ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುವ ಮಹಾಕುಂಭ ಮೇಳವು ಅತ್ಯಂತ ಪ್ರಮುಖ ಮತ್ತು ಆಧ್ಯಾತ್ಮಿಕ ಹಬ್ಬ. ಫೆಬ್ರವರಿ 13ರಿಂದ ಫೆಬ್ರವರಿ 26ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭವು ನಡೆಯಲಿದೆ. ಈ ಮಹಾಕುಂಭದ ಸಿದ್ಧತೆಗಳು ಭರದಿಂದ ಸಾಗಿವೆ. ಈ ಕುಂಭ ಮೇಳದಲ್ಲಿ ಲಕ್ಷಾಂತರ ಮಂದಿ ಭಕ್ತರು, ಸಾಧುಗಳು, ಸಂತರು, ನಾಗಾಸಾಧುಗಳು , ಅಘೋರಿಗಳು ಸೇರಿದಂತೆ ಲಕ್ಷಾಂತರ ಭಕ್ತರು ದೇಶ ವಿದೇಶಗಳಿಂದ ಬರುತ್ತಾರೆ. ಆದರೆ ಉತ್ತರ ಭಾರತದಂತೆ ದಕ್ಷಿಣದಲ್ಲೂ ಕುಂಭ ಮೇಳಗಳು ನಡೆಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಕರ್ನಾಟಕದ ಕೆಲವು ಭಾಗಗಳಲ್ಲಿ ನಡೆಯುವ ಕುಂಭ ಮೇಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ದಕ್ಷಿಣ ಭಾರತದ ಕುಂಭಮೇಳ ಎಂದೇ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿಗೆ ಕೊಪ್ಪಳ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳಿಂದ ಸಾವಿರಾರೂ ಭಕ್ತರು ಸಹ ರಥೋತ್ಸವಕ್ಕೆ ಆಗಮಿಸುತ್ತಾರೆ. ಹದಿನೈದು ದಿನ ನಡೆಯುವ ಜಾತ್ರೆಯಲ್ಲಿ ಸುಮಾರು 30 ಲಕ್ಷ ಭಕ್ತರಿಗೆ ಮಹಾದಾಸೋಹ ನಡೆಯುತ್ತದೆ. ದಾಸೋಹಕ್ಕಾಗಿ 400 ಕ್ವಿಂಟಾಲ್ ಮಾದಲಿ, 6 ಲಕ್ಷ ಶೇಂಗಾ ಹೋಳಿಗೆ, ರೊಟ್ಟಿ, ಪಲ್ಲೆ ಹೀಗೆ ಹಲವಾರು ಅಡುಗೆಗಳಿರುತ್ತವೆ. ಮಹಾ ದಾಸೋಹದ ಹಿನ್ನಲೆಯಲ್ಲಿಯೂ ಜಾತ್ರೆ ಬಹಳ ಜನಪ್ರಿಯವಾಗಿದೆ.
2025ರ ಜನವರಿಯಲ್ಲಿ ನಡೆಯುವ ಈ ಬಾರಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಡ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಆಗಮಿಸುವ ನಿರೀಕ್ಷೆ ಇದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಲೆಮಹದೇಶ್ವರ ಮಹಾ ಕುಂಭಮೇಳ ಅದ್ಧೂರಿಯಾಗಿ ನಡೆಯುತ್ತವೆ. ಜಿಲ್ಲೆಯ ಹಲವು ಗ್ರಾಮಗಳು ಮತ್ತು ಹೊರ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದಾರೆ. ಸಂಗಮದಲ್ಲಿ ಮಹಾಕುಂಭದಂದು ತೀರ್ಥ ಸ್ನಾನ ಮಾಡಿದರೆ ಮಾತಾಪಿತೃ ದೋಷ, ಭೂ ದೋಷ, ನಾಗ ದೋಷಗಳು ಪರಿಹಾರವಾಗಲಿವೆ ಎಂಬ ನಂಬಿಕೆ ಭಕ್ತರಲ್ಲಿದೆ. ತೀರ್ಥ ಸ್ನಾನದಲ್ಲಿ ಮಿಂದೆಳಲು ಸಾಧು ಸಂತರು, ನಾಗ ಸಾಧುಗಳು, ಅಘೋರಿಗಳು ಆಗಮಿಸುತ್ತಾರೆ.
ಮೈಸೂರು ಜಿಲ್ಲೆಯ ತಿ. ನರಸೀಪುರದ ತಿರುಮಕೂಡಲಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ 2025ರ ಫೆಬ್ರವರಿ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ ಸಂಗಮವಾದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಾಘಮಾಸದ ಪುಣ್ಯಸ್ನಾನಕ್ಕೆ ಬೇರೆ ಬೇರೆ ರಾಜ್ಯಗಳಿಂದ ಸಾವಿರಾರೂ ಭಕ್ತರು ಆಗಮಿಸುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