ಒಂದೇ ಒಂದು ವಿಕೆಟ್, 180 ರನ್ ಚಚ್ಚಿಸಿಕೊಂಡ ಭುವಿ: ಮತ್ತೆ ಅವಕಾಶ ಸಿಗೋದು ಡೌಟಾ?

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಕಳಪೆ ಪ್ರದರ್ಶನದಿಂದ ಅವರ ಟೀಂ ಇಂಡಿಯಾ ಭವಿಷ್ಯ ಪ್ರಶ್ನಾರ್ಹವಾಗಿದೆ. ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಅವರು 180ರ ಸರಾಸರಿಯೊಂದಿಗೆ T20 ಅಂತಾರಾಷ್ಟ್ರೀಯ ಸರಣಿಯಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದರು. ಅವರ ದುಬಾರಿ ಬೌಲಿಂಗ್, ವಿಶೇಷವಾಗಿ ನಂತರದ ಓವರ್‌ಗಳಲ್ಲಿ, ಅವರ ವೃತ್ತಿಜೀವನಕ್ಕೆ ತೆರೆ ಬೀಳಬಹುದೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಒಂದೇ ಒಂದು ವಿಕೆಟ್, 180 ರನ್ ಚಚ್ಚಿಸಿಕೊಂಡ ಭುವಿ: ಮತ್ತೆ ಅವಕಾಶ ಸಿಗೋದು ಡೌಟಾ?
ಭುವನೇಶ್ವರ್ ಕುಮಾರ್

Updated on: Nov 02, 2026 | 9:48 PM

ನಾಲ್ಕು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಭವಿಷ್ಯದ ಬಗ್ಗೆ ಇದೀಗ ಪ್ರಶ್ನೆಗಳು ಎದ್ದಿವೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಅವರ ಕಳಪೆ ಪ್ರದರ್ಶನವೇ ಇದಕ್ಕೆ ಪ್ರಮುಖ ಕಾರಣ. ವಿದೇಶಿ ಪಿಚ್‌ಗಳಲ್ಲಿ ತಮ್ಮ ಅನುಭವ ತಂಡಕ್ಕೆ ನೆರವಾಗಬಹುದು ಎಂಬ ನಿರೀಕ್ಷೆಯೊಂದಿಗೆ ಭುವನೇಶ್ವರ್‌ಗೆ ಮತ್ತೆ ಅವಕಾಶ ನೀಡಲಾಗಿತ್ತು. ಭಾರತ ತಂಡ ಸರಣಿಯನ್ನು ಗೆದ್ದುಕೊಂಡರೂ, ಭುವಿ ಮಾತ್ರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಭುವಿ ಹೆಸರಿಗೆ ಬೇಡದ ದಾಖಲೆ

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 16 ಓವರ್ ಬೌಲಿಂಗ್ ಮಾಡಿದ ಅವರು 180 ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಅವರ ಬೌಲಿಂಗ್ ಸರಾಸರಿ 180 ಆಗಿದ್ದರೆ, ಎಕಾನಮಿ ದರ 11.25 ಇತ್ತು. ಈ ಕಳಪೆ ಪ್ರದರ್ಶನದೊಂದಿಗೆ ಭುವನೇಶ್ವರ್ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಅತ್ಯಂತ ಕೆಟ್ಟ ಬೌಲಿಂಗ್ ಸರಾಸರಿಯ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಹೆಸರಿನಲ್ಲಿ ಈ ದಾಖಲೆ ಇತ್ತು. 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅವರು 175ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಇದೀಗ ಭುವಿ 180ರ ಸರಾಸರಿಯೊಂದಿಗೆ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಈ ಓವರ್‌ಗಳೇ ಭುವಿಗೆ ಮುಳುವಾದವೇ?

ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳಲ್ಲಿ ಭುವನೇಶ್ವರ್ ಎಸೆದ 16 ಓವರ್‌ಗಳನ್ನು ಗಮನಿಸಿದರೆ, ಮೊದಲ ಓವರ್‌ಗಳಲ್ಲಿ ಭುವಿ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ನಾಲ್ಕು ಪಂದ್ಯಗಳಲ್ಲೂ ಮೊದಲ ಓವರ್‌ನಲ್ಲಿ ಮಿತವ್ಯಯದ ಬೌಲಿಂಗ್ ಮಾಡಿದ ಅವರು ಕೇವಲ 5.25 ಎಕಾನಮಿ ರೇಟ್​ನಲ್ಲಿ ರನ್ ನೀಡಿದ್ದರು. ಆದರೆ ಎರಡನೇ, ಮೂರನೇ ಹಾಗೂ ನಾಲ್ಕನೇ ಓವರ್‌ಗಳಲ್ಲಿ ಭುವಿ ಸಂಪೂರ್ಣವಾಗಿ ಲಯ ಕಳೆದುಕೊಂಡರು. ಎರಡನೇ ಓವರ್‌ನಲ್ಲಿ 11.25 ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟರೆ, ಮೂರನೇ ಓವರ್‌ನಲ್ಲಿ ಬರೋಬ್ಬರಿ 15.75 ಎಕಾನಮಿ ದರ ದಾಖಲಾಗಿತ್ತು. ನಾಲ್ಕನೇ ಓವರ್‌ನಲ್ಲೂ 12.75 ಎಕಾನಮಿ ದರದೊಂದಿಗೆ ಎದುರಾಳಿ ಬ್ಯಾಟರ್‌ಗಳಿಗೆ ರನ್ ಗಳಿಸಲು ಅವಕಾಶ ಮಾಡಿಕೊಟ್ಟರು.

ಹೀಗಾಗಿ, ಹೊಸ ಚೆಂಡಿನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೂ ನಂತರದ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ಭುವನೇಶ್ವರ್ ವಿಫಲರಾದರು. ಎರಡನೇ, ಮೂರನೇ ಮತ್ತು ನಾಲ್ಕನೇ ಓವರ್‌ಗಳಲ್ಲಿನ ದುಬಾರಿ ಬೌಲಿಂಗ್ ಅವರ ಒಟ್ಟಾರೆ ಪ್ರದರ್ಶನದ ಮೇಲೆ ದೊಡ್ಡ ಪರಿಣಾಮ ಬೀರಿತು.

ಯುವ ಆಟಗಾರನಿಗಾಗಿ ಜೆರ್ಸಿ ಸಂಖ್ಯೆ ಬದಲಿಸಿದ ಭುವನೇಶ್ವರ್ ಕುಮಾರ್..!

ಭುವಿ ವೃತ್ತಿಜೀವನ ಅಂತ್ಯವಾಯಿತೇ?

ನ್ಯೂಜಿಲೆಂಡ್ ವಿರುದ್ಧದ ಕಳಪೆ ಪ್ರದರ್ಶನದ ಬಳಿಕ ಭುವನೇಶ್ವರ್ ಕುಮಾರ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಅವರಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಅಭಿಪ್ರಾಯದ ಪ್ರಕಾರ, ಭುವನೇಶ್ವರ್ ಅವರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಿದ್ದೇ ತಪ್ಪಾಗಿತ್ತು. ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಭುವಿ ಉತ್ತಮ ಪ್ರದರ್ಶನ ನೀಡಿದ್ದರೆ, ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಬಹುದಿತ್ತು ಎಂಬುದು ಅವರ ಅಭಿಪ್ರಾಯ.

ಆದರೆ ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಸಂದರ್ಭದಲ್ಲಿ ಭುವನೇಶ್ವರ್ ತೋರಿದ ಪ್ರದರ್ಶನ ನಿರೀಕ್ಷೆಗೂ ಕಡಿಮೆಯಾಗಿದೆ. ಹೀಗಾಗಿ ಮುಂದಿನ ಟಿ20 ಸರಣಿಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಭುವನೇಶ್ವರ್ ಅವರ ಅನುಭವಕ್ಕೆ ಮತ್ತೊಂದು ಅವಕಾಶ ಸಿಗುತ್ತದೆಯೋ ಅಥವಾ ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಬೀಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us