
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಗಾಜುವಾಕದಲ್ಲಿ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಣೇಶ ಮೂರ್ತಿಯ ಉತ್ಸವವು ಇದೀಗ ಭಾರಿ ಸಾರ್ವಜನಿಕ ಆಕ್ರೋಶ ಹಾಗೂ ಕಾನೂನು ವಿವಾದಕ್ಕೆ ಕಾರಣವಾಗಿದೆ. ಶ್ರೀನಗರ ಗ್ರೌಂಡ್‌ನಲ್ಲಿ 1ಕೋಟಿ ಬಳೆಗಳನ್ನು ಬಳಸಿ ನಿರ್ಮಿಸಲಾಗಿರುವ 89 ಅಡಿ ಎತ್ತರದ ಬೃಹತ್ ಮಹಾಗಣಪತಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಗಣೇಶೋತ್ಸವದ ಆವರಣದಲ್ಲಿ ಆಯೋಜಕರು ನಡೆಸುತ್ತಿರುವ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಸೆಟ್‌ಗಳ ವಸೂಲಿ ದಂಧೆ ಅಧಿಕಾರಿಗಳ ಕಣ್ಣು ಕೆಂಪಗಾಗಿಸಿದೆ.
ಗಾಜುವಾಕದ ಶ್ರೀನಗರ ಗ್ರೌಂಡ್‌ನಲ್ಲಿ 21 ದಿನಗಳ ಕಾಲ ಭಕ್ತರ ದರ್ಶನಕ್ಕಾಗಿ ಈ ಬೃಹತ್ ಗಣೇಶ ಮೂರ್ತಿಯನ್ನು ಇರಿಸಲು ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ದೇವರಿಗೆ ಉಚಿತ ದರ್ಶನವಿದ್ದರೂ, ಮಂಟಪದ ಎರಡೂ ಬದಿಗಳಲ್ಲಿ ಮನರಂಜನೆಗಾಗಿ ನಿರ್ಮಿಸಲಾದ ಸೆಟ್‌ಗಳಿಗೆ ಭಾರಿ ಧನ ಸಂಗ್ರಹ ಮಾಡಲಾಗುತ್ತಿದೆ. ಸಿನಿಮಾ ಸೆಟ್ ಮಾದರಿಯ ಯಮಲೋಕದ ಸೆಟ್‌ಗೆ 100 ರೂ. ಹಾಗೂ ಡೈನೋಸಾರ್ ಪಾರ್ಕ್‌ಗೆ 80 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಯಮಲೋಕದ ಸೆಟ್‌ಗೆ ಟಿಕೆಟ್ ಖರೀದಿಸಿದ ಭಕ್ತರಿಗೆ ಅಲ್ಲಿನ ಒಳಗಿನ ಮಾರ್ಗದ ಮೂಲಕ ಗಣೇಶನ ಶೀಘ್ರ (VIP) ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಮಾನ್ಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಭಕ್ತರು ಅನಿವಾರ್ಯವಾಗಿ ಟಿಕೆಟ್‌ಗಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಮೈದಾನದಲ್ಲಿ ಹಲವು ತಾತ್ಕಾಲಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆಯೋಜಕರು ಭಾರಿ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಉತ್ಸವದ ಹೆಸರಿನಲ್ಲಿ ಹಣ ವಸೂಲಿ ಹಾಗೂ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂಬ ನಿಯಮವಿದ್ದರೂ, ಈ ಮಂಟಪಕ್ಕೆ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜಂಟಿ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಹೈವೇ ಸರ್ವಿಸ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹಾಗೂ ಭದ್ರತಾ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದರಿಂದ, ತಪಾಸಣೆ ವೇಳೆ ಆಯೋಜಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಜಂಟಿ ಸಮಿತಿಯ ವರದಿ ಆಧರಿಸಿ ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ (GVMC) ಅಧಿಕಾರಿಗಳು ಆಯೋಜಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಯಮಲೋಕ, ಡೈನೋಸಾರ್ ಸೆಟ್‌ಗಳು ಹಾಗೂ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ನಿಗದಿತ ಗಡುವಿನೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು, ಇಲ್ಲವಾದಲ್ಲಿ ಸರ್ಕಾರಿ ಯಂತ್ರಾಂಗದ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾವು ಭಕ್ತಿಯಿಂದ ಈ ವ್ಯವಸ್ಥೆ ಮಾಡಿದ್ದೇವೆಯೇ ಹೊರತು ವ್ಯಾಪಾರಕ್ಕಾಗಿ ಅಲ್ಲ ಎಂದು ಆಯೋಜಕರು ವಾದಿಸಿದರೂ, ನಿಯಮ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