AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐ ‘ತೂಗುಗತ್ತಿ’ಯಿಂದ ಪಾರಾದ ಗಂಭೀರ್-ಅಗರ್ಕರ್

ವಿದೇಶಿ ಪ್ರವಾಸಗಳಲ್ಲಿನ ಇತ್ತೀಚಿನ ಸರಣಿ ಸೋಲುಗಳ ಬೆನ್ನಲ್ಲೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಭವಿಷ್ಯದ ಕುರಿತು ಹಬ್ಬಿದ್ದ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಬಿಸಿಸಿಐ (BCCI) ತೂಗುಗತ್ತಿಯಿಂದ ಈ ಜೋಡಿ ಸದ್ಯಕ್ಕೆ ಸಂಪೂರ್ಣವಾಗಿ ಪಾರಾಗಿದ್ದಾರೆ.

ಬಿಸಿಸಿಐ 'ತೂಗುಗತ್ತಿ'ಯಿಂದ ಪಾರಾದ ಗಂಭೀರ್-ಅಗರ್ಕರ್
Gautam Gambhir - Ajit AgarkarImage Credit source: BCCI
ಝಾಹಿರ್ ಯೂಸುಫ್
|

Updated on: Sep 02, 2026 | 1:42 PM

Share

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧಿಕಾರಿಗಳ ಒಂದು ಪ್ರಮುಖ ವಿಭಾಗವು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಕಾರ್ಯವೈಖರಿ ಹಾಗೂ ಇಬ್ಬರ ನಡುವಿನ ಸಮನ್ವಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ, ಇವರಿಬ್ಬರನ್ನೇ 2027ರ ಏಕದಿನ ವಿಶ್ವಕಪ್‌ ವರೆಗೂ ತಮ್ಮದೇ ಹುದ್ದೆಗಳಲ್ಲಿ ಮುಂದುವರಿಸಲು ಬಿಸಿಸಿಐ ಒಲವು ತೋರಿದೆ. ಯುಕೆ ಪ್ರವಾಸದಲ್ಲಿನ ಹಿನ್ನಡೆಗಳ ಹೊರತಾಗಿಯೂ, ಯಾವುದೇ ತರಾತುರಿಯ ನಿರ್ಧಾರಗಳನ್ನು ಕೈಗೊಳ್ಳದೆ ತಂಡದಲ್ಲಿ ದೀರ್ಘಾವಧಿ ಸ್ಥಿರತೆ ಕಾಯ್ದುಕೊಳ್ಳಲು ಬಿಸಿಸಿಐ ಮುಂದಾಗಿದೆ.

ಗಂಭೀರ್ ಸ್ಥಾನ ಸುರಕ್ಷಿತ:

ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಈಗಾಗಲೇ 2027ರ ವಿಶ್ವಕಪ್ ಮುಕ್ತಾಯದವರೆಗೂ (ಡಿಸೆಂಬರ್ 31, 2027) ಬಿಸಿಸಿಐನೊಂದಿಗೆ ಅಧಿಕೃತ ಒಪ್ಪಂದ ಹೊಂದಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಅವರ ಬದಲಾವಣೆಯ ಕುರಿತು ಚರ್ಚೆ ನಡೆದಿದ್ದರೂ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಒಪ್ಪಂದದ ಅವಧಿಯು ಮುಕ್ತಾಯದ ಹಂತದಲ್ಲಿದ್ದು, ಬಿಸಿಸಿಐ ಅವರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿ 2027ರ ಮೆಗಾ ಟೂರ್ನಿಯವರೆಗೂ ಅವರನ್ನೇ ಉಳಿಸಿಕೊಳ್ಳಲು ಮುಂದಾಗಿದೆ.

ಈ ಜೋಡಿಯನ್ನೇ ಬೆಂಬಲಿಸಲು ಕಾರಣಗಳೇನು?

ಯಶಸ್ವಿ ಟ್ರ್ಯಾಕ್ ರೆಕಾರ್ಡ್: ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತು ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡವು 2026ರ ಟಿ20 ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರಮುಖ ಐಸಿಸಿ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ.

ಪರಿವರ್ತನೆಯ ಹಂತ: ಭಾರತ ತಂಡದಲ್ಲಿನ ಹಿರಿಯ ಆಟಗಾರರ ನಿವೃತ್ತಿ ಮತ್ತು ಯುವ ಆಟಗಾರರ ಸೇರ್ಪಡೆಯಂತಹ ಕಠಿಣ ನಿರ್ಧಾರಗಳನ್ನು ಈ ಜೋಡಿ ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುತ್ತಿದೆ.

ದೀರ್ಘಾವಧಿ ರೋಡ್‌ಮ್ಯಾಪ್: ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸಲು ಈ ಇಬ್ಬರು ಅಗತ್ಯ ಎಂದು ಬಿಸಿಸಿಐ ಬಲವಾಗಿ ನಂಬಿದೆ.

ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ, ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ಹಾಗೂ ಗೌತಮ್ ಗಂಭೀರ್ ಅವರನ್ನು ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇಬ್ಬರ ನಡುವೆ ಪೈಪೋಟಿ: ಯಾರಾಗ್ತಾರೆ ಮುಂಬೈ ಇಂಡಿಯನ್ಸ್ ನಾಯಕ?

ಬಿಸಿಸಿಐ ಮೀಟಿಂಗ್:

ಈ ದೀರ್ಘಾವಧಿ ಯೋಜನೆಯ ಭಾಗವಾಗಿ ಮುಂಬೈನಲ್ಲಿ ಬಿಸಿಸಿಐ ಉನ್ನತ ಅಧಿಕಾರಿಗಳು, ಕೋಚ್ ಗೌತಮ್ ಗಂಭೀರ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಪ್ರಮುಖ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆಟಗಾರರ ಫಿಟ್‌ನೆಸ್ ನಿರ್ವಹಣೆ, ಪ್ರಮುಖ ಸರಣಿಗಳ ಸೋಲಿನ ಪರಾಮರ್ಶೆ ಮತ್ತು 2027ರ ವಿಶ್ವಕಪ್‌ನ ಅಧಿಕೃತ ರೋಡ್‌ಮ್ಯಾಪ್ ಅನ್ನು ಅಂತಿಮಗೊಳಿಸಲಾಗುತ್ತದೆ.

Follow Us