
ಆತಿಥೇಯ ಟೀಂ ಇಂಡಿಯಾ, ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಮೂರು ದಿನಗಳಲ್ಲಿ ಗೆದ್ದುಕೊಂಡಿತು. ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆಯನ್ನು ನಿರ್ಮಿಸಿತು. ತಂಡದ ಈ ಐತಿಹಾಸಿಕ ಗೆಲುವಿನ ಪ್ರಮುಖ ಪಾತ್ರವಹಿಸಿದ್ದು, ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮಾನವ್ ಸುತಾರ್ (Manav Suthar). ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಸುತಾರ್, ಎರಡು ಇನ್ನಿಂಗ್ಸ್ಗಳನ್ನು ಸೇರಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದರು. ಈ ಪ್ರದರ್ಶನಕ್ಕಾಗಿ ಸುತಾರ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಸುತಾರ್, ರೋಹಿತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರ ಕ್ಲಬ್‌ಗೆ ಸೇರಿದ್ದಾರೆ. ಸುತಾರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಒಂಬತ್ತನೇ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುತಾರ್ ಮತ್ತು ರೋಹಿತ್ ಅವರಲ್ಲದೆ, ಪ್ರವೀಣ್ ಅಮ್ರೆ, ಆರ್‌ಪಿ ಸಿಂಗ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಸಾಧನೆಯ ಜೊತೆಗೆ ಚೊಚ್ಚಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಪಡೆದ ಹತ್ತನೇ ಭಾರತೀಯ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದರು.
IND vs AFG: W,W,W.. 25 ವರ್ಷಗಳ ವಿಕೆಟ್ ಬರ ನೀಗಿಸಿದ ಮಾನವ್ ಸುತಾರ್
ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಸುತಾರ್, ‘ಭಾರತದ ಕ್ಯಾಪ್ ಪಡೆಯುವುದು ಬಹಳ ವಿಶೇಷವಾದ ಭಾವನೆ. ಭಾರತಕ್ಕಾಗಿ ಆಡುವುದು ಮತ್ತು ಟೆಸ್ಟ್ ಕ್ರಿಕೆಟ್ ಆಡುವುದು ಆರಂಭದಿಂದಲೂ ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ನಾನು ಬ್ಯಾಟಿಂಗ್ ಮಾಡಲು ಹೋದಾಗ ಒಂದೆರಡು ಎಸೆತಗಳ ನಂತರ ಪಿಚ್ ಯಾವ ರೀತಿ ವರ್ತಿಸುತ್ತಿದೆ ಎಂಬುದು ತಿಳಿಯಿತು. ಅಲ್ಲದೆ ಬ್ಯಾಟಿಂಗ್ ಮಾಡುವಾಗಲೇ, ಈ ವಿಕೆಟ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ ಎಂದು ನಾನು ಅರಿತುಕೊಂಡೆ. ನಂತರ, ನಾನು ಬೌಲಿಂಗ್ ಮಾಡಲು ಆರಂಭಿಸಿದ ಮೊದಲ ಓವರ್ನಲ್ಲೇ ಅದು ಸಾಭೀತಾಯಿತು. ಬೌಲಿಂಗ್ ಮಾಡುವಾಗ ನನ್ನ ಗಮನವು ಸರಿಯಾದ ಲೈನ್, ಲೆಂತ್ ಮೇಲೆ ಇತ್ತು. ಈ ಟೆಸ್ಟ್‌ನಿಂದ ನಾನು ಕಲಿತ ಪಾಠವೆಂದರೆ ಸಾಧ್ಯವಾದಷ್ಟು ಸ್ಥಿರವಾಗಿ ಬೌಲಿಂಗ್ ಮಾಡುವುದು, ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳ್ಮೆ ಅತ್ಯಗತ್ಯ’ ಎಂದಿದ್ದಾರೆ.
Published On - 5:56 pm, Mon, 8 June 26