ಭಾರತ vs ಪಾಕಿಸ್ತಾನ್ ಪಂದ್ಯ: 84 ಲಕ್ಷ ಟಿಕೆಟ್​ಗಳಿಗೆ ಬೇಡಿಕೆ!

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಆಯೋಜಿಸಲಿರುವ 2027ರ ಏಕದಿನ ವಿಶ್ವಕಪ್ ಅಕ್ಟೋಬರ್ 2 ರಿಂದ ಶುರುವಾಗಲಿದೆ. ಈ ಟೂರ್ನಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಕ್ಟೋಬರ್ 10 ರಂದು ನಡೆಯಲಿರುವ ಈ ಪಂದ್ಯದ ಟಿಕೆಟ್​ಗಾಗಿ ಬರೋಬ್ಬರಿ 84 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಭಾರತ vs ಪಾಕಿಸ್ತಾನ್ ಪಂದ್ಯ: 84 ಲಕ್ಷ ಟಿಕೆಟ್​ಗಳಿಗೆ ಬೇಡಿಕೆ!
IND vs PAK
Image Credit source: GettyImages

Updated on: Nov 03, 2026 | 8:30 AM

2027ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ದಿನಗಣನೆ ಆರಂಭವಾಗುವ ಮುನ್ನವೇ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಕ್ರೇಝ್ ಗಗನಕ್ಕೇರಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಬರೋಬ್ಬರಿ 84 ಲಕ್ಷಕ್ಕೂ ಹೆಚ್ಚು ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಪಡೆದ ಗುಂಪು ಹಂತದ ಪಂದ್ಯ ಎಂಬ ಹೆಗ್ಗಳಿಕೆಗೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಮುಖಾಮುಖಿ ಪಾತ್ರವಾಗಿದೆ. ಅಕ್ಟೋಬರ್ 10, 2027 ರಂದು ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಐತಿಹಾಸಿಕ ವಾಂಡರರ್ಸ್ ಕ್ರೀಡಾಂಗಣದಲ್ಲಿ ಈ ಜಿದ್ದಾಜಿದ್ದಿನ ಪಂದ್ಯ ಜರುಗಲಿದ್ದು, ಈ ಪಂದ್ಯಕ್ಕೆ ಇನ್ನೂ 11 ತಿಂಗಳು ಬಾಕಿ ಇದೆ. ಆದಾಗ್ಯೂ, ಪಂದ್ಯ ಆರಂಭಕ್ಕೂ ಮುನ್ನವೇ ಟಿಕೆಟ್ ಬೇಡಿಕೆಯು ಇಷ್ಟೊಂದು ಗಗನಕ್ಕೇರಿರುವುದು ವಿಶೇಷ.

ಕ್ರೀಡಾಂಗಣದ ಸಾಮರ್ಥ್ಯ ಮತ್ತು ಸವಾಲುಗಳು:

ಟಿಕೆಟ್‌ಗಾಗಿ ಕೋಟ್ಯಂತರ ಅಭಿಮಾನಿಗಳು ಮುಗಿಬೀಳುತ್ತಿದ್ದರೆ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ ಕೇವಲ 34,000 ಮಾತ್ರ ಇರುವುದು ಆಯೋಜಕರಿಗೆ ದೊಡ್ಡ ಸವಾಲಾಗಿದೆ. ಅಂದರೆ, ಲಭ್ಯವಿರುವ ಪ್ರತಿ ಸೀಟಿಗೂ ನೂರಾರು ಅಭಿಮಾನಿಗಳು ಪೈಪೋಟಿ ನಡೆಸುತ್ತಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಕಂಡುಕೇಳರಿಯದ ಟಿಕೆಟ್ ಕ್ರೇಝ್ ಸೃಷ್ಟಿಸಿದೆ.

ಫೈನಲ್ ಮ್ಯಾಚ್​ಗೆ ಕಡಿಮೆ ಕ್ರೇಝ್!

