Asia Cup 2022: ಮೈದಾನದಲ್ಲಿ ದುರ್ವತನೆ ತೋರಿದ ಆಟಗಾರರ ವಿರುದ್ಧ ಐಸಿಸಿ ಕ್ರಮ; ನೀಡಿದ ಶಿಕ್ಷೆ ಏನು ಗೊತ್ತಾ?
Asia Cup 2022: ಘಟನೆಯನ್ನು ಕುಲಂಕುಶವಾಗಿ ಪರಿಶೀಲಿಸಿದ ಐಸಿಸಿ ಈ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ. ಆರ್ಥಿಕ ರೂಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಉಭಯ ಆಟಗಾರರಿಗೂ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ.
ಏಷ್ಯಾಕಪ್ 2022 (Asia Cup 2022) ಆರಂಭದಿಂದಲೂ ಪ್ರತಿಯೊಬ್ಬ ಆಟಗಾರರೂ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಏಕೆಂದರೆ ಏಷ್ಯಾಕಪ್‌ನ ಪ್ರತಿಯೊಂದು ಪಂದ್ಯವೂ ಕುತೂಹಲದಿಂದ ಕೂಡಿದೆ. ಇದೇ ವೇಳೆ ಆಟಗಾರರ ಹಲವು ವಿವಾದಗಳೂ ವಿಡಿಯೋ ಮೂಲಕ ಮುನ್ನೆಲೆಗೆ ಬಂದಿವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಔಟಾದ ನಂತರ ಎದುರಿನಲ್ಲಿದ್ದ ಫರೀದ್ ಅಹ್ಮದ್‌ಗೆ ಬ್ಯಾಟ್ನಿಮದ ಹೊಡೆಯಲು ಮುಂದಾಗಿದ್ದರು. ಈ ವೇಳೆ ಎದುರಾಳಿ ತಂಡದ ಆಟಗಾರರು ಮಧ್ಯಪ್ರವೇಶಿಸಿದ್ದರಿಂದ ವಿಷಯಕ್ಕೆ ತೆರೆ ಬಿದ್ದಿತು. ಆ ಬಳಿಕ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯಿಂದ ಪಾಕ್ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಡಲಾಗಿತ್ತು.
19ನೇ ಓವರ್‌ನಲ್ಲಿ ಆಸಿಫ್ ಮತ್ತು ಫರೀದ್ ಮುಖಾಮುಖಿ
ಪಂದ್ಯ ಗೆಲ್ಲುವ ಪರಿಸ್ಥಿತಿಯಲ್ಲಿದ್ದಾಗ ಅಫ್ಘಾನಿಸ್ತಾನ ಬೌಲರ್ ಎಸೆತದಲ್ಲಿ ಆಸಿಫ್ ಅಲಿ ಔಟಾಗಿದ್ದರು. ಪಾಕಿಸ್ತಾನದ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ಆಸಿಫ್ ಅಲಿ ಮತ್ತು ಫರೀದ್ ಅಹ್ಮದ್ ನಡುವೆ ಈ ಘರ್ಷಣೆ ನಡೆಯಿತು. ಫರೀದ್ ಅಹ್ಮದ್ ಅವರ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಆಸಿಫ್ ಅಲಿ ಮುಂದಿನ ಎಸೆತದಲ್ಲಿ ಔಟಾದರು. ಆಸಿಫ್ ಔಟಾದ ಬಳಿಕ ಫರೀದ್ ಅಹ್ಮದ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದು, ಇದನ್ನು ಸಹಿಸಲಾಗದೆ ಆಸಿಫ್ ಅಲಿ ಈ ಬೌಲರ್ ಮೇಲೆ ಕೈ ಎತ್ತಿದ್ದರು.ಬಳಿಕ ಅಲ್ಲೆ ಇದ್ದ ಅಫ್ಘಾನ್ ಆಟಗಾರರು ಬೌಲರ್ನ ಸಹಾಯಕ್ಕೆ ಬಂದರು. ಬಳಿಕ ಅಷ್ಟಕ್ಕೆ ಸುಮ್ಮನಾಗದ ಆಸಿಫ್ ಅಲಿ ಬೌಲರ್‌ಗೆ ಹೊಡೆಯುವ ಯತ್ನ ಮಾಡಿ ತಾವು ಹಿಡಿದಿದ್ದ ಬ್ಯಾಟನ್ನು ಮೇಲಕ್ಕೆ ಎತ್ತಿದರು.
