ಪುತ್ತೂರ ಮುತ್ತು… ಐಪಿಎಲ್​ನಲ್ಲಿ ಆಟೋ ಡ್ರೈವರ್ ಪುತ್ರನ ಮಿಂಚಿಂಗ್

|

Updated on: Mar 24, 2025 | 7:46 PM

Vignesh Puthur: ಚೆನ್ನೈ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ 2025ರ ಮೂರನೇ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ವಿಘ್ನೇಶ್ ಪುತ್ತೂರು ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅದು ಸಹ ಚೊಚ್ಚಲ ಪಂದ್ಯದಲ್ಲೇ 4 ಓವರ್​ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿ. ಈ ಭರ್ಜರಿ ಪ್ರದರ್ಶನದೊಂದಿಗೆ ವಿಘ್ನೇಶ್ ಐಪಿಎಲ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಪುತ್ತೂರ ಮುತ್ತು... ಐಪಿಎಲ್​ನಲ್ಲಿ ಆಟೋ ಡ್ರೈವರ್ ಪುತ್ರನ ಮಿಂಚಿಂಗ್
Vignesh Puthur
Follow us on

ವಿಘ್ನೇಶ್ ಪುತ್ತೂರು… ಭಾನುವಾರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ವೀಕ್ಷಿಸಿದ ಪ್ರತಿಯೊಬ್ಬರಿಗೂ ಈ ಹೆಸರು ಪರಿಚಿತವಾಗಿರುತ್ತದೆ. ಏಕೆಂದರೆ ಮೊದಲ ಪಂದ್ಯದಲ್ಲೇ ವಿಘ್ನೇಶ್ ಮಣಿಕಟ್ಟಿನಲ್ಲೇ ಸ್ಪಿನ್ ಮೋಡಿ ಮಾಡಿದ್ದಾರೆ. ಅದು ಸಹ ಅನುಭವಿ ಆಟಗಾರರಾದ ರುತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾ ಅವರ ವಿಕೆಟ್ ಕಬಳಿಸುವ ಮೂಲಕ.

24 ವರ್ಷದ ವಿಘ್ನೇಶ್ ಪುತ್ತೂರು ಮೂಲತಃ ಕೇರಳದವರು. ಇನ್ನು ಅವರ ಹೆಸರಿಗೆ ಸೇರಿಕೊಂಡಿರುವ ಪುತ್ತೂರಿಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಬದಲಾಗಿ ಕೇರಳದಲ್ಲಿರುವ ಪುತ್ತೂರಿನ ಮುತ್ತು ಈ ವಿಘ್ನೇಶ್.

ಕುತೂಹಲಕಾರಿ ವಿಷಯ ಎಂದರೆ, ವಿಘ್ನೇಶ್ ಪುತ್ತೂರು ಈವರೆಗೆ ಒಂದು ಒಂದು ದೇಶೀಯ ಪಂದ್ಯವಾಡಿಲ್ಲ. ಅಂದರೆ ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಇದಾಗ್ಯೂ ಅವರು ಕಳೆದ ಬಾರಿಯ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ
RCBಯಲ್ಲಿ ಬ್ರಿಟಿಷ್ ಪಡೆ... ಸೋತು ಸುಣ್ಣವಾಗಲಿದೆ ಎಂದ ಗಿಲ್​ಕ್ರಿಸ್ಟ್
IPL 2025: ಐಪಿಎಲ್​ ಕಣದಲ್ಲಿದ್ದಾರೆ 13 ಕನ್ನಡಿಗರು
IPL 2025: ಬ್ಯಾನ್ ಬ್ಯಾನ್ ಬ್ಯಾನ್... ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
IPL 2025: ಐಪಿಎಲ್​ನಲ್ಲಿ 10 ನಿಮಯಗಳು ಬದಲಾವಣೆ

ಈ ವೇಳೆ ವಿಘ್ನೇಶ್ ಅವರ ವೃಸ್ಟ್​ ಸ್ಪಿನ್ ಸಾಮರ್ಥ್ಯವನ್ನು ಮುಂಬೈ ಇಂಡಿಯನ್ಸ್​ನ ಪ್ರತಿಭಾ ಅನ್ವೇಷಣಾ ಅಧಿಕಾರಿಗಳು ಗಮನಿಸಿದ್ದರು. ಅಲ್ಲದೆ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವಂತೆ ಯುವ ಆಟಗಾರನಿಗೆ ಸೂಚಿಸಿದ್ದರು.

ಅದರಂತೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ವಿಘ್ನೇಶ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬರೋಬ್ಬರಿ 30 ಲಕ್ಷ ರೂ.ಗೆ ಖರೀದಿಸಿತು. ಅಲ್ಲದೆ ಈ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಎಸ್​ಎ ಟಿ20 ಲೀಗ್​ ವೇಳೆ ಎಂಐ ಕೇಪ್​ ಟೌನ್​ನ ನೆಟ್ ಬೌಲರ್ ಆಗಿ ವಿಘ್ನೇಶ್ ಪುತ್ತೂರು ಅವರನ್ನು ಬಳಸಿಕೊಳ್ಳಲಾಗಿತ್ತು. ಅದು ಸಹ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಗರಡಿಯಲ್ಲಿ.

