Asia Cup 2023: ಮೂವರ ಎಂಟ್ರಿ ಖಚಿತ; ಏಷ್ಯಾಕಪ್‌ಗೆ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದೆ ಭಾರತ
Asia Cup 2023: ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭ್ಮನ್ ಗಿಲ್ ಅವರಂತಹ ಆಟಗಾರರೊಂದಿಗೆ ಈ ಮೂವರು ಮೈದಾನಕ್ಕೆ ಪ್ರವೇಶಿಸಿದರೆ ಟೀಂ ಇಂಡಿಯಾಕ್ಕೆ ಗೆಲುವು ಖಚಿತ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ ಕ್ರಿಕೆಟ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಾಗ ಈ ಬಾರಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆಸ್ಟ್ರೇಲಿಯಾ ಎದುರು ಭಾರತ (IND vs AUS) ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆದರೆ ಇಡೀ ಪಂದ್ಯದಲ್ಲಿ ಭಾರತ ನಿರೀಕ್ಷಿಸಿದ ಪ್ರದರ್ಶನ ನೀಡಲಿಲ್ಲ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ, ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದ (Team India) ಹಲವು ಸ್ಟಾರ್ ಆಟಗಾರರು ಅಲಭ್ಯರಾಗಿದ್ದು. ತಂಡದ ಪ್ರಮುಖ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದರಿಂದ ಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಈ ಪ್ರಮುಖ ಆಟಗಾರರು ಇಂಜುರಿಯಿಂದ ಭಾಗಶಃ ಚೇತರಿಸಿಕೊಂಡಿದ್ದು ಟೀಂ ಇಂಡಿಯಾಕ್ಕೆ ಎಂಟ್ರಿಕೊಡುವ ತವಕದಲ್ಲಿದ್ದಾರೆ. ಹೀಗಾಗಿ ಇನ್ನು 74 ದಿನಗಳಲ್ಲಿ ಆರಂಭವಾಗಲಿರುವ ಏಷ್ಯಾಕಪ್‌ಗೆ (Asia Cup 2023) ಟೀಂ ಇಂಡಿಯಾ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲ್ಲಿದೆ.
ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ, ಭಾರತವು ತನ್ನ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾದ ಕೆಎಲ್ ರಾಹುಲ್ ಅವರನ್ನು ಮಿಸ್ ಮಾಡಿಕೊಂಡಿತ್ತು. ಅವರ ಹೊರತಾಗಿ, ಪ್ರಸ್ತುತ ಕ್ರಿಕೆಟ್ನ ಅತ್ಯುತ್ತಮ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಇರಲಿಲ್ಲ. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೆನ್ನೇಲುಬಾಗಿದ್ದ ಶ್ರೇಯಸ್ ಅಯ್ಯರ್ ಕೂಡ ಗಾಯಗೊಂಡಿದ್ದು, ಫೈನಲ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುತ್ತಿದ ರಿಷಬ್ ಪಂತ್ ಕೂಡ ಕಾರು ಅಪಘಾತದಿಂದಾಗಿ ಕ್ರಿಕೆಟ್ನಿಂದ ದೂರ ಉಳಿದಿದ್ದರು.
Asia Cup 2023: ಏಷ್ಯಾಕಪ್‌ನಲ್ಲಿ 3 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕ್! ಹೇಗೆ ಗೊತ್ತಾ?
ಏಷ್ಯಾಕಪ್‌ಗೆ ಹಳಬರ ಎಂಟ್ರಿ!
ಈ ನಾಲ್ವರು ಆಟಗಾರರು ಟೀಂ ಇಂಡಿಯಾದಲ್ಲಿದ್ದರೆ ಬಹುಶಃ ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲುತ್ತಿತ್ತು. ಆದರೆ ಈ ನಾಲ್ಕು ಆಟಗಾರರಲ್ಲಿ ಮೂವರು ಆಟಗಾರರು ಇಂಜುರಿಯಿಂದ ಚೇತರಿಸಿಕೊಂಡಿದ್ದು, ಏಷ್ಯಾಕಪ್‌ನಲ್ಲಿ ಆಡುವ ಸಾಧ್ಯತೆಗಳಿವೆ. ಐಪಿಎಲ್-2023ರಲ್ಲಿ ಕೆಎಲ್ ರಾಹುಲ್ ಇಂಜರಿಗೆ ತುತ್ತಾಗಿದ್ದರು. ಆದ್ದರಿಂದಲೇ ಅವರು ಫೈನಲ್ ಆಡಲಿಲ್ಲ. ಜಸ್ಪ್ರೀತ್ ಬುಮ್ರಾ ಅವರು ಕಳೆದ ವರ್ಷ ಬೆನ್ನುನೋವಿನಿಂದ ಬಳಲುತ್ತಿದ್ದರು, ಇದರಿಂದಾಗಿ ಅವರು ಟಿ20 ವಿಶ್ವಕಪ್, ಐಪಿಎಲ್ ಮತ್ತು ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅಯ್ಯರ್ ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದರು, ಈ ಕಾರಣದಿಂದಾಗಿ ಅವರು ಫೈನಲ್ನಿಂದ ಹೊರಗುಳಿದಿದ್ದರು.
