Archer: ಬಿಲ್ಲುಗಾರಿಕೆಯಲ್ಲಿ ರಾಮ ಹೆಚ್ಚೋ, ಅರ್ಜುನ ಹೆಚ್ಚೋ?
ರಾಮನ ಕುರಿತಾಗಿ ವಾಲ್ಮೀಕಿ ಬರೆದಿರುವ ರಾಮಾಯಣದ ಕತೆಗಳು ನಮಗೆ ಮಾರ್ಗದರ್ಶಕವಾಗಿದೆ. ಇದ್ದರೆ ಹೀಗಿರಬೇಕು ಎನ್ನುವ ದಾರಿದೀಪವಾಗಿ ಉತ್ಸಾಹ, ಹುಟ್ಟಿಸುತ್ತದೆ. ಯಾರಿಗಾದರೂ ಉದಾಹರಣೆಯಾಗಿ ಒಳ್ಳೆಯದನ್ನು ಹೇಳಬೇಕು ಎನ್ನುವುದಕ್ಕೆ ಬಳಸುವುದು ರಾಮಾಯಣದ ಕಥೆಯನ್ನು ಅಣ್ಣ-ತಮ್ಮಂದಿರು ರಾಮ-ಲಕ್ಷ್ಮಣರಂತೆ ಇರಬೇಕು. ಭರತನಂತೆ ಪ್ರೀತಿ ಇರಬೇಕು, ನಾಲ್ಕು ಜನ ಗಂಡು ಮಕ್ಕಳಿದ್ದರೆ ದಶರಥನ ಅರಮನೆ ತರಹ.
ಧನುರ್ವಿದ್ಯೆಯಲ್ಲಿ ರಾಮ ಹೆಚ್ಚೋ, ಅರ್ಜುನ ಹೆಚ್ಚೋ ಹೀಗೊಂದು ಜಿಜ್ಞಾಸೆ ತುಂಬಿಕೊಂಡು, ಪ್ರಶ್ನೆಯನ್ನು ಶತಾವಧಾನಿ ಗಣೇಶ್ ಅವರಿಗೆ ಯಾರೋ ಕೇಳಿದಾಗ.. ಅದಕ್ಕೆ ಅವರು ಕೊಟ್ಟ ಉತ್ತರ ಮಾರ್ಮಿಕವಾಗಿತ್ತು. ರಾಮನೇ ಹೆಚ್ಚು. ಏಕೆಂದರೆ ರಾಮನೊಬ್ಬನೇ ಏಕಾಂಗಿಯಾಗಿ ಬಹಳಷ್ಟು ಸಾಹಸಗಳನ್ನು ಮಾಡಿದ್ದಾನೆ. ಆದರೆ ಅರ್ಜುನ ಕೃಷ್ಣನ ಜೊತೆಯಲ್ಲಿದ್ದು ಸಾಹಸಗಳನ್ನು ಮಾಡಿದ್ದಾನೆ. ಅಂದರೆ ಕೃಷ್ಣನ ಬೆಂಬಲವಿತ್ತು. ಎಲ್ಲರಿಗೂ ಗೊತ್ತಿರುವಂತೆ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಕುಸಿದು ಕುಳಿತಾಗ ಕೃಷ್ಣನು ಭಗವದ್ಗೀತೆ ಹೇಳುವುದರ ಮೂಲಕ ಅವನಿಗೆ ಉಪದೇಶ ಮಾಡುತ್ತಾನೆ. ಅರ್ಜುನನಿಗೆ ತನ್ನದೇ ಆದ ಒಂದು ಗುರಿ ಇತ್ತು. ಅರ್ಜುನನಿಗೆ ತಾನು ಜಗತ್ಪ್ರಸಿದ್ಧ ಬಿಲ್ಲುಗಾರನಾಗಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಬೇರೆಯವರಿಂದ ಹೊಗಳಿಸಿಕೊಳ್ಳಬೇಕು, ತಾನು ಮಾದರಿಯಾಗಬೇಕು.. ಹೀಗೆ ಅರ್ಜುನನಿಗೆ ವೈಯಕ್ತಿಕವಾಗಿ ಆಕಾಂಕ್ಷೆಗಳು ಇದ್ದವು.
