ಗತಿಸಿದ್ದರೂ) ಮಹಾಲಯ ಮಾಡುವಂತಿಲ್ಲ. ಯಾಕೆಂದರೆ ಪಿತೃ ಸ್ಥಾನಕ್ಕೆ ಸಪತ್ನಿ ಸ್ಥಾನಕ್ಕೆ ಪಿಂಡ ಇಡುವಂತಿಲ್ಲ. ಅಂದರೆ ಮಹಾಲಯದಲ್ಲಿ ಸಪತ್ನೀಕರಿಗೆ ಮಾತ್ರ ಪಿಂಡದಾನ ಆಗಬೇಕು. ಚಿಕ್ಕಪ್ಪ ಗತಿಸಿದ್ದು, ಚಿಕ್ಕಮ್ಮ ಬದುಕಿದ್ದರೆ ಚಿಕ್ಕಪ್ಪನಿಗೆ ಪಿಂಡ ಹಾಕುವಂತಿಲ್ಲ. ಇಬ್ಬರೂ ಗತಿಸಿದ್ದರೆ ಮಾತ್ರ ಸಪತ್ನೀಕ ಕನಿಷ್ಠ ಪಿತರೌ ಎಂದು ಎರಡು ಪಿಂಡ ದಾನ ಆಗಬೇಕು. ಇದುವೇ ಮಹಾಲಯದ ನಿಜವಾದ ನಿರ್ಣಯ ಆಗುತ್ತದೆ ಎಂಬುದು ಗ್ರಂಥದ ಉಲ್ಲೇಖ.
ತ್ರಿಪಿಂಡೀಕರಣ ಶ್ರಾದ್ಧದಿಂದ ಸಾಯುಜ್ಯ ಅರ್ಥ ಇಷ್ಟೆ, ಕನ್ಯಾ ಮಾಸದಲ್ಲಿ ಪಿತೃಗಳು ಸ್ವರ್ಗಕ್ಕೆ ಹೋಗುವ ಸಮಯ. ರವಿ- ಚಂದ್ರರ ಮಧ್ಯದ ಆಕಾಶವೇ ಸ್ವರ್ಗ. ಆ ಸಮಯದಲ್ಲಿ ಸಪತ್ನೀಕ ಪಿತೃಗಳಿಗೆ ಪಿಂಡ ಪ್ರದಾನ, ತರ್ಪಣಾದಿ ಮಾಡಿದರೆ ಅವರು ಸಪತ್ನೀಕವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ನಿಯಮ. ಕೆಲವೊಮ್ಮೆ ಕೆಲವರು ಒಂದು ಪ್ರಶ್ನೆ ಕೇಳಬಹುದು. ಮದುವೆಯೇ ಆಗದವರಿದ್ದರೆ ಆಗ ಕ್ರಮ ಏನು ಎನ್ನುತ್ತಾರೆ. ಅದಕ್ಕೆ ಸನ್ಯಾಸೀ ಮಹಾಲಯ (ಬ್ರಹ್ಮಚಾರಿ) ಇದೆ. ಆ ದಿನ ಪಿಂಡ ಹಾಕಬೇಕು ಅಥವಾ ಆ ಮೃತರಿಗೆ ತ್ರಿಪಿಂಡೀಕರಣ ಶ್ರಾದ್ಧ ಮಾಡಿದಲ್ಲಿ ಸಾಯುಜ್ಯ ಪ್ರಾಪ್ತಿಯಾಗುತ್ತದೆ. ಅಂತಹವರಿಗೆ ಸಾಂವತ್ಸರಿಕ ಶ್ರಾದ್ಧ, ಮಹಾಲಯ ಶ್ರಾದ್ಧ ಬೇಕಾಗಿಲ್ಲ.
