IND vs ENG: ಇಂಗ್ಲೆಂಡ್ ಆಲೌಟ್: ಭಾರತ ತಂಡಕ್ಕೆ ಸುಲಭ ಗುರಿ
India vs England 1st Test: ಹೈದರಾಬಾದ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಒಲೀ ಪೋಪ್ ಶತಕದ ಅಂಚಿನಲ್ಲಿ ಎಡವಿದ್ದಾರೆ. 278 ಎಸೆತಗಳಲ್ಲಿ 196 ರನ್ ಬಾರಿಸಿ ಪೋಪ್ ವಿಕೆಟ್ ಒಪ್ಪಿಸುವ ಮೂಲಕ ದ್ವಿಶತಕದ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

India vs England 1st Test: ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ (England) ತಂಡದ 420 ರನ್ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 246 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (80), ಕೆಎಲ್ ರಾಹುಲ್ (86) ಹಾಗೂ ರವೀಂದ್ರ ಜಡೇಜಾ (87) ಅರ್ಧಶತಕ ಬಾರಿಸಿದ್ದರು. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 436 ರನ್ ಕಲೆಹಾಕಿತು.
190 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಈ ಬಾರಿ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲೀ ಪೋಪ್ ಆಕರ್ಷಕ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು.
ಮೂರನೇ ದಿನದಾಟದಿಂದ ಇಂಗ್ಲೆಂಡ್ ತಂಡಕ್ಕೆ ಆಸೆಯಾಗಿದ್ದ ಪೋಪ್ ನಾಲ್ಕನೇ ದಿನದಾಟದ ಆರಂಭದಲ್ಲೇ 150 ರನ್ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ತಂಡದ ಸ್ಕೋರ್ ಅನ್ನು 400 ರನ್ಗಳ ಗಡಿದಾಟಿಸುವಲ್ಲಿ ಯಶಸ್ವಿಯಾದರು.
ಅಲ್ಲದೆ 7ನೇ ಮತ್ತು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೆಹಾನ್ ಅಹ್ಮದ್ (28) ಹಾಗೂ ಟಾಮ್ ಹಾರ್ಟ್ಲಿ (34) ಜೊತಗೂಡಿ ಪೋಪ್ ಅರ್ಧಶತಕಗಳ ಜೊತೆಯಾಟವಾಡಿದರು. ಆದರೆ ಅಂತಿಮ ವಿಕೆಟ್ನೊಂದಿಗೆ ದ್ವಿಶತಕ ಬಾರಿಸುವ ಅವಕಾಶ ಹೊಂದಿದ್ದ ಒಲೀ ಪೋಪ್ ಸ್ವಿಚ್ ಹಿಟ್ ಶಾಟ್ಗೆ ಯತ್ನಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಟೀಮ್ ಇಂಡಿಯಾ ವಿರುದ್ಧ ದ್ವಿಶತಕ ಬಾರಿಸುವ ಅವಕಾಶ ಒಲೀ ಪೋಪ್ ಕೈತಪ್ಪಿತು.
ದ್ವಿತೀಯ ಇನಿಂಗ್ಸ್ನಲ್ಲಿ 278 ಎಸೆತಗಳನ್ನು ಎದುರಿಸಿದ ಪೋಪ್ 21 ಫೋರ್ಗಳೊಂದಿಗೆ 196 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಅತ್ಯಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 420 ರನ್ ಕಲೆಹಾಕಿದೆ.
ಟೀಮ್ ಇಂಡಿಯಾಗೆ 231 ರನ್ಗಳ ಗುರಿ:
ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 190 ರನ್ಗಳ ಮುನ್ನಡೆ ಸಾಧಿಸಿತ್ತು. ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 420 ರನ್ ಬಾರಿಸಿದ್ದರೂ, ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 231 ರನ್ಗಳನ್ನು ಚೇಸ್ ಮಾಡಿದರೆ ಗೆಲುವು ದಾಖಲಿಸಬಹುದು. ಅದರಂತೆ 4ನೇ ಮತ್ತು 5ನೇ ದಿನದಾಟದ ಮೂಲಕ ಭಾರತ ತಂಡವು ಈ ಸುಲಭ ಗುರಿಯನ್ನು ಬೆನ್ನತ್ತುವ ನಿರೀಕ್ಷೆಯಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ಕೆಎಲ್ ರಾಹುಲ್ , ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: Ravindra Jadeja: ಜಡ್ಡು ಜಾದೂ…ರೂಟ್ ಕ್ಲಿಯರ್ ದಾಖಲೆ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಜಾನಿ ಬೈರ್ಸ್ಟೋವ್ , ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್) , ರೆಹಾನ್ ಅಹ್ಮದ್ , ಟಾಮ್ ಹಾರ್ಟ್ಲಿ , ಮಾರ್ಕ್ ವುಡ್ , ಜ್ಯಾಕ್ ಲೀಚ್.
Published On - 11:23 am, Sun, 28 January 24