ರಾಮನಿಗೆ ಹಾಗಲ್ಲ ಅವನು ಲೋಕ ರಕ್ಷಣೆಗೆಂದೇ ಅವತಾರ ತಾಳಿದವನು. ಲೋಕ ರಕ್ಷಣೆಯೊಂದೆ ಅವನ ಗುರಿ. ಇನ್ನೊಂದು ಮುಖ್ಯವಾದ ವಿಚಾರ ಎಂದರೆ, ರಾಮ ಏಕಪತ್ನೀವ್ರತಸ್ಥ ಅಂದರೆ ಒಬ್ಬಳೇ ಪತ್ನಿ. ಕಟ್ಟಿಕೊಂಡರೂ ಅವಳೇ, ಬಿಟ್ಟರೂ ಅವಳೇ. ಹೀಗಾಗಿ ಅವಳಿಗೆ ಒಂದು ಸಣ್ಣ ನೋವಾದರೂ ರಾಮ ಸಹಿಸುತ್ತಿರಲಿಲ್ಲ. ಕಾಗೆಯೊಂದು ಸೀತೆಗೆ ಕುಕ್ಕಿ ನೋವು ಮಾಡಿದಾಗ ರಾಮ ಕಾಗೆ ಮೇಲೆ ಬ್ರಹ್ಮಾಸ್ತ್ ವನ್ನೇ ಬಿಟ್ಟ. ಆದರೆ ಅರ್ಜುನ ದ್ರೌಪತಿಗೆ ತುಂಬಿದ ಸಭೆಯಲ್ಲಿ ವಸ್ತ್ರಾಪಹರಣ ಆಗುತ್ತಿದ್ದರೂ, ಅರ್ಜುನನ ಹತ್ತಿರ ಶಕ್ತಿಯುತ ವಾದ ಬಿಲ್ಲುಗಳು, ಅಕ್ಷೋಹಿಣಿಗಳಿದ್ದರೂ ಏನು ಮಾಡಕ್ಕೂ ಆಗಲಿಲ್ಲ.
ನಮ್ಮ ಶಕ್ತಿ ನಮ್ಮವರನ್ನು ಕಾಪಾಡಲು ಸಾಧ್ಯವಿರುವುದಿಲ್ಲ. ಸತ್ಯವನ್ನು ಕಾಪಾಡಲು ಆಗದಿದ್ದ ಆಯುಧಗಳು ಸಮಯಕ್ಕಾಗದೇ ಇದ್ದರೆ, ಯುದ್ದಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗುತ್ತದೆ. ಇಂತಹ ರಾಮನ ಕಥೆಯ ರಾಮಾಯಣ ಜೀವನದಲ್ಲಿ ಮನೋರಂಜನೆ ಹಾಗೂ ನೀತಿಯನ್ನು ನಮಗೆ ಕಲಿಸುತ್ತದೆ. ರಾಮಾಯಣ ನಮಗೆ ಹತ್ತಿರ ಆಗುವುದಕ್ಕೆ ಮುಖ್ಯ ಕಾರಣ ವಾಲ್ಮೀಕಿಯ ಆಲೋಚನಾ ಶಕ್ತಿ. ಅಂದರೆ ರಾಮನಂತೆ ಬದುಕಿ ಅಂತ ಹೇಳಲಿಲ್ಲ. ಸೀತೆ ಹಾಗೆ ಇರಿ ಅಂತ, ಲಕ್ಷ್ಮಣನ ಹಾಗೆ, ಅಥವಾ ಭರತನ ಪ್ರೀತಿಯ ಹಾಗೆ, ಹನುಮಂತನಂತೆ ಇರಬೇಕು ಎಂದು ಎಲ್ಲೂ ಹೇಳಲಿಲ್ಲ.
