ಬಂಗಾಳದ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ಹುಡುಗಿಗೆ ಕುಮಾರಿ ಪೂಜೆ; ಕೋಮು ಸಾಮರಸ್ಯದ ಸಂದೇಶ
ಸಾಂಪ್ರದಾಯಿಕವಾಗಿ ಬ್ರಾಹ್ಮಣ ಹುಡುಗಿಯರನ್ನು ಮಾತ್ರ 'ಕುಮಾರಿ' ಎಂದು ಪೂಜೆಗೆ ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ಮುಸ್ಲಿಂ ಹುಡುಗಿಯನ್ನು ಆಯ್ಕೆ ಮಾಡಲಾಗಿದೆ. ಕುಮಾರಿ ಪೂಜೆಯು ದುರ್ಗಾ ಪೂಜೆಯ ಪ್ರಮುಖ ಭಾಗವಾಗಿದೆ. ಈ ಸಮಯದಲ್ಲಿ 14 ವರ್ಷದೊಳಗಿನ ಹುಡುಗಿಯನ್ನು ದೇವತೆಯ ರೂಪದಲ್ಲಿ ಪೂಜಿಸಲಾಗುತ್ತದೆ.
ನವರಾತ್ರಿ ಉತ್ಸವ ಕರ್ನಾಟಕದಲ್ಲಿ ಎಷ್ಟು ಜನಪ್ರಿಯವೋ ಅಷ್ಟೇ ಪಶ್ಚಿಮ ಬಂಗಾಳದಲ್ಲೂ ಪ್ರಸಿದ್ಧವಾಗಿದೆ. ಬಂಗಾಳದಲ್ಲಿ ದುರ್ಗಾ ದೇವಿಯ ಆರಾಧನೆ ಹೆಚ್ಚಾಗಿದ್ದು, ಇಲ್ಲಿ ದುರ್ಗೆಯ ದೇವಸ್ಥಾನಗಳು ಹೆಚ್ಚಿರುವುದರಿಂದ ನವರಾತ್ರಿ ಹಬ್ಬವೂ ಬಹಳ ವಿಶೇಷವಾಗಿರುತ್ತದೆ. ಕೊಲ್ಕತ್ತಾದಲ್ಲಿ ಕೋಮು ಸೌಹಾರ್ದತೆಯ ಸಂದೇಶವನ್ನು ನೀಡುವ ಸಮುದಾಯದ ದುರ್ಗಾ ಪೂಜೆಯ ಸಂಘಟಕರು ಅಷ್ಟಮಿಯಂದು ಕುಮಾರಿ ಪೂಜೆಗೆ 8 ವರ್ಷದ ಮುಸ್ಲಿಂ ಬಾಲಕಿಯನ್ನು ಆಯ್ಕೆ ಮಾಡುವ ಮೂಲಕ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ನಿರ್ಧರಿಸಿದ್ದಾರೆ.
ಏನಿದು ಕುಮಾರಿ ಪೂಜೆ?:
ಕುಮಾರಿ ಪೂಜೆಯು ದುರ್ಗಾ ಪೂಜೆಯ ಪ್ರಮುಖ ಭಾಗವಾಗಿದೆ. ಈ ಸಮಯದಲ್ಲಿ 14 ವರ್ಷದೊಳಗಿನ ಹುಡುಗಿಯನ್ನು ಸಾಂಕೇತಿಕವಾಗಿ ದೇವತೆಯಾಗಿ ಪೂಜಿಸಲಾಗುತ್ತದೆ.
ಕುಮಾರಿ ಪೂಜೆ ಯಾವಾಗ ನಡೆಯುತ್ತದೆ?:
ಕುಮಾರಿ ಪೂಜೆಯನ್ನು ಸಾಮಾನ್ಯವಾಗಿ ಮಹಾ ಅಷ್ಟಮಿ ಪೂಜೆಯ ಕೊನೆಯಲ್ಲಿ ನಡೆಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕುಮಾರಿ ಪೂಜೆಯು ಕಾಳಿ ದೇವತೆ ಕೋಲಸುರನನ್ನು ಕೊಂದಿದ್ದರ ಸ್ಮರಣಾರ್ಥವಾಗಿದೆ.
ಇದನ್ನೂ ಓದಿ: Navaratri 2023: ನವರಾತ್ರಿಯ 9 ದಿನ ದುರ್ಗೆಯ ಯಾವ ಯಾವ ಅವತಾರಕ್ಕೆ ಪೂಜೆ ಸಲ್ಲಿಸಬೇಕು?
ದಂತಕಥೆಯ ಪ್ರಕಾರ ಕೋಲಸುರನು ಒಮ್ಮೆ ಸ್ವರ್ಗ ಮತ್ತು ಭೂಮಿಯನ್ನು ಆಕ್ರಮಿಸಿಕೊಂಡಿದ್ದನು. ಆಗ ಅಸಹಾಯಕರಾಗಿದ್ದ ದೇವತೆಗಳು ಸಹಾಯಕ್ಕಾಗಿ ಮಹಾಕಾಳಿಯನ್ನು ಸಂಪರ್ಕಿಸಿದರು. ಆಗ ಅವರ ಮನವಿಗೆ ಸ್ಪಂದಿಸಿ, ಕಾಳಿ ಮತ್ತೆ ಕನ್ಯೆಯ ರೂಪದಲ್ಲಿ ಹುಟ್ಟಿ ಕೋಲಸುರನನ್ನು ಕೊಂದಳು.
