ಬಾಬರ್ ಆಝಂಗೆ ಮತ್ತೆ ಪಾಕ್ ತಂಡದ ನಾಯಕತ್ವ
Pakistan Test Captaincy Shake-Up: ಬಾಂಗ್ಲಾದೇಶ ವಿರುದ್ಧದ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾಯಕ ಶಾನ್ ಮಸೂದ್ ಅವರನ್ನು ತೆಗೆದುಹಾಕಲು ನಿರ್ಧರಿಸಿದೆ. ಮಸೂದ್ ಕಳಪೆ ನಾಯಕತ್ವದಿಂದಾಗಿ, ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ಮತ್ತೆ ಟೆಸ್ಟ್ ತಂಡದ ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ. ಬಾಬರ್ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಉಳಿದ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ (PSL) ಬಳಿಕ ಪಾಕಿಸ್ತಾನ ತಂಡ ಪ್ರಸ್ತತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಅಲ್ಲಿ ಟೆಸ್ಟ್ ಸರಣಿಯನ್ನಾಡುತ್ತಿರುವ ಪಾಕ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ತಂಡ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ 104 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಅವಮಾನಕರ ಸೋಲಿನಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಾನ್ ಮಸೂದ್ (Shan Masood) ಅವರನ್ನು ನಾಯಕತ್ವದಿಂದ ತೆಗೆದುಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಅಲ್ಲದೆ ಮಸೂದ್ ಸ್ಥಾನಕ್ಕೆ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಅವರನ್ನು ಮತ್ತೊಮ್ಮೆ ಟೆಸ್ಟ್ ತಂಡದ ನಾಯಕನಾಗಿ ನೇಮಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಬಾಬರ್ ಆಝಂಗೆ ನಾಯಕತ್ವ
ವಾಸ್ತವವಾಗಿ ಗಾಯದಿಂದಾಗಿ ಬಾಬರ್ ಆಝಂ ಮೊದಲ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಇದೀಗ ವರದಿಗಳ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಾಲ್ಕನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ಬಾಬರ್ ಆಝಂ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಬಹುದು. ಪಾಕಿಸ್ತಾನ ತಂಡದೊಳಗಿನ ಮೂಲಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕೆಲವು ಪ್ರಭಾವಿ ಅಧಿಕಾರಿಗಳು ಸಹ ಬಾಬರ್ ಅವರನ್ನು ಮತ್ತೆ ನಾಯಕರನ್ನಾಗಿ ನೇಮಿಸಲು ಮುಂದಾಗಿದ್ದು, ಅವರಿಗೆ ಮತ್ತೊಂದು ಅವಕಾಶ ನೀಡಲು ಯೋಚಿಸಿದ್ದಾರೆ. ಇದಕ್ಕೆ ಕಾರಣ ಶಾನ್ ಮಸೂದ್ ಅವರ ಕಳಪೆ ನಾಯಕತ್ವ. ಡಿಸೆಂಬರ್ 2023 ರಿಂದ, ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ 15 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಸೋತಿದೆ. ಹೀಗಾಗಿ ಪಿಸಿಬಿ ಅಧಿಕಾರಿಗಳು ಈಗ ಪಾಕಿಸ್ತಾನದ ಉಳಿದ ಏಳು ಟೆಸ್ಟ್ ಪಂದ್ಯಗಳಿಗೆ ಬಾಬರ್ ಅವರನ್ನು ನಾಯಕನನ್ನಾಗಿ ನೇಮಿಸಲು ಮುಂದಾಗಿದ್ದಾರೆ.
ಮೂಲಗಳ ಪ್ರಕಾರ, ‘ಬಾಬರ್ ಎರಡನೇ ಟೆಸ್ಟ್‌ನಲ್ಲಿ ಆಡಿ, ಉತ್ತಮ ಪ್ರದರ್ಶನ ನೀಡಿದರೆ, ಅವರಿಗೆ ತಂಡದ ನಾಯಕತ್ವ ಸಿಗುವುದು ಖಚಿತವಾಗಿದೆ. ಈ ಬಗ್ಗೆ ಮಂಡಳಿಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಬಾಬರ್ಗೆ ಮತ್ತೆ ನಾಯಕತ್ವ ನೀಡುವುದರ ಬಗ್ಗೆ ಯಾರಿಗೂ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ವರದಿಯಾಗಿದೆ.
ಭಾರತೀಯರಿಲ್ಲದ ವಿಶ್ವ ಏಕದಿನ ಪ್ಲೇಯಿಂಗ್ XI ಪ್ರಕಟಿಸಿದ ಬಾಬರ್ ಆಝಂ
ಬಾಬರ್ ನಾಯಕತ್ವ ಕಳೆದುಕೊಂಡಿದ್ದು ಹೀಗೆ
ಬಾಬರ್ 2019 ಮತ್ತು 2023 ರ ನಡುವೆ ಮೂರು ಸ್ವರೂಪಗಳ ತಂಡಗಳ ನಾಯಕತ್ವ ವಹಿಸಿದ್ದರು, ಆದರೆ 2023 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ನಂತರ ನಾಯಕತ್ವವನ್ನು ತ್ಯಜಿಸಬೇಕಾಯಿತು. 2024 ರ ವಿಶ್ವಕಪ್‌ಗಾಗಿ ಅವರನ್ನು ಟಿ20 ನಾಯಕರನ್ನಾಗಿ ಮರಳಿ ತರಲಾಯಿತು. ಆದರೆ ಕಳಪೆ ಟೂರ್ನಮೆಂಟ್ ನಂತರ ಮತ್ತೆ ನಾಯಕತ್ವವನ್ನು ತ್ಯಜಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