ರಾಮನಿಗೆ ಪ್ರಿಯವಾಗಿರುವುದು ಸತ್ಯ, ಸತ್ಯವನ್ನು ಅವನು ಎಷ್ಟು ಪ್ರೀತಿಸುತ್ತಿದ್ದನೆಂದರೆ ಒಮ್ಮೆ ಅವನು ಸೀತೆಯ ಹತ್ತಿರ ಮಾತನಾಡುವಾಗ, ಸೀತೆ ನನಗೆ ಸತ್ಯ ಪ್ರಿಯವಾದದ್ದು, ಅದು ನನ್ನ ಪ್ರಾಣಕ್ಕಿಂತಲೂ, ಹಾಗೂ ನಿನಗಿಂತ, ನಿನಗಿಂತ ಹೆಚ್ಚು ಪ್ರಿಯನಾದ ಲಕ್ಷ್ಮಣ ಅದಕ್ಕಿಂತ ‘ಸತ್ಯ’ ಪ್ರಿಯವಾದದ್ದು. ಸತ್ಯವನ್ನು ಬಿಟ್ಟು ಬದುಕಿರಲು ಸಾಧ್ಯವೇ ಇಲ್ಲ. ಸೀತೆಗಿಂತ, ಲಕ್ಷ್ಮಣನಿಗಿಂತ ಅಂದರೆ ಅವನನ್ನು ಪ್ರೀತಿಸುವಷ್ಟೇ ಅವನ ದೇಹದ ಅಂಗದಂತಿರುವ ಸೀತೆ, ಲಕ್ಷ್ಮಣ ರಿಗಿಂತ ಅಂತ ಅರ್ಥ.
ರಾಮನ ಕುರಿತಾಗಿ ವಾಲ್ಮೀಕಿ ಬರೆದಿರುವ ರಾಮಾಯಣದ ಕತೆಗಳು ನಮಗೆ ಮಾರ್ಗದರ್ಶಕವಾಗಿದೆ. ಇದ್ದರೆ ಹೀಗಿರಬೇಕು ಎನ್ನುವ ದಾರಿದೀಪವಾಗಿ ಉತ್ಸಾಹ, ಹುಟ್ಟಿಸುತ್ತದೆ. ಯಾರಿಗಾದರೂ ಉದಾಹರಣೆಯಾಗಿ ಒಳ್ಳೆಯದನ್ನು ಹೇಳಬೇಕು ಎನ್ನುವುದಕ್ಕೆ ಬಳಸುವುದು ರಾಮಾಯಣದ ಕಥೆಯನ್ನು ಅಣ್ಣ-ತಮ್ಮಂದಿರು ರಾಮ-ಲಕ್ಷ್ಮಣರಂತೆ ಇರಬೇಕು. ಭರತನಂತೆ ಪ್ರೀತಿ ಇರಬೇಕು, ನಾಲ್ಕು ಜನ ಗಂಡು ಮಕ್ಕಳಿದ್ದರೆ ದಶರಥನ ಅರಮನೆ ತರಹ.
ಹನುಮಂತನು ರಾಮನ ದಾಸನಾಗಿ ಎಲ್ಲರ ಮನ ಮನೆಗಳಲ್ಲಿ ಭಕ್ತಿಗೆ ಸೆಲೆಯಾಗಿದ್ದಾನೆ. ಹಳ್ಳಿಹಳ್ಳಿಗಳಲ್ಲೂ ಆಂಜನೇಯನ ಗುಡಿಯನ್ನು ಕಾಣಬಹುದು. ಹನುಮಂತನಂತೆ ನಾವು ದಾಸನಾಗಿ ಇರಬೇಕು. ಇಂತಹ ವಿಚಾರ ಮನದಲ್ಲಿ ಮೂಡುವುದು ರಾಮಾಯಣ ಕೇಳಿದವರಿಗೆಲ್ಲಾ ಅನಿಸುತ್ತದೆ. ರಾಮ ಮನುಷ್ಯನಾಗಿ ಹುಟ್ಟಿ ಬದುಕು ನಡೆಸಿ ದೈವತ್ವಕ್ಕೇರಿದ ಕಾರಣ ವಾಲ್ಮೀಕಿ ಬರೆದ ರಾಮಾಯಣ ವೇದ ಪ್ರಾಯವಾಯಿತು. ರಾಮಾಯಣದಲ್ಲಿ ರಾಮ ನಮಗೆ ಗುರುವು ಆಗಿ ದೇವರೂ ಆಗಿದ್ದಾನೆ.
