Bangladesh vs England: ವಿಶ್ವ ಚಾಂಪಿಯನ್ನರನ್ನು ಮಕಾಡೆ ಮಲಗಿಸಿದ ಬಾಂಗ್ಲಾ ಟೈಗರ್ಸ್
Bangladesh vs England T20: ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ್ದ ಬಾಂಗ್ಲಾದೇಶ್, 2ನೇ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿತ್ತು.
Bangladesh vs England: ಹಾಲಿ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಹೀನಾಯ ಸೋಲುಣಿಸಿ ಬಾಂಗ್ಲಾದೇಶ್ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಢಾಕಾದ ಶೇರ್ ಈ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ 16 ರನ್ಗಳ ಜಯ ಸಾಧಿಸಿ ಬಾಂಗ್ಲಾದೇಶ್ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಇಂಗ್ಲೆಂಡ್ಗೆ ವೈಟ್ ವಾಶ್ ತಪ್ಪಿಸಿಕೊಳ್ಳುವ ಅವಕಾಶವಿತ್ತು. ಆದರೆ ಮೂರನೇ ಟಿ20 ಪಂದ್ಯದಲ್ಲೂ ಬಾಂಗ್ಲಾ ಆಟಗಾರರು ಪರಾಕ್ರಮ ಮೆರೆದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
57 ಎಸೆತಗಳನ್ನು ಎದುರಿಸಿದ ಲಿಟ್ಟನ್ ದಾಸ್ 1 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ 73 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಮ್ ಶಾಂಟೋ 36 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಬಾಂಗ್ಲಾದೇಶ್ ತಂಡವು 2 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತು.
159 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಶೂನ್ಯದೊಂದಿಗೆ ನಿರ್ಗಮಿಸಿದ್ದರು. ಇದಾಗ್ಯೂ ಮತ್ತೋರ್ವ ಆರಂಭಿಕ ಡೇವಿಡ್ ಮಲಾನ್ 47 ಎಸೆತಗಳಲ್ಲಿ 53 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಆಡಿದ ಜೋಸ್ ಬಟ್ಲರ್ 40 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ತಂಡವು 142 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಬಾಂಗ್ಲಾದೇಶ್ ತಂಡವು 16 ರನ್ಗಳ ಭರ್ಜರಿ ಜಯ ಸಾಧಿಸಿತು.
ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ್ದ ಬಾಂಗ್ಲಾದೇಶ್, 2ನೇ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿತ್ತು. ಇದೀಗ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ನರನ್ನು ವೈಟ್ವಾಶ್ ಮಾಡಿ ಸರಣಿ ಗೆದ್ದುಕೊಂಡಿದೆ. ಇತ್ತ ಟಿ20 ಕ್ರಿಕೆಟ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ಈ ಹೀನಾಯ ಸರಣಿ ಸೋಲಿನಿಂದ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಬಾಂಗ್ಲಾದೇಶ್ ಪ್ಲೇಯಿಂಗ್ 11: ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ರೋನಿ ತಾಲುಕ್ದಾರ್ , ನಜ್ಮುಲ್ ಹೊಸೈನ್ ಶಾಂಟೋ , ತೌಹಿದ್ ಹೃದಯೋಯ್ , ಶಮೀಮ್ ಹೊಸೈನ್ , ಮೆಹಿದಿ ಹಸನ್ ಮಿರಾಜ್ , ಶಾಕಿಬ್ ಅಲ್ ಹಸನ್ (ನಾಯಕ) , ತನ್ವಿರ್ ಇಸ್ಲಾಂ , ತಸ್ಕಿನ್ ಅಹ್ಮದ್ , ಮುಸ್ತಫಿಜುರ್ ರಹಮಾನ್ , ಹಸನ್ ಮಹ್ಮದ್.
ಇದನ್ನೂ ಓದಿ: Virat Kohli: ಸಚಿನ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಮುರಿದ ಕಿಂಗ್ ಕೊಹ್ಲಿ
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಡೇವಿಡ್ ಮಲನ್ , ಜೋಸ್ ಬಟ್ಲರ್ (ನಾಯಕ) , ಬೆನ್ ಡಕೆಟ್ , ಮೊಯಿನ್ ಅಲಿ , ಸ್ಯಾಮ್ ಕರ್ರನ್ , ಕ್ರಿಸ್ ವೋಕ್ಸ್ , ಕ್ರಿಸ್ ಜೋರ್ಡಾನ್ , ಆದಿಲ್ ರಶೀದ್ , ರೆಹಾನ್ ಅಹ್ಮದ್ , ಜೋಫ್ರಾ ಆರ್ಚರ್.