IND vs AUS: ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ ಜಸ್ಪ್ರೀತ್ ಬುಮ್ರಾ
Border-Gavaskar Trophy 2025: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡವು 295 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 150 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 104 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (161) ಹಾಗೂ ವಿರಾಟ್ ಕೊಹ್ಲಿ (100) ಶತಕ ಸಿಡಿಸಿ ಮಿಂಚಿದ್ದರು. ಈ ಶತಕಗಳ ನೆರವಿನಿಂದ ಭಾರತ ತಂಡವು 6 ವಿಕೆಟ್ ಕಳೆದುಕೊಂಡು 487 ರನ್ಗಳಿಸಿ ದ್ವಿತೀಯ ಇನಿಂಗ್ಸ್ನಲ್ಲಿ ಡಿಕ್ಲೇರ್ ಘೋಷಿಸಿತು.
ಮೊದಲ ಇನಿಂಗ್ಸ್ನಲ್ಲಿನ 46 ರನ್ಗಳ ಹಿನ್ನಡೆಯೊಂದಿಗೆ 534 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 238 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 295 ರನ್ಗಳ ಐತಿಹಾಸಿಕ ಗೆಲುವು ದಾಖಲಿಸಿದೆ.
ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ, ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅನ್ನು ಹಾಡಿ ಹೊಗಳಿದ್ದಾರೆ.
ಈ ಬಗ್ಗೆ ಮಾತನಾಡಿದ ಬುಮ್ರಾ, ಈ ಗೆಲುವು ನಿಜಕ್ಕೂ ತುಂಬಾ ಖುಷಿ ನೀಡಿದೆ. ಏಕೆಂದರೆ ಮೊದಲ ಇನಿಂಗ್ಸ್ನಲ್ಲಿ ನಾವು ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಒತ್ತಡಕ್ಕೆ ಒಳಗಾಗಿದ್ದೆವು. ಇದಾದ ಬಳಿಕ ನಮ್ಮ ಕಂಬ್ಯಾಕ್ ಅದ್ಭುತವಾಗಿತ್ತು.
2018 ರಲ್ಲಿ ಇದೇ ಮೈದಾನದಲ್ಲಿ ನಾನು ಟೆಸ್ಟ್ ಪಂದ್ಯ ಆಡಿದ್ದೆ. ಆ ವೇಳೆಯೂ ಇಲ್ಲಿನ ಪಿಚ್ ಆರಂಭದಲ್ಲಿ ತುಸು ಮೃದು ಮೇಲ್ಮೈಯನ್ನು ಹೊಂದಿತ್ತು. ಇದಾದ ಬಳಿಕ ಪಿಚ್ ವೇಗ ಪಡೆಯುವುದನ್ನು ನಾನು ಕಂಡುಕೊಂಡಿದ್ದೆ. ಹೀಗಾಗಿಯೇ ನಾನು ನನ್ನ ಸಹ ಆಟಗಾರರಿಗೆ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುವಂತೆ ಹೇಳಿದ್ದೆ. ಈ ಆತ್ಮ ವಿಶ್ವಾಸದೊಂದಿಗೆ ನಮ್ಮ ಆಟಗಾರರು ಭರ್ಜರಿ ಪ್ರದರ್ಶನ ನೀಡಿದರು ಎಂದು ಬುಮ್ರಾ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಡಿರುವ ಇನಿಂಗ್ಸ್ ಅವರ ಇದುವರೆಗಿನ ಅತ್ಯುತ್ತಮ ಟೆಸ್ಟ್ ಇನ್ನಿಂಗ್ಸ್ ಎಂಬುದು ನನ್ನ ಅನಿಸಿಕೆ. ಈ ಇನಿಂಗ್ಸ್ನಲ್ಲಿ ಅವರು ಯಾವ ಬಾಲ್ ಅನ್ನು ಆಡಬೇಕೆಂದು, ಯಾವುದನ್ನು ಬಿಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಸಾಮಾನ್ಯವಾಗಿ ಜೈಸ್ವಾಲ್ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿಗೆ ತಕ್ಕಂತೆ ಅದ್ಭುತವಾಗಿ ಇನಿಂಗ್ಸ್ ಕಟ್ಟಿದರು ಎಂದು ಬುಮ್ರಾ ಹೇಳಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿಯ ಸ್ಪೋಟಕ ಸೆಂಚುರಿಯನ್ನು ಸಹ ನೆನಪಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ನಾನು ಯಾವತ್ತೂ ವಿರಾಟ್ ಔಟ್ ಆಫ್ ಫಾರ್ಮ್ನಲ್ಲಿ ಇರುವುದನ್ನು ನೋಡಿಲ್ಲ. ಅವರು ಕಷ್ಟಕರವಾದ ಪಿಚ್‌ಗಳಲ್ಲಿ ಕೆಲವೊಮ್ಮೆ ಬೇಗೆನೆ ಔಟಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಅವರ ಫಾರ್ಮ್ ನಿರ್ಣಯಿಸುವುದು ಕಷ್ಟ.
ಏಕೆಂದರೆ ನೆಟ್ಸ್ನಲ್ಲಿ ಅವರು ಯಾವಾಗಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಹೀಗಾಗಿಯೇ ನನಗೆ ಕೊಹ್ಲಿಯ ಫಾರ್ಮ್ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ನನ್ನ ವಿಶ್ವಾಸದಂತೆ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು ಬುಮ್ರಾ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಜಯಭೇರಿ… ಹಲವು ದಾಖಲೆಗಳು ನಿರ್ಮಾಣ
ವಿಶೇಷ ಎಂದರೆ ಇದು ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ದಕ್ಕಿರುವ ಮೊದಲ ಗೆಲುವು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಭಾರತ ತಂಡವನ್ನು ಮುನ್ನಡೆಸಿದ್ದ ಬುಮ್ರಾ ಸೋಲಿನ ರುಚಿ ನೋಡಿದ್ದರು. ಇದೀಗ ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾದಲ್ಲೇ ಬಗ್ಗು ಬಡಿದು ಜಸ್ಪ್ರೀತ್ ಬುಮ್ರಾ ಟೆಸ್ಟ್ ಗೆಲುವಿನ ಖಾತೆ ತೆರೆದಿದ್ದಾರೆ.