Asia Cup 2025: ಪವರ್ ಪ್ಲೇನಲ್ಲೇ ಪಂದ್ಯ ಮುಗಿಸಿದ ಟೀಂ ಇಂಡಿಯಾ
India vs UAE Asia Cup 2025: ಭಾರತ ಮತ್ತು ಯುಎಇ ನಡುವಿನ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಯುಎಇ ತಂಡ ಕೇವಲ 57 ರನ್ ಗಳಿಸಿತು. ಭಾರತ ತಂಡ 4.3 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿ ಸುಲಭ ಗೆಲುವು ದಾಖಲಿಸಿತು. ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಭಾರತ ತಂಡ ಏಷ್ಯಾಕಪ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (India vs UAE) ನಡುವಿನ ಏಷ್ಯಾಕಪ್ (Asia Cup 2025) ಪಂದ್ಯದಲ್ಲಿ ನಿರೀಕ್ಷಿತ ಫಲಿತಾಂಶವೇ ಹೊರಬಿದ್ದಿದೆ. ಪಂದ್ಯದ ಆರಂಭದಿಂದಲೂ ಯುಎಇ ಮೇಲೆ ಸವಾರಿ ಮಾಡಿದ ಭಾರತ ತಂಡ ಸಾಂಘಿಕ ಪ್ರದರ್ಶನ ನೀಡಿ ಸುಲಭ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಸಂಪೂರ್ಣ 20 ಓವರ್ಗಳನ್ನು ಆಡದೆ 13.1 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 57 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 4.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
ಆರಂಭದಲ್ಲೇ ತತ್ತರಿಸಿದ ಯುಎಇ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಭಾರತದ ಮಾರಕ ಬೌಲಿಂಗ್ ಮುಂದೆ ತರಗೆಲೆಗಳಂತೆ ಉದುರಿತು. ಪರಿಣಾಮವಾಗಿ ಇಡೀ ತಂಡವು ಕೇವಲ 57 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಎಂಟು ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿಯ ಗಡಿ ತಲುಪಲು ಸಾಧ್ಯವಾಗಲಿಲ್ಲ. ಯುಎಇ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಮೊಹಮ್ಮದ್ ವಾಸಿಮ್ ಮತ್ತು ಅಲಿಶಾನ್ ಮೊದಲ ವಿಕೆಟ್ಗೆ 26 ರನ್‌ಗಳ ಜೊತೆಯಾಟ ನೀಡಿದರು. ಇಲ್ಲಿ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಅಲಿಶಾನ್ (22 ರನ್) ಅವರ ವಿಕೆಟ್ ಉರುಳಿಸಿದರು. ಇದರ ನಂತರ, ಮೊಹಮ್ಮದ್ ಜೊಹೆಬ್ (2 ರನ್) ಕೂಡ ವರುಣ್ ಚಕ್ರವರ್ತಿ ಎಸೆತದಲ್ಲಿ 29 ರನ್ ಗಳಿಸಿ ಔಟಾದರು. ಒಂಬತ್ತನೇ ಓವರ್‌ನಲ್ಲಿ, ಕುಲ್ದೀಪ್ ಯಾದವ್ ತಮ್ಮ ಮ್ಯಾಜಿಕ್ ಪ್ರದರ್ಶಿಸಿ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದರು.
Asia Cup 2025: ಒಂದೇ ಓವರ್‌ನಲ್ಲಿ 3 ವಿಕೆಟ್ ಉರುಳಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಕುಲ್ದೀಪ್
ಕುಲ್ದೀಪ್, ದುಬೆ ಮ್ಯಾಜಿಕ್
ಇದರ ಪರಿಣಾಮವಾಗಿ ಯುಎಇ 50 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆ ದಾಳಿಗಿಳಿದ ಶಿವಂ ದುಬೆ ಆಸಿಫ್ ಖಾನ್ (2) ಅವರನ್ನು ಔಟ್ ಮಾಡುವ ಮೂಲಕ ಯುಎಇ ತಂಡಕ್ಕೆ ಆರನೇ ಹೊಡೆತ ನೀಡಿದರು. ನಂತರ ಅಕ್ಷರ್ ಪಟೇಲ್ ಸಿಮ್ರಂಜಿತ್ ಸಿಂಗ್ (1) ಅವರನ್ನು ಔಟ್ ಮಾಡುವ ಮೂಲಕ ಏಳನೇ ವಿಕೆಟ್ ಉರುಳಿಸಿದರು. ಶೀಘ್ರದಲ್ಲೇ ದುಬೆ, ಧ್ರುವ್ ಪರಾಶರ್ (1) ಮತ್ತು ಜುನೈದ್ ಸಿದ್ದಿಕಿ (2) ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಕುಲ್ದೀಪ್ ಹೈದರ್ ಅಲಿ (1) ಅವರನ್ನು ಔಟ್ ಮಾಡುವ ಮೂಲಕ ಯುಎಇ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಭಾರತ ಪರ ಕುಲ್ದೀಪ್ ಯಾದವ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರೆ, ಶಿವಂ ದುಬೆ 3 ವಿಕೆಟ್‌ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
4.3 ಓವರ್‌ಗಳಲ್ಲಿ ಗೆದ್ದ ಭಾರತ
ಗೆಲ್ಲಲು 52 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಅದರಲ್ಲೂ ಅಭಿಷೇಕ್ ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಪ್ರಾರಂಭಿಸಿದರು. ಆದಾಗ್ಯೂ ಅಭಿಷೇಕ್ ಶರ್ಮಾ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡಂತೆ 30 ರನ್‌ಗಳನ್ನು ಗಳಿಸಿ ಔಟಾದರು . ಅದೇ ಸಮಯದಲ್ಲಿ, ಶುಭ್ಮನ್ ಗಿಲ್ 8 ಎಸೆತಗಳಲ್ಲಿ 16 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ನಾಯಕ ಸೂರ್ಯಕುಮಾರ್ ಯಾದವ್ 1 ಎಸೆತವನ್ನು ಆಡಿ ಅದರಲ್ಲಿ ಸಿಕ್ಸರ್ ಬಾರಿಸಿದರು. ಇದರಿಂದಾಗಿ ಭಾರತ ಕೇವಲ 4.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Wed, 10 September 25