ಇತ್ತೀಚೆಗೆ, ESPNcricinfo ವೆಬ್‌ಸೈಟ್ ತನ್ನ ವರದಿಯಲ್ಲಿ ಏಷ್ಯಾಕಪ್‌ಗೆ ಬುಮ್ರಾ ಮತ್ತು ಅಯ್ಯರ್ ಟೀಂ ಇಂಡಿಯಾ ಆಯ್ಕೆಗೆ ಲಭ್ಯವಿರಬಹುದು ಎಂದು ತಿಳಿಸಿತ್ತು. ಬುಮ್ರಾ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಅಯ್ಯರ್ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇಬ್ಬರೂ ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಏಷ್ಯಾಕಪ್ ವೇಳೆಗೆ ಇಬ್ಬರೂ ಫಿಟ್ ಆಗುವ ಸಾಧ್ಯತೆಗಳಿವೆ. ಇನ್ನು ಕನ್ನಡಿಗ ರಾಹುಲ್ ಕಳೆದ ತಿಂಗಳಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಕಳೆದ ಶುಕ್ರವಾರ ಎನ್ಸಿಎ ಸೇರಿಕೊಂಡಿರುವ ರಾಹುಲ್ ಕೂಡ ಏಷ್ಯಾಕಪ್ ವೇಳೆಗೆ ಫಿಟ್ ಆಗುವ ನಿರೀಕ್ಷೆ ಇದೆ.
ತಂಡಕ್ಕೆ ಬಲ ಬರಲಿದೆ
ಈ ಮೂವರು ಆಟಗಾರರು ಫಿಟ್ ಆಗಿ ತಂಡಕ್ಕೆ ಬಂದರೆ ಖಂಡಿತಾ ತಂಡಕ್ಕೆ ಬಲ ಬರಲಿದೆ. ರಾಹುಲ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದು, ಏಕದಿನ ಪಂದ್ಯಗಳಲ್ಲಿ ವಿಕೆಟ್‌ಕೀಪರ್ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಈ ಬಾರಿಯ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡತ್ತಿದ್ದು, ಅವರ ಆಗಮನದಿಂದ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಅನುಭವಿ ಬ್ಯಾಟ್ಸ್‌ಮನ್ ತಂಡಕ್ಕೆ ಸಿಕ್ಕಂತ್ತಾಗುತ್ತದೆ. ಬುಮ್ರಾ ಅವರ ಬೌಲಿಂಗ್ ಬಗ್ಗೆ ಜಗತ್ತಿಗೆ ತಿಳಿದಿದೆ, ಯಾವುದೇ ಬ್ಯಾಟ್ಸ್‌ಮನ್ ಅನ್ನು ತಮ್ಮ ಬಲೆಗೆ ಬೀಳಿಸುವ ತಂತ್ರ ಬುಮ್ರಾಗೆ ಚೆನ್ನಾಗಿ ತಿಳಿದಿದೆ. ಇನ್ನು ಅಯ್ಯರ್ ಅವರ ಆಗಮನದಿಂದ ತಂಡದ ಮಧ್ಯಮ ಕ್ರಮಾಂಕ ಬಲಗೊಳ್ಳಲಿದೆ. ಅಯ್ಯರ್ ಏಕದಿನ ಪಂದ್ಯಗಳಲ್ಲಿ ತಂಡದ ಮಧ್ಯಮ ಕ್ರಮಾಂಕವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.
ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭ್ಮನ್ ಗಿಲ್ ಅವರಂತಹ ಆಟಗಾರರೊಂದಿಗೆ ಈ ಮೂವರು ಮೈದಾನಕ್ಕೆ ಪ್ರವೇಶಿಸಿದರೆ ಟೀಂ ಇಂಡಿಯಾಕ್ಕೆ ಗೆಲುವು ಖಚಿತ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 am, Sat, 17 June 23
