AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐಗೆ ಇಲ್ಲ ಆರ್‌ಟಿಐ ಬಿಸಿ!

BCCI vs RTI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ಸಾರ್ವಜನಿಕರಿಗೆ ಉತ್ತರದಾಯಿಯೇ? ಈ ದಶಕದ ಹಳೆಯ ಯಕ್ಷಪ್ರಶ್ನೆಗೆ ಕೇಂದ್ರ ಮಾಹಿತಿ ಆಯೋಗವು (CIC) ಕೊನೆಗೂ ಅಂತಿಮ ಉತ್ತರ ನೀಡಿದೆ. "ಬಿಸಿಸಿಐ ಯಾವುದೇ ಸರ್ಕಾರಿ ಸಂಸ್ಥೆಯಲ್ಲ, ಅದು ಸ್ವಾವಲಂಬಿ ಖಾಸಗಿ ಸಂಸ್ಥೆ" ಎಂಬ ಮಂಡಳಿಯ ವಾದವನ್ನು ಪುರಸ್ಕರಿಸಿರುವ ಆಯೋಗವು, ಬಿಸಿಸಿಐ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಟ್ಟಿದೆ.

ಬಿಸಿಸಿಐಗೆ ಇಲ್ಲ ಆರ್‌ಟಿಐ ಬಿಸಿ!
BCCI - RTI
ಝಾಹಿರ್ ಯೂಸುಫ್
|

Updated on:May 18, 2026 | 2:00 PM

Share

ಭಾರತದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಸೋಮವಾರ ಮಹತ್ವದ ತೀರ್ಪು ನೀಡಿದೆ. ನವ ದೆಹಲಿಯಲ್ಲಿರುವ ಕೇಂದ್ರ ಮಾಹಿತಿ ಆಯೋಗದ ಪ್ರಧಾನ ಕಚೇರಿಯಲ್ಲಿ ಇನ್​​ಫಾರ್ಮೇಷನ್ ಕಮಿಷನರ್ ಪಿ.ಆರ್. ರಮೇಶ್ ಅವರ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಬಿಸಿಸಿಐ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(h) ಅಡಿಯಲ್ಲಿ ಬರುವ ‘ಸಾರ್ವಜನಿಕ ಪ್ರಾಧಿಕಾರ’ (Public Authority) ಅಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟ ಮತ್ತು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ತೀರ್ಪಿನ ಹಿನ್ನೆಲೆಯೇನು?

2018 ರಲ್ಲಿ ಸಾರ್ವಜನಿಕರೊಬ್ಬರು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಆರ್‌ಟಿಐ (RTI) ಅರ್ಜಿ ಸಲ್ಲಿಸಿ ಬಿಸಿಸಿಐಗೆ ಸಂಬಂಧಿಸಿದ ಮಾಹಿತಿ ಕೇಳಿದ್ದರು. ಸಚಿವಾಲಯವು ಆ ಮಾಹಿತಿ ತನ್ನ ಬಳಿ ಇಲ್ಲ ಎಂದು ಹೇಳಿದಾಗ, ಈ ಪ್ರಕರಣ ಕೇಂದ್ರ ಮಾಹಿತಿ ಆಯೋಗದ (CIC) ಮೆಟ್ಟಿಲೇರಿತು. 2018ರಲ್ಲಿ ಸಿಐಸಿ, “ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ” ಎಂದು ಆದೇಶ ನೀಡಿದ್ದರು.

ಕೇಂದ್ರ ಮಾಹಿತಿ ಆಯೋಗ ನೀಡಿದ ಆ ಆದೇಶವನ್ನು ವಿರೋಧಿಸಿ, ಬಿಸಿಸಿಐ ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. “ನಾವು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ, ಹಾಗಾಗಿ ನಮಗೆ ಇದು ಅನ್ವಯಿಸುವುದಿಲ್ಲ” ಎಂದು ಬಿಸಿಸಿಐ ವಾದಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಅನ್ವಯ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಪ್ರಕರಣವನ್ನು ಮರಳಿ ಸಿಐಸಿಗೆ ಕಳುಹಿಸಿಕೊಟ್ಟಿತು.

ಅದರಂತೆ ಇದೀಗ ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಕೇಂದ್ರ ಮಾಹಿತಿ ಆಯೋಗವು ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳು ಮತ್ತು ಪ್ರಸ್ತುತ ನಿಯಮಗಳನ್ನು ಆಧರಿಸಿ  ಹೊಸ ತೀರ್ಪನ್ನು ನೀಡಿದೆ.

ವಿನಾಯಿತಿ ನೀಡಲು ಕಾರಣಗಳೇನು?