ರಶೀದ್ ಖಾನ್ ಗರಡಿಯಲ್ಲಿ ಪಳಗಿದ ವಿಘ್ನೇಶ್ ಪುತ್ತೂರು ತನ್ನ ಬೌಲಿಂಗ್​ ತಂತ್ರಗಾರಿಕೆಯನ್ನು ಮತ್ತಷ್ಟು ನೈಪುಣ್ಯಗೊಳಿಸಿದ್ದಾರೆ. ಈ ನಿಪುಣತೆಯೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದ ಯುವ ಸ್ಪಿನ್ನರ್, ಹಿರಿಯ ಆಟಗಾರರನ್ನೇ ತಡಕಾಡಿಸಿದ್ದಾರೆ.

ಪರಿಣಾಮ ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲೇ ವಿಘ್ನೇಶ್ ಅವರನ್ನು ಕಣಕ್ಕಿಳಿಸಲು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲ ಜಯವರ್ಧನೆ ನಿರ್ಧರಿಸಿದರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಣಕ್ಕಿಳಿದ ಯುವ ಸ್ಪಿನ್ನರ್ 3 ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತ ವಿಘ್ನೇಶ್ ಅವರು ಸ್ಪಿನ್ ಮೋಡಿ ಮಾಡುತ್ತಿದ್ದರೆ, ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡಗೌಟ್​ನಲ್ಲೂ ಚರ್ಚೆಗಳು ನಡೆದಿವೆ. ಏಕೆಂದರೆ ಸಿಎಸ್​ಕೆ ತಂಡವು ಈ ಬಾರಿ ಅಫ್ಗಾನಿಸ್ತಾನದ ಮಣಿಕಟ್ಟಿನ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಟ್ರಂಪ್ ಕಾರ್ಡ್​ ಆಗಿ ಬಳಸಿಕೊಳ್ಳಲಿದ್ದಾರೆ.

ಆದರೆ ಇದಕ್ಕೆ ಟಕ್ಕರ್ ಎಂಬಂತೆ ಅತ್ತ ಮುಂಬೈ ಇಂಡಿಯನ್ಸ್ ತಂಡದಕ್ಕೂ ವೃಸ್ಟ್ ಸ್ಪಿನ್ನರ್ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ಮೊದಲ ಪಂದ್ಯದಲ್ಲೇ ಅನುಭವಿ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟುವ ಮೂಲಕ. ಈ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಗಮನಿಸಿದ ಮಹೇಂದ್ರ ಸಿಂಗ್ ಧೋನಿ ಪಂದ್ಯದ ಬಳಿಕ ಯುವ ಸ್ಪಿನ್ನರ್​ನ ಬೆನ್ನು ತಟ್ಟಿದ್ದಾರೆ.

ಹೀಗೆ ಚೊಚ್ಚಲ ಪಂದ್ಯದಲ್ಲೇ ಸ್ಪಿನ್ ಮೋಡಿ ಮಾಡಿರುವ ವಿಘ್ನೇಶ್ ಪುತ್ತೂರು ಅವರ ಅತೀ ದೊಡ್ಡ ಕನಸು ತನ್ನ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದು. ಏಕೆಂದರೆ ಅವರ ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕರು. ಹಾಗೆಯೇ ತಾಯಿ ಕೆ.ಪಿ. ಬಿಂದು ಗೃಹಿಣಿ.

ಆರ್ಥಿಕ ಸಂಕಷ್ಟದ ನಡುವೆಯೇ ತಂದೆ-ತಾಯಿ ವಿಘ್ನೇಶ್ ಅವರ ಕ್ರಿಕೆಟ್ ಕನಸಿಗೆ ಆಧಾರಸ್ತಂಭವಾಗಿ ನಿಂತಿದ್ದರು. ಇದೀಗ ಐಪಿಎಲ್​ ಮೂಲಕ ಪೋಷಕರ ಹೊರೆ ಕೊನೆಗೊಳಿಸುವ ಇರಾದೆಯಲ್ಲಿದ್ದಾರೆ ಪುತ್ತೂರಿನ ಮುತ್ತು.

ಇದನ್ನೂ ಓದಿ: IPL 2025: ದ್ವಿತೀಯ ಪಂದ್ಯಕ್ಕಾಗಿ RCB ಬರೋಬ್ಬರಿ 1383 ಕಿ.ಮೀ ಪಯಣ

ಅಲ್ಲದೆ ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ. ಈ ಮೂಲಕ ತಂದೆ-ತಾಯಿಯ ಬಹುಕಾಲದ ಕನಸನ್ನು ನನಸು ಮಾಡಲು ಹೊರಟ್ಟಿದ್ದಾರೆ 24 ವರ್ಷದ ವಿಘ್ನೇಶ್ ಪುತ್ತೂರು.

 

Published On - 12:15 pm, Mon, 24 March 25