Glenn maxwell: ಸ್ವಿಚ್ ಶಾಟ್ ಸಿಕ್ರೇಟ್ ಬಿಚ್ಚಿಟ್ಟ ಗ್ಲೆನ್ ಮ್ಯಾಕ್ಸ್ವೆಲ್: ಎದುರಾಳಿಗೆ ಪರೋಕ್ಷ ಎಚ್ಚರಿಕೆ
IPL 2021: ಭಾನುವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿತ್ತು. ನಾವು ಏನು ಅಂದುಕೊಂಡಿದ್ದೆವೊ, ಎಲ್ಲವನ್ನೂ ಸರಿಯಾಗಿ ನಿಭಾಯಿಸಿದ್ದೆವು.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನಲ್ಲಿ (IPL 2021) ಗ್ಲೆನ್ ಮ್ಯಾಕ್ಸ್ವೆಲ್ (Glenn maxwell) ಅಬ್ಬರ ಮುಂದುವರೆದಿದೆ. ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಪಂದ್ಯದ ಮೂಲಕ ಯುಎಇನಲ್ಲೂ ಅಬ್ಬರಿಸಿದ್ದಾರೆ. ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಲಿಷ್ಠ ಬೌಲಿಂಗ್ ಪಡೆಯನ್ನು ನಿರಾಯಾಸವಾಗಿ ಎದುರಿಸಿದ ಮ್ಯಾಕ್ಸ್ವೆಲ್ 3 ಭರ್ಜರಿ ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ ಕೇವಲ 37 ಎಸೆತಗಳಲ್ಲಿ 56 ರನ್ ಚಚ್ಚಿದ್ದರು. ಈ ಬಿರುಸಿನ ಬ್ಯಾಟಿಂಗ್ ಫಲವಾಗಿ ಆರ್ಸಿಬಿ (RCB) 20 ಓವರ್ನಲ್ಲಿ 165 ರನ್ ಪೇರಿಸುವಂತಾಯಿತು. ಇನ್ನು ಬೌಲಿಂಗ್ನಲ್ಲೂ ಮಿಂಚಿದ್ದ ಮ್ಯಾಕ್ಸ್ವೆಲ್ 2 ವಿಕೆಟ್ ಉರುಳಿಸುವ ಮೂಲಕ ಆಲ್ರೌಂಡರ್ ಪ್ರದರ್ಶನ ನೀಡಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಮ್ಯಾಕ್ಸ್ವೆಲ್ಗೆ ಒಲಿಯಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಮ್ಯಾಕ್ಸ್ವೆಲ್, ಭಾನುವಾರ ನಮ್ಮ ಪಾಲಿಗೆ ಒಳ್ಳೆಯ ದಿನವಾಗಿತ್ತು. ನಾವು ಏನು ಅಂದುಕೊಂಡಿದ್ದೆವೊ, ಎಲ್ಲವನ್ನೂ ಸರಿಯಾಗಿ ನಿಭಾಯಿಸಿದ್ದೆವು. ಆರಂಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಭರತ್ ಪವರ್ಪ್ಲೇನ ಸಂಪೂರ್ಣ ಲಾಭ ಪಡೆದು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದರಿಂದ ಬಳಿಕ ಬಂದ ನಾವೆಲ್ಲರೂ ಉತ್ತಮವಾಗಿ ಬ್ಯಾಟ್ ಬೀಸಲು ಸಹಾಯವಾಯಿತು ಎಂದು ತಿಳಿಸಿದರು.
ಇದೇ ವೇಳೆ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಸಿಡಿದ ಸಿಗ್ನೇಚರ್ ಶಾಟ್ ಸ್ವೀಪ್ ಸಿಕ್ಸ್ ಹಾಗೂ ಸ್ವಿಚ್ ಹಿಟ್ಗಳ ಬಗ್ಗೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಮ್ಯಾಕ್ಸಿ, ಆ ಶಾಟ್ಗಳನ್ನು ಬಾರಿಸಲು ನಾನು ವರ್ಷಗಳ ಕಾಲ ಅಭ್ಯಾಸ ನಡೆಸಿದ್ದೇನೆ. ಇದೀಗ ಅದುವೇ ನನ್ನ ಶಕ್ತಿಯಾಗಿ ಮಾರ್ಪಟ್ಟಿದೆ. ಸಾಮಾನ್ಯವಾಗಿ ನಾನು ಕಡಿಮೆ ಅಂತರದ ಬೌಂಡರಿ ಲೈನ್ನತ್ತ ರಿವರ್ಸ್ ಸ್ವೀಪ್ ಮತ್ತು ಸ್ವಿಚ್ ಹಿಟ್ಗಳನ್ನು ಬಾರಿಸುತ್ತೇನೆ. ಇದೇ ವೇಳೆ ಗಾಳಿ ಕೂಡ ಆಕಡೆ ಇದ್ದರೆ ಸ್ವಿಚ್ ಶಾಟ್ಗಳ ಮೊರೆ ಹೋಗುತ್ತೇನೆ. ಇದರಿಂದ ಚೆಂಡು ಕೂಡ ಬೌಂಡರಿಗೆ ವೇಗವಾಗಿ ತಲುಪುತ್ತದೆ ಎಂದು ತಮ್ಮ ರಿವರ್ಸ್ ಸ್ವೀಪ್ ಮತ್ತು ಸ್ವಿಚ್ ಹಿಟ್ ಸಕ್ಸಸ್ ಸಿಕ್ರೇಟ್ ಅನ್ನು ಮ್ಯಾಕ್ಸ್ವೆಲ್ ಬಹಿರಂಗಪಡಿಸಿದರು.
ಅಷ್ಟೇ ಅಲ್ಲದೆ ಮುಂದಿನ ಪಂದ್ಯಗಳಲ್ಲೂ ಸ್ವಿಚ್ ಹಿಟ್ ಹಾಗೂ ರಿವರ್ಸ್ ಸ್ವೀಪ್ ಶಾಟ್ಗಳ ಮೂಲಕ ಬೌಲರುಗಳನ್ನು ಎದುರಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ಮ್ಯಾಕ್ಸ್ವೆಲ್ ಎದುರಾಳಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ 10 ಪಂದ್ಯಗಳನ್ನಾಡಿರುವ ಮ್ಯಾಕ್ಸ್ವೆಲ್ 14 ಸಿಕ್ಸ್ ಹಾಗೂ 24 ಬೌಂಡರಿಗಳೊಂದಿಗೆ 300 ರನ್ ಕಲೆಹಾಕಿದ್ದಾರೆ. ಸೆಪ್ಟೆಂಬರ್ 29 ರಂದು ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲೂ ಮ್ಯಾಕ್ಸ್ವೆಲ್ ಸ್ವಿಚ್ ಹಿಟ್ ಕಮಾಲ್ ತೋರಿಸಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(glenn maxwell reveals secret of switch shot)