ಹಾಗೆಂದು ಉದ್ದೇಶಪೂರ್ವಕವಾಗಿ ಸಾಂವತ್ಸರಿಕ ಶ್ರಾದ್ಧ ನಿಲ್ಲಿಸುವುದಕ್ಕಾಗಿ, ಉದಾಸೀನರಾಗಿ ತ್ರಿಪಿಂಡೀಕರಣ ಶ್ರಾದ್ಧ ಮಾಡಿದರೆ ಪಿತೃ ಅನುಗ್ರಹವೂ ಇಲ್ಲ, ಫಲ ಶೂನ್ಯವೆ. ಅನಿವಾರ್ಯವಾಗಿದ್ದಾಗ, ಉತ್ತರಾಧಿಕಾರಿ ಶಾಶ್ವತವಾಗಿ ಅಂಗವಿಕಲತೆ ಬಂದಿದ್ದರೆ, ಮಹಾರೋಗ ಬಂದಿದ್ದಾಗ, ಇನ್ನು ಸಾಂತ್ಸರಿಕ ಶ್ರಾದ್ಧ ಮಾಡಲು ದೈಹಿಕವಾಗಿ ಸಾಧ್ಯವೇ ಇಲ್ಲವೆಂದಾಗ ತ್ರಿಪಿಂಡೀಕರಣ ಶ್ರಾದ್ಧ ಮಾಡಬಹುದಾಗಿದೆ ಹಾಗೂ ಮಾಡಬಹುದು. ಉತ್ತರ ಕ್ರಿಯೆಯಲ್ಲಿ ಸಪಿಂಡೀಕರಣ ಕ್ರಿಯೆ ಆದವರಿಗೆ ಸಾಂವತ್ಸರಿಕ ಮತ್ತು ಮಹಾಲಯವನ್ನು ಅವರ ಪೀಳಿಗೆಗಳು ಮಾಡಲೇಬೇಕು.
ಎಲ್ಲ ಜಾತಿ, ಧರ್ಮದವರ ಆಚರಣೆ
ಈ ಮಹಾಲಯವನ್ನು ಎಲ್ಲ ಜಾತಿ, ಧರ್ಮದವರು ಸಹ ಆಚರಿಸಬಹುದು. ಇನ್ನು ಗುರುಗಳು, ಪರಿಚಯಸ್ಥರು, ಸ್ನೇಹಿತರು ಹೀಗೆ ಯಾರಾದರೂ ಸರಿ, ಅವರಿಗೆ ಈ ಅವಧಿಯಲ್ಲಿ ಪಿಂಡ ಪ್ರದಾನವನ್ನು ಮಾಡಬಹುದು ಹಾಗೂ ಮಾಡಬೇಕು. ಏಕೆಂದರೆ, ನಮ್ಮ ಬದುಕು ಅನೇಕರಿಗೆ ಋಣಿಯಾಗಿದೆ. ಅವರೆಲ್ಲರಿಗೂ ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಸ್ಮರಣೆಯ ಮೂಲಕ ಕೃತಜ್ಞತೆ ಸಲ್ಲಿಸುವಂಥ ಅವಕಾಶ ಇದಾಗಿರುತ್ತದೆ.
ಘಾತ ಚತುರ್ದಶಿ
ಯಾರು ಅಪಮೃತ್ಯುವಿಗೆ ಗುರಿ ಆಗಿರುತ್ತಾರೋ ಅಂದರೆ ಪ್ರಾಣಿಗಳ ದಾಳಿ, ಕಡಿತ, ಆತ್ಮಹತ್ಯೆ, ಅಪಘಾತ ಮೊದಲಾದ ಅವಘಡಗಳಿಂದ ಸಾವನ್ನಪ್ಪಿರುತ್ತಾರೋ ಅಂಥವರಿಗೆ ಘಾತ ಚತುರ್ದಶಿಯಂದು ಪಕ್ಷ ಮಾಡಲಾಗುತ್ತದೆ.
