ತುಳಸಿ ಮಾಲೆ ಧರಿಸಿದರೆ ಈರುಳ್ಳಿ, ಬೆಳ್ಳುಳ್ಳಿ ತಿನ್ನಬಾರದೇ? ಶಾಸ್ತ್ರಗಳು ಹೇಳುವುದೇನು ಗೊತ್ತಾ?
ಹಿಂದೂ ಧರ್ಮದಲ್ಲಿ ತುಳಸಿ ಮಾಲೆ ಅತ್ಯಂತ ಪವಿತ್ರ. ವಿಷ್ಣು ಮತ್ತು ಶ್ರೀಕೃಷ್ಣನ ಭಕ್ತಿ, ಶುದ್ಧತೆಯ ಸಂಕೇತವಿದು. ಇದನ್ನು ಧರಿಸುವುದರಿಂದ ಆಂತರಿಕ ಶಾಂತಿ ಹಾಗೂ ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಆದರೆ, ಮಾಲೆ ಧರಿಸಿದವರು ಈರುಳ್ಳಿ-ಬೆಳ್ಳುಳ್ಳಿ ಸೇರಿದಂತೆ ತಾಮಸಿಕ ಆಹಾರ, ಮಾಂಸ, ಮದ್ಯ ತ್ಯಜಿಸಿ ಸಾತ್ವಿಕ ಜೀವನ ನಡೆಸಬೇಕು. ಕೆಲವು ಧಾರ್ಮಿಕ ನಿಯಮಗಳನ್ನು ಪಾಲಿಸುವುದು ಅನಿವಾರ್ಯ.

ಹಿಂದೂ ಧರ್ಮದಲ್ಲಿ ತುಳಸಿ ಮಾಲೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಇದನ್ನು ವಿಷ್ಣು ಮತ್ತು ಶ್ರೀಕೃಷ್ಣನ ಮೇಲಿನ ಭಕ್ತಿ, ಶುದ್ಧತೆ ಹಾಗೂ ಸಾತ್ವಿಕ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಂಠಿಯಲ್ಲಿ ತುಳಸಿ ಮಾಲೆ ಧರಿಸುವುದರಿಂದ ಮನಸ್ಸಿಗೆ ಆಂತರಿಕ ಶಾಂತಿ ಸಿಗುವುದಲ್ಲದೆ, ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಆದರೆ, ಇದನ್ನು ಧರಿಸಿದ ನಂತರ ಕೆಲವು ಧಾರ್ಮಿಕ ನಿಯಮಗಳು ಹಾಗೂ ಆಹಾರ ಪದ್ಧತಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.
ತುಳಸಿ ಮಾಲೆ ಧರಿಸಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಬಹುದೇ?
ಹಿಂದೂ ಶಾಸ್ತ್ರಗಳ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ‘ತಾಮಸಿಕ ಆಹಾರ’ ಎಂದು ವರ್ಗೀಕರಿಸಲಾಗಿದೆ. ಇವು ದೇಹದಲ್ಲಿ ಕೋಪ, ಸೋಮಾರಿತನ ಮತ್ತು ನಕಾರಾತ್ಮಕ ಆಲೋಚನೆಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ಪ್ರೇಮಾನಂದ್ ಜಿ ಮಹಾರಾಜ್ ಹಾಗೂ ಅನಿರುದ್ಧಾಚಾರ್ಯ ಜಿ ಅವರಂತಹ ಸಂತರು ತುಳಸಿ ಮಾಲೆ ಧರಿಸಿದವರು ಸಂಪೂರ್ಣ ‘ಸಾತ್ವಿಕ ಆಹಾರ’ ಸೇವಿಸಬೇಕೆಂದು ಸಲಹೆ ನೀಡುತ್ತಾರೆ. ಹಾಗಂತ, ಈರುಳ್ಳಿ-ಬೆಳ್ಳುಳ್ಳಿ ಸೇವಿಸುವುದು ಮಹಾಪಾಪವೇನಲ್ಲ. ಒಂದು ವೇಳೆ ತಾಮಸಿಕ ಆಹಾರ ಸೇವಿಸಬೇಕಾಗಿ ಬಂದರೆ, ಊಟದ ಸಮಯದಲ್ಲಿ ಮಾಲೆಯನ್ನು ತೆಗೆದಿಟ್ಟು, ನಂತರ ಮುಖ-ಕೈಗಳನ್ನು ತೊಳೆದು ಮರಳಿ ಧರಿಸಬಹುದು. ಆದರೆ ವೈಷ್ಣವ ಸಂಪ್ರದಾಯದ ಪ್ರಕಾರ, ಒಮ್ಮೆ ಧರಿಸಿದ ಕಂಠಿಮಾಲೆಯನ್ನು ದೇಹದಿಂದ ಬೇರ್ಪಡಿಸದಿರುವುದೇ ಶ್ರೇಷ್ಠ.
ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!
ತುಳಸಿ ಮಾಲೆ ಧರಿಸುವಾಗ ತಪ್ಪದೇ ಪಾಲಿಸಬೇಕಾದ ಜಾಗ್ರತೆಗಳು:
ತುಳಸಿ ಮಾಲೆಯನ್ನು ಧರಿಸಿದ ನಂತರ ಮಾಂಸ, ಮೀನು, ಮೊಟ್ಟೆ ಮತ್ತು ಮದ್ಯದಂತಹ ತಾಮಸಿಕ ವಸ್ತುಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಮಾಲೆ ಮತ್ತು ರುದ್ರಾಕ್ಷಿ ಮಾಲೆಯನ್ನು ಒಟ್ಟಿಗೆ ಧರಿಸಬಾರದು. ಶೌಚಾಲಯ ಅಥವಾ ಸ್ಮಶಾನದಂತಹ ಅಶುದ್ಧ ಸ್ಥಳಗಳಿಗೆ ಹೋಗುವಾಗ ಮಾಲೆಯನ್ನು ತೆಗೆದಿಡುವುದು ಒಳ್ಳೆಯದು ಹಾಗೂ ಇದನ್ನು ಕೊಳಕು ಕೈಗಳಿಂದ ಸ್ಪರ್ಶಿಸಬಾರದು ಅಥವಾ ನೆಲಕ್ಕೆ ತಾಕಿಸಬಾರದು. ಮುಖ್ಯವಾಗಿ, ಸುಳ್ಳು ಹೇಳುವುದು, ಕೋಪ ಮತ್ತು ಅನೈತಿಕ ನಡವಳಿಕೆಯನ್ನು ತೊರೆದು, ಇದನ್ನು ಕೇವಲ ಆಭರಣವೆಂದು ಭಾವಿಸದೇ ಭಕ್ತಿಯ ಶ್ರೇಷ್ಠ ಸಂಕೇತವಾಗಿ ಗೌರವಿಸಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