The fight between Asif Ali and the Afghan bowler? Very unfortunate
#PAKvAFG pic.twitter.com/45i0MJaBHs
— Rana Raheel Abbas (@RanaRaheelAbbas) September 7, 2022
ಈ ಇಬ್ಬರೂ ಆಟಗಾರರ ವರ್ತನೆಯನ್ನು ಗಮನಿಸಿದ್ದ ಹಲವು ಕ್ರಿಕೆಟ್ ಪಂಡಿತರು, ಪಾಕ್ ಬ್ಯಾಟರ್ನನ್ನು ಕ್ರಿಕೆಟ್ನಿಂದ ನಿಷೇಧಿಸಬೇಕೆಂಬ ಒತ್ತಾಯವನ್ನು ಐಸಿಸಿ ಮೇಲೆ ಹೇರಿದ್ದರು. ಆದರೆ ಘಟನೆಯನ್ನು ಕುಲಂಕುಶವಾಗಿ ಪರಿಶೀಲಿಸಿದ ಐಸಿಸಿ ಈ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ. ಆರ್ಥಿಕ ರೂಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಉಭಯ ಆಟಗಾರರಿಗೂ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಲಾಗಿದೆ.
ICC ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಆಸಿಫ್ ಉಲ್ಲಂಘಿಸಿದ್ದಾರೆ. ಈ ನಿಯಮ “ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಗೆಸ್ಚರ್ ಅನ್ನು ಬಳಸುವುದಕ್ಕೆ ಸಂಬಂಧಿಸಿದೆ. ಜೊತೆಗೆ ಫರೀದ್ ಕೂಡ ಆರ್ಟಿಕಲ್ 2.1.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಹೀಗಾಗಿ ಇಬ್ಬರಿಗೂ ಪಂದ್ಯ ಶುಲ್ಕದ ಶೇ.25ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆಸಿಫ್ ಅಲಿಯ ವರ್ತನೆ ಮೂರ್ಖತನ
ಆಸಿಫ್ ಅಲಿ ಅವರ ನಡವಳಿಕೆಯು ಮೂರ್ಖತನದಿಂದ ಕೂಡಿದ್ದು, ಅವರನ್ನು ತಕ್ಷಣವೇ ಏಷ್ಯಾಕಪ್‌ನಿಂದ ಹೊರಹಾಕಬೇಕು ಎಂದು ಶಫೀಕ್ ಸ್ಟಾನೆಕ್‌ಜಾಯ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ, ಬೌಲರ್‌ಗೆ ಸಂಭ್ರಮಿಸುವ ಹಕ್ಕಿದೆ ಆದರೆ ಯಾರ ಮೇಲೂ ಕೈ ಎತ್ತುವಂತಿಲ್ಲ, ಈ ರೀತಿ ನಡೆಯಬಾರದು ಎಂದು ಬರೆದುಕೊಂಡಿದ್ದರು. ಒಂದೆಡೆ ಅಫ್ಘಾನ್ ಆಟಗಾರರು ಹಾಗೂ ಅಧಿಕಾರಿಗಳು ಆಸಿಫ್ ಅಲಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಫ್ಘಾನಿಸ್ತಾನ ತಂಡದ ಮೇಲೆ ಆರೋಪ ಮಾಡುತ್ತಿದ್ದರು. ಶೋಯೆಬ್ ಅಖ್ತರ್ ಅಫ್ಘಾನ್ ತಂಡವನ್ನು ದುರಹಂಕಾರಿ ಎಂದು ಕರೆದಿದ್ದು, ಅಫ್ಘಾನ್ ವೇಗದ ಬೌಲರ್, ಆಸಿಫ್ ಅಲಿಯನ್ನು ಕೆರಳಿಸಿದರು ಇದರಿಂದಾಗಿ ಈ ಎಲ್ಲಾ ಘಟನೆ ಸಂಭವಿಸಿದೆ ಎಂದು ಅಖ್ತರ್ ತಿರುಗೇಟು ನೀಡಿದ್ದರು.
Published On - 2:35 pm, Fri, 9 September 22