AUS vs PAK: ಪಾಕ್ ವೇಗಿಗಳ ಕರಾರುವಾಕ್ ದಾಳಿ: ಅಲ್ಪ ಮೊತ್ತಕ್ಕೆ ಆಸ್ಟ್ರೇಲಿಯಾ ಆಲೌಟ್
Australia vs Pakistan: ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಪಡೆ ಜಯ ಸಾಧಿಸಿತ್ತು. ಇನ್ನು ಎರಡನೇ ಏಕದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ. ಇದೀಗ ಮೂರನೇ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಗೆಲ್ಲುವ ತಂಡ ಸರಣಿ ವಶಪಡಿಸಿಕೊಳ್ಳಲಿದೆ.
ಪರ್ತ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 140 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂ ಶಾರ್ಟ್ (22), ಜೇಕ್ ಪ್ರೇಸರ್ ಮೆಕ್ಗುರ್ಕ್ (7) ಬೇಗನೆ ಔಟಾದರೆ, ಆರೋನ್ ಹಾರ್ಡಿ 12 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಜೋಶ್ ಇಂಗ್ಲಿಸ್ 7 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಆ ಬಳಿಕ ಕೂಪರ್ ಕೊನೊಲಿ (7) ಗಾಯಗೊಂಡು ಮೈದಾನ ತೊರೆದರು. ಇನ್ನು ಅನುಭವಿ ಸ್ಟೋಯಿನಿಸ್ (8) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (0) ಪಾಕ್ ಬೌಲರ್ಗಳ ಮುಂದೆ ಸೆಟೆದು ನಿಲ್ಲುವಲ್ಲಿ ವಿಫಲರಾದರು.
ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಸಂಘಟಿತ ದಾಳಿಯೊಂದಿಗೆ ಆಸ್ಟ್ರೇಲಿಯನ್ನರ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್ಗಳು ಅಂತಿಮವಾಗಿ ಆತಿಥೇಯರನ್ನು 31.5 ಓವರ್ಗಳಲ್ಲಿ 140 ರನ್ಗಳಿಗೆ ಆಲೌಟ್ ಮಾಡಿದರು.
ಪಾಕಿಸ್ತಾನ್ ಪರ ಶಾಹೀನ್ ಶಾ ಅಫ್ರಿದಿ 32 ರನ್ ನೀಡಿ 3 ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಹ್ಯಾರಿಸ್ ರೌಫ್ 24 ರನ್ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಜೇಕ್ ಫ್ರೇಸರ್-ಮೆಕ್ಗುರ್ಕ್ , ಜೋಶ್ ಇಂಗ್ಲಿಸ್ (ನಾಯಕ) , ಕೂಪರ್ ಕೊನೊಲಿ , ಮಾರ್ಕಸ್ ಸ್ಟೋಯಿನಿಸ್ , ಆರೋನ್ ಹಾರ್ಡಿ , ಗ್ಲೆನ್ ಮ್ಯಾಕ್ಸ್‌ವೆಲ್ , ಶಾನ್ ಅಬಾಟ್ , ಆ್ಯಡಂ ಝಂಪಾ , ಸ್ಪೆನ್ಸರ್ ಜಾನ್ಸನ್ , ಲ್ಯಾನ್ಸ್ ಮೋರಿಸ್.
ಇದನ್ನೂ ಓದಿ: Champions Trophy 2025: ಭಾರತ ಬರಲ್ಲ… ಪಾಕಿಸ್ತಾನ್ ಮುಂದಿರುವ ಆಯ್ಕೆಗಳಾವುವು?
ಪಾಕಿಸ್ತಾನ್ ಪ್ಲೇಯಿಂಗ್ 11: ಸೈಮ್ ಅಯ್ಯೂಬ್ , ಅಬ್ದುಲ್ಲಾ ಶಫೀಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಕಮ್ರಾನ್ ಗುಲಾಮ್ , ಅಘಾ ಸಲ್ಮಾನ್ , ಇರ್ಫಾನ್ ಖಾನ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಹ್ಯಾರಿಸ್ ರೌಫ್ , ಮೊಹಮ್ಮದ್ ಹಸ್ನೈನ್.