ರಾಮಾಯಣದಲ್ಲಿ ಒಂದು ವಿಶೇಷ ಅಂದರೆ ರಾಮಾಯಣವನ್ನು ಬರೆದ ವಾಲ್ಮೀಕಿಯನ್ನು ಗುರುವಾದ ನಾರದರೇ ಹುಡುಕಿಕೊಂಡು ಹೋಗಿ ಮುಂದೆ ವಾಲ್ಮೀಕಿ ಯಿಂದ ರಾಮಾಯಣ ಬರೆಸುತ್ತಾರೆ. ಲೋಕೋತ್ತರರಾದ ನಾರದರಂಥ ಗುರುವಿಗೆ, ಅಸಾಮಾನ್ಯ ಶಿಷ್ಯ ವಾಲ್ಮೀಕಿ ದೊರೆತರು. ವಾಲ್ಮೀಕಿ ಪರ್ವತವಾದರೆ, ಅದರ ಕೆಳಗೆ ಹುಟ್ಟಿದ ರಾಮಾಯಣ ನದಿಯಾಗಿ ಹರಿದು ಬಂತು. ನದಿಗೆ ನೀರನ್ನು ಸುರಿದವರು ನಾರದರು. ರಾಮಾಯಣ ಬರೆಯಲು ಹೇಳಿದ ನಾರದರಿಗೆ, ವಾಲ್ಮೀಕಿಗಳು ಎಲ್ಲವೂ ಅಡಕವಾಗಿರುವಂಥ ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಾರೆ.
ಮಹಾಕಾವ್ಯವನ್ನು ಬರೆಯುವ ವಿಷಯಕ್ಕೆ ತಕ್ಕಂತೆ ಮಹರ್ಷಿಗಳೇ ಈಗಿನ ಕಾಲದಲ್ಲಿ, ಇದೇ ಲೋಕದಲ್ಲಿ ಅತ್ಯಂತ ಗುಣವಂತನು, ಧರ್ಮಾತ್ಮನು, ಸತ್ಚಾರಿತ್ರನು, ವಿದ್ವಾಂಸನು, ಎಲ್ಲರಿಗೂ ಪ್ರಿಯನಾದವನು, ಅವನ ಯುದ್ಧಕ್ಕೆ ದೇವತೆಗಳು ಹೆದರುವಂತಹನು, ಜಿತೇಂದ್ರಿಯನು, ಮಹಾಪರಾಕ್ರಮಿಯೂ ಸೇರಿದಂತೆ 16 ಗುಣವುಳ್ಳವರು ಎಲ್ಲಿದ್ದಾನೆ ಎಂಬ ಪ್ರಶ್ನೆ.
ಅಂತಹ ಮಹಾ ಪರಾಕ್ರಮಶಾಲಿ ಸಕಲ ಸದ್ಗುಣ ಸಂಪನ್ನ ರಾಮ ಇದ್ದಾನೆಂದು ಗೊತ್ತಿತ್ತು. ಆದರೂ ಗುರು ನಾರದರ ಬಾಯಿಂದಲೇ ಬರಲಿ ಅಂತ ಕೇಳಿದರು. ನಾರದರು ಇಂತಹ ಗುಣಗಳೆಲ್ಲ ಒಬ್ಬನಲ್ಲಿ ಇರುವುದು ಕಷ್ಟ. ಆದರೂ ನಮ್ಮಲ್ಲಿ ಒಬ್ಬ ಇದ್ದಾನೆ. ಯಾರೆಂದರೆ ಅವನು ಶ್ರೀರಾಮ ಎಂದು, ಇಡೀ ರಾಮನಿಗೆ ಸಂಬಂಧಿಸಿದ ಕಥೆಯನ್ನು ರಾಮಾಯಣದ ರೂಪದಲ್ಲಿ ಹೇಳುತ್ತಾ ಹೋದರು. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗ ತೋರಿಸಿದ ಮಹಾಪುರುಷ ಶ್ರೀರಾಮ. ಇಂಥ ರಾಮಾಯಣದ ಈ ಆಯಾಮ ನಮ್ಮೊಳಗೆ ಹೊಸಬೆಳಕು ಮೂಡಿಸುತ್ತದೆ. ನವ ಚೈತನ್ಯ ತುಂಬುತ್ತದೆ. (ಬರಹ: ವಾಟ್ಸಪ್ ಸಂದೇಶ)