ಅವಿಧವಾ ನವಮೀ
ಮುತ್ತೈದೆಯಾಗಿ ಸಾವನ್ನಪ್ಪಿದವರಿಗೆ ಅವಿಧವಾ ನವಿಮಿಯಂದು ಪಕ್ಷ ಮಾಡಲಾಗುತ್ತದೆ. ಎಲ್ಲಿಯವರೆಗೆ ಆಕೆಯ ಪತಿ ಜೀವಂತ ಇರುತ್ತಾರೋ ಅಲ್ಲಿಯವರೆಗೆ ಮಾತ್ರ ಮಾಡಬೇಕು ಎಂದು ಕೆಲವರ ಅಭಿಪ್ರಾಯ ಹಾಗೂ ಇದು ಶಾಶ್ವತವಾಗಿ ಮಾಡಿಕೊಂಡು ಬರಬೇಕು ಎಂಬುದು ಇನ್ನೂ ಕೆಲವರ ಅಭಿಪ್ರಾಯ. ಆ ಕುಟುಂಬದ ಹಿರಿಯರು, ಆಚಾರ್ಯ ಸ್ಥಾನದಲ್ಲಿ ಇರುವಂಥವರು ಹೇಳಿದ್ದನ್ನು ಅನುಸರಿಸಿದರೆ ಉತ್ತಮ.
ಶ್ವಾನಕ್ಕೂ ಪಕ್ಷದಲ್ಲಿ ಸ್ಮರಣೆ
ನಮ್ಮ ಹಿರಿಯರ ಕೃತಜ್ಞತಾ ಭಾವ ಯಾವ ಪರಿಯಲ್ಲಿ ಇದೆ ಅಂದರೆ, ಪಿಂಡದ ಮಂಡಲ ಎಂದು ಮಾಡುವುದರ ಹೊರಗೆ ಪಿಂಡ ಪ್ರಧಾನ ಮಾಡುವ ಮೂಲಕ ಮನೆಯಲ್ಲಿದ್ದು, ತೀರಿಕೊಂಡಂಥ ಶ್ವಾನ, ಅಂದರೆ ನಾಯಿಯನ್ನು ಸಹ ಸ್ಮರಣೆ ಮಾಡಲಾಗುತ್ತದೆ.
ಒಂದು ವರ್ಷದ ತನಕ ಪಕ್ಷ ಹುಟ್ಟುವುದಿಲ್ಲ
ಒಬ್ಬ ವ್ಯಕ್ತಿ ತೀರಿಕೊಂಡು ಒಂದು ವರ್ಷ ಕಳೆಯುವ ತನಕ ಪಕ್ಷ ಹುಟ್ಟುವುದಿಲ್ಲ. ಇಲ್ಲಿ ಒಂದು ವರ್ಷ ಅಂದರೆ ಸಂವತ್ಸರ ಪರ್ಯಂತ- ಸಾಂವತ್ಸರಿಕ ಶ್ರಾದ್ಧ ಕಳೆಯಲೇಬೇಕು. ಅದಕ್ಕೂ ಮುಂಚೆ ಆ ವ್ಯಕ್ತಿಗೆ ಪಕ್ಷ ಮಾಡುವುದಕ್ಕೆ ಬರಲ್ಲ.
ದಾನಕ್ಕೆ ಮಹತ್ವ
ಮಹಾಲಯ ಶ್ರಾದ್ಧದಲ್ಲಿ ದಾನಕ್ಕೆ ಮಹತ್ವ ಇದೆ. ಸಾಧ್ಯವಾದಷ್ಟೂ ಆಚಾರ್ಯರ ಮಾರ್ಗದರ್ಶನ, ಸಲಹೆ ಪಡೆದುಕೊಂಡು, ಶಾಸ್ತ್ರಸಮ್ಮತವಾಗಿ ಮಹಾಲಯ ಆಚರಣೆಯನ್ನು ಮಾಡುವುದಕ್ಕೆ ಪ್ರಯತ್ನಿಸಿ. ಪಿತೃಗಳ ಅನುಗ್ರಹವನ್ನು ಪಡೆದುಕೊಂಡು, ಮನೆಯಲ್ಲಿ ನೆಮ್ಮದಿ, ಸಂತೋಷ ಉತ್ತರೋತ್ತರ ಏಳಿಗೆಯನ್ನು ಪಡೆದುಕೊಳ್ಳಿ.
ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)
ಅಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