ಕುಮಾರಿ ಪೂಜೆಗೆ ಆಯ್ಕೆಯಾದ ಹುಡುಗಿ ಯಾರು?:
ಮೃತಿಕಾ ಕ್ಲಬ್‌ನ ಸರ್ವ ಮಹಿಳಾ ಸಮಿತಿಯು ಕೊಲ್ಕತ್ತಾದ ನ್ಯೂ ಟೌನ್‌ನ ನಿವಾಸಿ ನಫೀಸಾ ಅವರನ್ನು ಕುಮಾರಿ ಪೂಜೆಗೆ ‘ಕುಮಾರಿ’ ಆಗಿ ಆಯ್ಕೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಬ್ರಾಹ್ಮಣ ಹುಡುಗಿಯರನ್ನು ಮಾತ್ರ ‘ಕುಮಾರಿ’ ಎಂದು ಪೂಜೆಗೆ ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ಮುಸ್ಲಿಂ ಹುಡುಗಿಯನ್ನು ಆಯ್ಕೆ ಮಾಡಿರುವುದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ.
ತಮ್ಮ ಮೊದಲ ಪೂಜೆಯನ್ನು ಆಯೋಜಿಸುತ್ತಿರುವ ಮೃತಿಕಾ ಕ್ಲಬ್, ಮುಸ್ಲಿಂ ಹುಡುಗಿಯನ್ನು ಕುಮಾರಿಯಾಗಿ ಆಯ್ಕೆ ಮಾಡುವ ಮೂಲಕ ಎಲ್ಲರಿಗೂ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ರವಾನಿಸಲು ನಿರ್ಧರಿಸಿದ್ದಾರೆ. ಅನೇಕ ಮೃತಿಕಾ ಕ್ಲಬ್ ಸದಸ್ಯರು ಬೇಲೂರು ಮಠದ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ.
ಇದನ್ನೂ ಓದಿ: Navaratri 2023: ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಏಕೆ ಸೇವಿಸಬಾರದು?
1898ರಲ್ಲಿ ಸ್ವಾಮಿ ವಿವೇಕಾನಂದರು ಶ್ರೀನಗರದ ಖೀರ್ ಭವಾನಿ ದೇವಸ್ಥಾನದಲ್ಲಿ ತಮ್ಮ 4 ವರ್ಷದ ಮಗಳನ್ನು ದುರ್ಗೆಯ ರೂಪದಲ್ಲಿ ಪೂಜಿಸಲು ಅವಕಾಶ ನೀಡುವಂತೆ ದೋಣಿ ನಡೆಸುವ ಮುಸ್ಲಿಂ ವ್ಯಕ್ತಿಗೆ ಮನವಿ ಮಾಡಿದ್ದರು. ಮೃತಿಕಾ ಕ್ಲಬ್‌ನ ಕಾರ್ಯದರ್ಶಿ ಪ್ರಥಮಾ ಮುಖರ್ಜಿ, “ಸ್ವಾಮೀಜಿ 1 ಶತಮಾನಕ್ಕೂ ಹಿಂದೆ ಮುಸ್ಲಿಂ ಹುಡುಗಿಯನ್ನು ಪೂಜಿಸಲು ಸಾಧ್ಯವಾದರೆ, ನಾವು ಈಗ ಅದನ್ನು ಏಕೆ ಮಾಡಬಾರದು?” ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಕುಟುಂಬಗಳು ದುರ್ಗಾ ಪೂಜೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರೂ, ಆ ಸಮುದಾಯದ ಹುಡುಗಿಯನ್ನು ದೇವಿಯೆಂದು ಪೂಜಿಸುತ್ತಿರುವುದು ಇದೇ ಮೊದಲು.
ಕುಮಾರಿ ಪೂಜೆ ಹೇಗೆ ನಡೆಯುತ್ತದೆ?:
ಕುಮಾರಿ ಪೂಜೆಯಲ್ಲಿ ದುರ್ಗಾ ದೇವಿಯ ಆರಾಧನೆಯ ಸಮಯದಲ್ಲಿ ನಡೆಸುವ ಆಚರಣೆಗಳಂತೆಯೇ ಕುಮಾರಿಯನ್ನು ಪೂಜಿಸಲು ಅದೇ ಆಚರಣೆಗಳನ್ನು ಮಾಡಲಾಗುತ್ತದೆ. ಪವಿತ್ರ ಮಂತ್ರಗಳ ಪಠಣದ ಮೂಲಕ ಆ ಬಾಲಕಿಯನ್ನು ಶುದ್ಧೀಕರಿಸಲಾಗುತ್ತದೆ. ನಂತರ ಆರತಿ ಮಾಡಲಾಗುತ್ತದೆ.
ಇನ್ನಷ್ಟು ನವರಾತ್ರಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Mon, 16 October 23