
ಐಪಿಎಲ್ 2027ರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತಿವೆ. ಈಗಾಗಲೇ ತನ್ನ ಮುಖ್ಯ ಕೋಚ್ ಅನ್ನು ಬದಲಾಯಿಸಿರುವ ಸಿಎಸ್‌ಕೆ, ಇದೀಗ ತಂಡದ ಬ್ಯಾಟಿಂಗ್ ಕೋಚ್ ಆದ ‘ಮಿಸ್ಟರ್ ಕ್ರಿಕೆಟ್’ ಖ್ಯಾತಿಯ ಮೈಕಲ್ ಹಸ್ಸಿ ಅವರನ್ನೂ ಸಹ ತರಬೇತುದಾರರ ಬಳಗದಿಂದ ಕೈಬಿಟ್ಟಿದೆ.
ಆಸ್ಟ್ರೇಲಿಯಾದ ಮೈಕಲ್ ಹಸ್ಸಿ 2008 ರಿಂದ ಆಟಗಾರನಾಗಿ 6 ಸೀಸನ್‌ಗಳು ಹಾಗೂ 2018 ರಿಂದ ಬರೋಬ್ಬರಿ 8 ವರ್ಷಗಳ ಕಾಲ ಬ್ಯಾಟಿಂಗ್ ಕೋಚ್ ಆಗಿ ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೀಗ ಹಸ್ಸಿ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.
ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈ ಹಿನ್ನಲೆಯಲ್ಲಿ ಮೈಕಲ್ ಹಸ್ಸಿ ಅವರನ್ನು ಕೈ ಬಿಡುವ ಕಠಿಣ ನಿರ್ಧಾರವನ್ನು ಸಿಎಸ್‌ಕೆ ಆಡಳಿತ ಮಂಡಳಿಯು ತೆಗೆದುಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೈಕಲ್ ಹಸ್ಸಿ ಅವರ ಸ್ಥಾನಕ್ಕೆ ಸೂಕ್ತ ಭಾರತೀಯ ಮಾಜಿ ಬ್ಯಾಟರ್‌ಗಳ ಹುಡುಕಾಟದಲ್ಲಿದೆ, ಅದರಲ್ಲೂ ವಿಶೇಷವಾಗಿ ಈ ಹಿಂದೆ ಸಿಎಸ್‌ಕೆ ಪರ ಆಡಿದ ಅನುಭವವಿರುವ ಆಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಮೈಕಲ್ ಹಸ್ಸಿ ಅವರು ಈಗಾಗಲೇ ಐಪಿಎಲ್‌ನ ಇತರ ಕೆಲವು ಪ್ರಮುಖ ಫ್ರಾಂಚೈಸಿಗಳೊಂದಿಗೆ ಮಾತುಕತೆಯಲ್ಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್ಗೆ ಮತ್ತೊಂದು ಆಘಾತ!
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಸೀಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತರಬೇತುದಾರರ ಬಳಗವನ್ನು ಸಂಪೂರ್ಣವಾಗಿ ನವೀಕರಿಸುತ್ತಿದ್ದು, ಮೈಕಲ್ ಹಸ್ಸಿ ಅವರ ನಿರ್ಗಮನವು ಒಂದು ಸುದೀರ್ಘ ಮತ್ತು ಯಶಸ್ವಿ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಇತ್ತ ಝಹೀರ್ ಖಾನ್ ಮತ್ತು ಮೋಹಿತ್ ಶರ್ಮಾ ಅವರಂತಹ ಹೊಸ ಚಿಂತನೆಗಳೊಂದಿಗೆ ಕಣಕ್ಕಿಳಿಯಲಿರುವ ಸಿಎಸ್‌ಕೆ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.