Asia Cup 2023: ನಾವು ಭಿಕ್ಷೆ ಬೇಡುತ್ತಿಲ್ಲ…ಇಷ್ಟವಿಲ್ಲದಿದ್ರೆ ಭಾರತ ಬರಬೇಡಿ ಎಂದ ಅಫ್ರಿದಿ..!
India vs Pakistan: ಕ್ರಿಕೆಟ್‌ನಿಂದಾಗಿ ಭಾರತ-ಪಾಕಿಸ್ತಾನ ಸಂಬಂಧಗಳು ಯಾವಾಗಲೂ ಸುಧಾರಿಸಿವೆ. ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ಆಡುವುದನ್ನು ಭಾರತೀಯರು ನೋಡಲು ಬಯಸುತ್ತಾರೆ.
Asia Cup 2023: ಏಷ್ಯಾಕಪ್ 2023ರ ಕುರಿತಾದ ಭಾರತ-ಪಾಕಿಸ್ತಾನ್ (India vs Pakistan) ಕ್ರಿಕೆಟ್ ಮಂಡಳಿಗಳ ನಡುವಣ ವಾಕ್ಸಮರ ಮುಂದುವರೆದಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ನಿಂದ ಟೀಮ್ ಇಂಡಿಯಾ ಹಿಂದೆ ಸರಿಯಲಿದೆ ಎಂಬ ಬಿಸಿಸಿಐ ಅಧ್ಯಕ್ಷ ಜಯ್ ಶಾ ಅವರ ಹೇಳಿಕೆಯಿಂದ ಶುರುವಾದ ಈ ಚರ್ಚೆಯು ಇದೀಗ ಹೊಸ ಜಟಾಪಟಿಗೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ಏಷ್ಯಾಕಪ್ 2023 ರ ವಿಚಾರದಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಭಾರತೀಯ ಕ್ರಿಕೆಟ್ ಮಂಡಳಿ ವಿಭಿನ್ನ ನಿಲುವು ಹೊಂದಿದೆ. ಪಾಕ್ನಲ್ಲಿ ಟೂರ್ನಿ ಆಯೋಜಿಸಿದರೆ ಭಾರತ ಹಿಂದೆ ಸರಿಯಲಿದೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದ್ದು, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಟೂರ್ನಿಯನ್ನು ಆಯೋಜಿಸದೇ ತಟಸ್ಥ ಸ್ಥಳದಲ್ಲಿ ನಡೆಸಿದರೆ ಪಾಕ್ ತಂಡ ಕೂಡ ಭಾಗವಹಿಸಲ್ಲ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.
ಇದೀಗ ರಮೀಜ್ ರಾಜಾ ಅವರ ಹೇಳಿಕೆ ಪಾಕ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸಲು ಕ್ರಿಕೆಟ್ ಮಾಧ್ಯಮವಾಗಿದೆ. ಆದರೆ ಏಷ್ಯಾಕಪ್ ಅನ್ನು ಆಯೋಜಿಸಲು ತಮ್ಮ ದೇಶವು ಯಾರನ್ನೂ ಬೇಡಿಕೊಂಡಿಲ್ಲ. ನಮ್ಮ ಬಳಿ ಆಯೋಜನೆ ಹಕ್ಕು ಇರುವ ಕಾರಣದಿಂದಲೇ ಪಾಕ್ನಲ್ಲೇ ಟೂರ್ನಿ ನಡೆಸಲು ನಿರ್ಧರಿಸಿದ್ದೇವೆ. ಹೀಗಾಗಿ ಏಷ್ಯಾಕಪ್ ಆಯೋಜನೆಯಿಂದ ಪಾಕ್ ಹಿಂದೆ ಸರಿಯಬಾರದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್‌ನಿಂದಾಗಿ ಭಾರತ-ಪಾಕಿಸ್ತಾನ ಸಂಬಂಧಗಳು ಯಾವಾಗಲೂ ಸುಧಾರಿಸಿವೆ. ಭಾರತದಲ್ಲಿ ಪಾಕಿಸ್ತಾನ ಕ್ರಿಕೆಟ್ ಆಡುವುದನ್ನು ಭಾರತೀಯರು ನೋಡಲು ಬಯಸುತ್ತಾರೆ. ಈ ಬಾರಿ ಏಷ್ಯಾಕಪ್ ಆಯೋಜನೆಯ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಬದಲಾಗಿ ನಾವು ಟೂರ್ನಿ ಆಯೋಜಿಸಬೇಕೆಂದು ಯಾರನ್ನೂ ಬೇಡಿಕೊಳ್ಳುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಏಷ್ಯಾಕಪ್ 2023 ರ ಆಯೋಜನೆಗೆ ನಾವು ಪ್ರಾಮಾಣಿಕವಾಗಿ ಹೋಸ್ಟಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಭಾರತಕ್ಕೆ ಬರಲು ಇಷ್ಟವಿಲ್ಲದಿದ್ದರೆ ಬರಬೇಡಿ ಅಷ್ಟೇ. ಬದಲಾಗಿ ಏಷ್ಯಾಕಪ್‌ನ ಆತಿಥ್ಯವನ್ನು ಪಾಕಿಸ್ತಾನದಿಂದ ಕಸಿದುಕೊಂಡರೆ, ಪಾಕಿಸ್ತಾನ್ ತಂಡ ಕೂಡ ಟೂರ್ನಿಯಿಂದ ಹಿಂದೆ ಸರಿಯಲಿದೆ ಎಂದು ಅಫ್ರಿದಿ ಎಚ್ಚರಿಸಿದ್ದಾರೆ.
2023ರ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆದರೆ ಭಾರತ ತಂಡವು ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಮುಂದಾಗಿದೆ. ಅಲ್ಲದೆ ತಟಸ್ಥ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ. ಆದರೆ ಪಾಕ್ ಹೊರತುಪಡಿಸಿ ಬೇರೆ ಕಡೆ ಟೂರ್ನಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂದಾದರೆ, ಪಾಕಿಸ್ತಾನ್ ತಂಡವು ಏಷ್ಯಾಕಪ್ನಿಂದ ಹಿಂದೆ ಸರಿಯಲಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಹೀಗಾಗಿ ಮುಂಬರುವ ಏಷ್ಯಾಕಪ್ ಎಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಇನ್ನೂ ಕೂಡ ಯಾವುದೇ ಸ್ಪಷ್ಟತೆ ಇಲ್ಲ.