Tilak Varma: ಮತ್ತೆ ಅಬ್ಬರಿಸಿದ ತಿಲಕ್ ವರ್ಮಾ: ಈ ಬಾರಿ ಭಾರತಕ್ಕೆ ಸೋಲು
India A vs Australia A: ಭಾರತ ಎ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 246 ರನ್ ಕಲೆಹಾಕಿದರೆ, ಆಸ್ಟ್ರೇಲಿಯಾ ತಂಡವು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಡೆದ ಗುರಿಯನ್ನು ಕೇವಲ 16.4 ಓವರ್ಗಳಲ್ಲಿ ಚೇಸ್ ಮಾಡಿದೆ.

ಟೀಮ್ ಇಂಡಿಯಾದ ಯುವ ದಾಂಡಿಗ ತಿಲಕ್ ವರ್ಮಾ ಅಬ್ಬರ ಮುಂದುವರೆದಿದೆ. ಏಷ್ಯಾಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಪರ ಅಮೂಲ್ಯ 69 ರನ್ ಬಾರಿಸಿದ್ದ ತಿಲಕ್ ಇದೀಗ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. ಈ ಬಾರಿ ಅರ್ಧಶತಕ ಬಾರಿಸಿರುವುದು ಏಕದಿನ ಪಂದ್ಯದಲ್ಲಿ ಎಂಬುದಷ್ಟೇ ವ್ಯತ್ಯಾಸ.
ಕಾನ್ಪುರ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಪ್ರಭ್ಸಿಮ್ರಾನ್ ಸಿಂಗ್ (1) ಹಾಗೂ ಅಭಿಷೇಕ್ ಶರ್ಮಾ (0) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ತಿಲಕ್ ಆ ಬಳಿಕ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಿದರು. ಈ ಮೂಲಕ ಅರ್ಧಶತಕ ಪೂರೈಸಿದರು. ಇನ್ನು ಅರ್ಧಶತಕದ ಬಳಿಕ ಕೂಡ ತಂಡಕ್ಕೆ ಆಸರೆಯಾಗಿ ನಿಂತ ಯುವ ದಾಂಡಿಗ ಟೀಮ್ ಇಂಡಿಯಾ ಸ್ಕೋರ್ 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ಆದರೆ 122 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ 4 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 94 ರನ್ ಗಳಿಸಿದ್ದ ವೇಳೆ ಔಟಾದರು. ಈ ಮೂಲಕ ಶತಕ ಬಾರಿಸುವ ಅವಕಾಶವನ್ನು ತಪ್ಪಿಸಿಕೊಂಡರು. ಇನ್ನು ಅಂತಿಮ ಓವರ್ಗಳ ವೇಳೆ ರಿಯಾನ್ ಪರಾಗ್ 58 ರನ್ ಬಾರಿಸುವ ಮೂಲಕ ಮಿಂಚಿದರು. ಈ ಮೂಲಕ ಭಾರತ ಎ ತಂಡವು 45.5 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು.
ಗೆದ್ದು ಬೀಗಿದ ಆಸ್ಟ್ರೇಲಿಯಾ:
ಭಾರತ ಎ ತಂಡದ ಇನಿಂಗ್ಸ್ ಅಂತ್ಯದ ಬೆನ್ನಲ್ಲೇ ಮಳೆ ಬಂದಿದ್ದರಿಂದ ಪಂದ್ಯವು ಕೆಲ ಕಾಲ ಸ್ಥಗಿತಗೊಂಡಿತು. ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡಕ್ಕೆ 25 ಓವರ್ಗಳಲ್ಲಿ 160 ರನ್ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮೆಕೆಂಝಿ ಹಾರ್ವೆ 49 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 70 ರನ್ ಬಾರಿಸಿದರು.
ಇನ್ನು ಕೂಪರ್ ಕೊನೊಲಿ 31 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 50 ರನ್ ಸಿಡಿಸಿದರು. ಈ ಮೂಲಕ 16.4 ಓವರ್ಗಳಲ್ಲಿ 160 ರನ್ ಬಾರಿಸಿ ಆಸ್ಟ್ರೇಲಿಯಾ ಎ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಎ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ , ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಶ್ರೇಯಸ್ ಅಯ್ಯರ್ (ನಾಯಕ) , ರಿಯಾನ್ ಪರಾಗ್ , ತಿಲಕ್ ವರ್ಮಾ , ನಿಶಾಂತ್ ಸಿಂಧು , ಸೂರ್ಯಾಂಶ್ ಶೆಡ್ಗೆ , ಹರ್ಷಿತ್ ರಾಣಾ , ಯುಧ್ವೀರ್ ಸಿಂಗ್ ಚರಕ್ , ಅರ್ಷದೀಪ್ ಸಿಂಗ್ , ರವಿ ಬಿಷ್ಣೋಯ್.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 17 ತಂಡಗಳು ಎಂಟ್ರಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮೆಕೆಂಝಿ ಹಾರ್ವೆ , ಜೇಕ್ ಫ್ರೇಸರ್-ಮೆಕ್‌ಗುರ್ಕ್ (ವಿಕೆಟ್ ಕೀಪರ್) , ಲಾಚ್ಲಾನ್ ಹರ್ನೆ , ಕೂಪರ್ ಕೊನೊಲಿ , ಜ್ಯಾಕ್ ಎಡ್ವರ್ಡ್ಸ್ (ನಾಯಕ) , ಲಾಚ್ಲಾನ್ ಶಾ , ಹ್ಯಾರಿ ಡಿಕ್ಸನ್ , ಲಿಯಾಮ್ ಸ್ಕಾಟ್ , ವಿಲ್ ಸದರ್ಲ್ಯಾಂಡ್ , ಸ್ಯಾಮ್ ಎಲಿಯಟ್ , ತನ್ವೀರ್ ಸಂಘ.