  • ಖಾಸಗಿ ಸಂಸ್ಥೆ: ಬಿಸಿಸಿಐ ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಒಂದು ಸ್ವಾಯತ್ತ ಖಾಸಗಿ ಸಂಸ್ಥೆಯಾಗಿದೆ. ಇದನ್ನು ಸಂವಿಧಾನದ ಮೂಲಕವಾಗಲಿ ಅಥವಾ ಸಂಸತ್ತಿನ ಯಾವುದೇ ವಿಶೇಷ ಕಾನೂನಿನ ಮೂಲಕವಾಗಲಿ ಸ್ಥಾಪಿಸಲಾಗಿಲ್ಲ ಎಂದು ಬಿಸಿಸಿಐ ವಕೀಲರು ವಾದ ಮಂಡಿಸಿದ್ದಾರೆ.
  •  ಸರ್ಕಾರದ ನಿಯಂತ್ರಣವಿಲ್ಲ: ಭಾರತೀಯ ಕ್ರಿಕೆಟ್ ಮಂಡಳಿಯ ಆಡಳಿತ, ಪದಾಧಿಕಾರಿಗಳ ಆಯ್ಕೆ ಅಥವಾ ಆಂತರಿಕ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
  • ಆರ್ಥಿಕ ಸ್ವಾವಲಂಬನೆ: ಬಿಸಿಸಿಐ ತನ್ನ ಆದಾಯವನ್ನು ಪ್ರಸಾರ ಹಕ್ಕುಗಳು (Media Rights), ಕಾರ್ಪೊರೇಟ್ ಪ್ರಾಯೋಜಕತ್ವಗಳು ಮತ್ತು ಟಿಕೆಟ್ ಮಾರಾಟದ ಮೂಲಕ ತಾನೇ ಗಳಿಸುತ್ತದೆ. ಇದು ಸರ್ಕಾರದ ಯಾವುದೇ ಅನುದಾನವನ್ನು ಅವಲಂಬಿಸಿಲ್ಲ ಎಂದು ತಿಳಿಸಲಾಗಿದೆ.
  • ತೆರಿಗೆ ವಿನಾಯಿತಿ ಧನಸಹಾಯವಲ್ಲ: ಸರ್ಕಾರ ನೀಡುವ ಸಾಮಾನ್ಯ ಕರ ವಿನಾಯಿತಿಗಳು ಅಥವಾ ಕಾನೂನುಬದ್ಧ ಸೌಲತ್ತುಗಳನ್ನು ಆರ್‌ಟಿಐ ಕಾಯ್ದೆಯಡಿ ‘ಸರ್ಕಾರದ ಗಣನೀಯ ಧನಸಹಾಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಕ್ರೀಡಾ ಆಡಳಿತ ಮಸೂದೆ:

ಈ ತೀರ್ಪು ಭಾರತದ ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯ ನಿಯಮಗಳಿಗೆ ಪೂರಕವಾಗಿದೆ. ಸರ್ಕಾರದ ನೇರ ಹಣಕಾಸು ನೆರವು ಪಡೆಯದ ಕ್ರೀಡಾ ಸಂಸ್ಥೆಗಳಿಗೆ ಆರ್‌ಟಿಐನಿಂದ ವಿನಾಯಿತಿ ನೀಡಲು ಈ ಮಸೂದೆಯಲ್ಲಿ ಅವಕಾಶವಿದೆ. ಆದಾಗ್ಯೂ, ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿ (NSF) ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಸುರಕ್ಷಿತ ಕ್ರೀಡಾ ನೀತಿಗಳು ಹಾಗೂ ಆಂತರಿಕ ನೈತಿಕ ಸಮಿತಿಗಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅದರ ಆಂತರಿಕ ಹಣಕಾಸು ದಾಖಲೆಗಳು ಮತ್ತು ಪತ್ರವ್ಯವಹಾರಗಳನ್ನು ಸಾರ್ವಜನಿಕರು ಆರ್‌ಟಿಐ ಮೂಲಕ ಪಡೆಯಲು ಸಾಧ್ಯವಿರುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಮಾಹಿತಿ ಆಯೋಗ (CIC) ನೀಡಿರುವ ಹೊಸ ತೀರ್ಪು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಕಾನೂನಾತ್ಮಕವಾಗಿ ಅತಿ ದೊಡ್ಡ ಸಮಾಧಾನ ತಂದಿದೆ. ತಾನು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಬಿಸಿಸಿಐ ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

ಈ ಆದೇಶದಿಂದಾಗಿ ಬಿಸಿಸಿಐ ತನ್ನ ಆಂತರಿಕ ಹಣಕಾಸು ವ್ಯವಹಾರಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಸಾರ್ವಜನಿಕರಿಂದ (ಆರ್‌ಟಿಐ) ದೂರ ಇಡಲು ಯಶಸ್ವಿಯಾಗಿದೆ. ಆದರೆ, ಕ್ರೀಡಾಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಬಯಸುವ ಕ್ರೀಡಾ ಪ್ರೇಮಿಗಳು ಮತ್ತು ಆರ್‌ಟಿಐ ಕಾರ್ಯಕರ್ತರಿಗೆ ಇದು ತೀವ್ರ ನಿರಾಶೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳಿವೆ.

Published On - 1:53 pm, Mon, 18 May 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More