AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾಗೆ ‘ಡಬಲ್’ ಟ್ರಬಲ್

India vs Sri Lanka: ಭಾರತ ತಂಡವು ಕೊನೆಯ ಬಾರಿ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿ ಆಡಿದ್ದು 2017 ರಲ್ಲಿ. ಇದೀಗ ಬರೋಬ್ಬರಿ 9 ವರ್ಷಗಳ ದೀರ್ಘ ಬಿಡುವಿನ ಬಳಿಕ ಟೀಮ್ ಇಂಡಿಯಾ ಲಂಕಾದಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಲು ಸಜ್ಜಾಗುತ್ತಿದೆ. ಆದರೆ ಈ ಸರಣಿಗೆ ಶ್ರೀಲಂಕಾ ತಂಡದ ಇಬ್ಬರು ಸ್ಟಾರ್ ಬ್ಯಾಟರ್​ಗಳು ಅಲಭ್ಯರಾಗುವ ಸಾಧ್ಯತೆಯಿದೆ.

ಭಾರತದ ವಿರುದ್ಧದ ಸರಣಿಗೂ ಮುನ್ನ ಶ್ರೀಲಂಕಾಗೆ 'ಡಬಲ್' ಟ್ರಬಲ್
Sri LankaImage Credit source: AFP
ಝಾಹಿರ್ ಯೂಸುಫ್
|

Updated on: Jul 23, 2026 | 2:11 PM

Share

ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯು ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಸ್ಟಾರ್ ಆಟಗಾರರಾದ ಕುಸಾಲ್ ಮೆಂಡಿಸ್ ಮತ್ತು ಪಾತುಮ್ ನಿಸ್ಸಂಕಾ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಲಂಕಾ ಪ್ರೀಮಿಯರ್ ಲೀಗ್ (LPL) 2026ರಲ್ಲಿ ಕೊಲಂಬೊ ಕ್ಯಾಪ್ಸ್ ತಂಡವನ್ನು ಮುನ್ನಡೆಸುತ್ತಿದ್ದ ವಿಕೆಟ್‌ಕೀಪರ್ ಬ್ಯಾಟರ್ ಕುಸಲ್ ಮೆಂಡಿಸ್, ಜುಲೈ 19 ರಂದು ನಡೆದ ಪಂದ್ಯದಲ್ಲಿ ರನ್ ಗಳಿಸಲು ಓಡುವಾಗ ಬಲಗಾಲಿನ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದಾರೆ.

ಇದರಿಂದಾಗಿ ಅವರು ಪ್ರಸಕ್ತ ಎಲ್‌ಪಿಎಲ್ ಸರಣಿಯ ಉಳಿದ ಪಂದ್ಯಗಳಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.

ಮತ್ತೊಂದೆಡೆ ಭರ್ಜರಿ ಫಾರ್ಮ್‌ನಲ್ಲಿದ್ದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಅವರು ಮಣಿಕಟ್ಟಿನ ತೀವ್ರ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರ ಪ್ರಕಾರ ಅವರು ಸಂಪೂರ್ಣ ಗುಣಮುಖರಾಗಲು ಕನಿಷ್ಠ 4 ರಿಂದ 6 ವಾರಗಳ ಸಮಯ ಬೇಕಾಗಬಹುದು. ಹೀಗಾಗಿ ನಿಸ್ಸಂಕಾ ಕೂಡ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ಇತ್ತ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡಿರುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಭಾರತದ ವಿರುದ್ಧದ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನ ಭಾಗ. ಈ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದರೆ ಲಂಕಾ ತಂಡವು WTC ಫೈನಲ್ ರೇಸ್​ನಲ್ಲಿ ಉಳಿಯಬಹುದು. ಆದರೆ ಸರಣಿ ಆರಂಭಕ್ಕೆ ವಾರಗಳು ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರಿಬ್ಬರು ಗಾಯಗೊಂಡಿರುವುದು ಶ್ರೀಲಂಕಾ ಪಾಲಿಗೆ ಹಿನ್ನಡೆಯಾಗಲಿದೆ.

ಭಾರತ-ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ ಕ್ರೀಡಾಂಗಣ
ಮೊದಲನೇ ಟೆಸ್ಟ್ ಆಗಸ್ಟ್ 15 – ಆಗಸ್ಟ್ 19 ಗಾಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ
ಎರಡನೇ ಟೆಸ್ಟ್ ಆಗಸ್ಟ್ 23 – ಆಗಸ್ಟ್ 27 ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್, ಕೊಲಂಬೊ

ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಸರಣಿ:

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಸರಣಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಪಂದ್ಯಗಳನ್ನು ಮುಗಿಸಿದೆ. ಉಳಿದಿರುವ 9 ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.

ಅಂದರೆ ಟೀಮ್ ಇಂಡಿಯಾ ಮುಂದಿನ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದರೆ ಫೈನಲ್​ಗೇರುವುದು ಖಚಿತ. ಒಂದು ವೇಳೆ 7 ಅಥವಾ 6 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಶ್ರೀಲಂಕಾ ದುರ್ಬಲ ತಂಡ ಎನ್ನಬಹುದು.

ಇದನ್ನೂ ಓದಿ: RCB ಆಟಗಾರರಿಗೆ ಅನ್ಯಾಯ: ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಕಿಡಿ

ಹೀಗಾಗಿಯೇ ಶ್ರೀಲಂಕಾ ವಿರುದ್ಧದ 2 ಮ್ಯಾಚ್​ಗಳಲ್ಲೂ ಭಾರತ ತಂಡ ಗೆಲ್ಲಲೇಬೇಕು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ರೇಸ್​ನಲ್ಲಿ ಉಳಿಯಬಹುದು.

Follow Us