ವಿಶೇಷವೆಂದರೆ, 2027ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಕೂಡ ಜೋಹಾನ್ಸ್‌ಬರ್ಗ್‌ನ ಇದೇ ವಾಂಡರರ್ಸ್ ಸ್ಟೇಡಿಯಂನಲ್ಲೇ ನಡೆಯಲಿದೆ. ಆದರೆ, ಫೈನಲ್​ ಪಂದ್ಯಕ್ಕೆ ಸಲ್ಲಿಕೆಯಾಗಿರುವುದು 80 ಲಕ್ಷ ಟಿಕೆಟ್ ಅರ್ಜಿಗಳು ಮಾತ್ರ! ಅಂದರೆ, ಭಾರತ ಮತ್ತು ಪಾಕಿಸ್ತಾನ್ ನಡುವಣ ಲೀಗ್ ಹಂತದ ಪಂದ್ಯದ ಕ್ರೇಝ್, ಇಡೀ ಟೂರ್ನಿಯ ಮುಕುಟಪ್ರಾಯವಾದ ಫೈನಲ್ ಪಂದ್ಯದ ಜನಪ್ರಿಯತೆಯನ್ನೇ ಮೀರಿ ನಿಂತಿರುವುದು ಸ್ಪಷ್ಟವಾಗಿದೆ.

  • ಅಕ್ಟೋಬರ್ 2: ಏಕದಿನ ವಿಶ್ವಕಪ್ ಶುರು
  • ಅಕ್ಟೋಬರ್ 10: ಭಾರತ vs ಪಾಕಿಸ್ತಾನ್ ಪಂದ್ಯ
  • ನವೆಂಬರ್ 21: ಏಕದಿನ ವಿಶ್ವಕಪ್ ಫೈನಲ್ ಪಂದ್ಯ

ಟಿಕೆಟ್ ಸಿಗುವುದು ಹೇಗೆ?

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಟಿಕೆಟ್ ಬೇಡಿಕೆಯು ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ನೂರಾರು ಪಟ್ಟು ಹೆಚ್ಚಿರುವುದರಿಂದ, ಟಿಕೆಟ್‌ಗಳನ್ನು ಅದೃಷ್ಟದ ಆಧಾರದ ಮೇಲೆ ಹಂಚಿಕೆ ಮಾಡಲು ಐಸಿಸಿ ನಿರ್ಧರಿಸಿದೆ. ಸಂಪೂರ್ಣವಾಗಿ ಕಂಪ್ಯೂಟರೀಕೃತ ರೇಂಡಮೈಸ್ಡ್ ಬ್ಯಾಲೆಟ್ ಅಥವಾ ಲಾಟರಿ ಪ್ರಕ್ರಿಯೆಯ ಮೂಲಕ ಅರ್ಹ ಅಭಿಮಾನಿಗಳನ್ನು ಆಯ್ಕೆ ಮಾಡಲಾಗುತ್ತದೆ. ಐಸಿಸಿಯ ಅಧಿಕೃತ ಟಿಕೆಟ್ ಪೋರ್ಟಲ್‌ನಲ್ಲಿ ನವೆಂಬರ್ 21, 2026 ರವರೆಗೆ ಬ್ಯಾಲೆಟ್ ವಿಂಡೋ ತೆರೆದಿರಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: IPL 2027 ಹರಾಜಿಗೆ ಪಾಕ್ ವೇಗಿ ಎಂಟ್ರಿ? ಕೊನೆಗೂ ಮೌನ ಮುರಿದ ಅಮಿರ್

ಒಟ್ಟಾರೆಯಾಗಿ ಹೇಳುವುದಾದರೆ, 2027ರ ವಿಶ್ವಕಪ್ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯ ಬಾಕಿ ಇದ್ದರೂ, ಭಾರತ ಮತ್ತು ಪಾಕಿಸ್ತಾನf ನಡುವಿನ ಪಂದ್ಯವು ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದೆ. ಕ್ರೀಡಾಂಗಣದ ಮಿತಿ ಮತ್ತು ಟಿಕೆಟ್‌ಗಳ ಅಭಾವದ ನಡುವೆಯೂ ಕೋಟ್ಯಂತರ ಅಭಿಮಾನಿಗಳು ಈ ಮಹಾ ಮುಖಾಮುಖಿಯನ್ನು ಕಣ್ಣುಂಬಿಕೊಳ್ಳಲು ಕಾತರರಾಗಿದ್ದಾರೆ. ಐಸಿಸಿಯ ಡಿಜಿಟಲ್ ಲಾಟರಿ ಪ್ರಕ್ರಿಯೆಯಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಮತ್ತು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಅಂಗಳದಲ್ಲಿ ಯಾರು ಜಯಭೇರಿ ಬಾರಿಸಲಿದ್ದಾರೆ ಎಂಬುದನ್ನು ನೋಡಲು ಇಡೀ ಕ್ರೀಡಾಲೋಕವೇ ಕೌತುಕದಿಂದ ಕಾಯುತ್ತಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us