AUS vs WI: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸೋಲುಣಿಸಿದ ವೆಸ್ಟ್ ಇಂಡೀಸ್
Australia vs West Indies, 2nd Test: 22 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿರ್ಕ್ ಮೆಕೆಂಜಿ 41 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು.

ಬ್ರಿಸ್ಬೇನ್ನ ದಿ ಗಬ್ಬಾ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 8 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಕವೆಮ್ (71), ಜೋಶುವಾ ಡ ಸಿಲ್ವಾ (79) ಹಾಗೂ ಕೆವಿನ್ ಸಿಂಕ್ಲೇರ್ (50) ಅರ್ಧಶತಕ ಬಾರಿಸಿ ಮಿಂಚಿದ್ದರು.
ಈ ಮೂವರ ಅರ್ಧಶತಕಗಳ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 311 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ (75) ಆಕರ್ಷಕ ಅರ್ಧಶತಕ ಸಿಡಿಸಿದ್ದರು.
ಆದರೆ ಆಸ್ಟ್ರೇಲಿಯಾ ತಂಡದ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಅಲೆಕ್ಸ್ ಕ್ಯಾರಿ 65 ರನ್ ಬಾರಿಸಿ ತಂಡದ ಮೊತ್ತವನ್ನು 250ರ ಗಡಿದಾಟಿಸಿದ್ದರು. ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 289 ರನ್ಗಳಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಘೋಷಿಸಿತು.
22 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿರ್ಕ್ ಮೆಕೆಂಜಿ 41 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಪರಿಣಾಮ ದ್ವಿತೀಯ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡ 193 ರನ್ಗಳಿಗೆ ಆಲೌಟ್ ಆಯಿತು.
ದ್ವಿತೀಯ ಇನಿಂಗ್ಸ್ನಲ್ಲಿ 216 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಭರ್ಜರಿ ಆರಂಭ ಒದಗಿಸಿದ್ದರು. ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಸ್ಮಿತ್ ಆಕರ್ಷಕ ಅರ್ಧಶತಕ ಪೂರೈಸಿದರು.
ಆದರೆ ಇನ್ನೊಂದೆಡೆ ಶಮರ್ ಜೋಸೆಫ್ ಕರಾರುವಾಕ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 113 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡವು 175 ರನ್ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 41 ರನ್ಗಳ ಅವಶ್ಯಕತೆಯಿದ್ದರೆ, ವೆಸ್ಟ್ ಇಂಡೀಸ್ಗೆ ಕೇವಲ 2 ವಿಕೆಟ್ಗಳು ಬೇಕಿತ್ತು. ಇದಾಗ್ಯೂ ಒಂದೆಡೆ ಸ್ಟೀವ್ ಸ್ಮಿತ್ ಕ್ರೀಸ್ ಕಚ್ಚಿ ನಿಂತಿದ್ದರಿಂದ ಆಸೀಸ್ ಪಡೆಗೆ ಗೆಲ್ಲುವ ನಿರೀಕ್ಷೆಯಿತ್ತು.
ಆದರೆ 91 ರನ್ಗಳ ಅಜೇಯ ಅರ್ಧಶತಕದೊಂದಿಗೆ ಸ್ಟೀವ್ ಸ್ಮಿತ್ ಒಂದೆಡೆ ಬಾಕಿಯಾದರೆ, ಮತ್ತೊಂದೆಡೆ ಆಸ್ಟ್ರೇಲಿಯಾ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ವಿಂಡೀಸ್ ವೇಗಿಗಳು ಯಶಸ್ವಿಯಾದರು. ಅದರಂತೆ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 207 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡ 8 ರನ್ಗಳ ರೋಚಕ ಜಯ ಸಾಧಿಸಿದೆ.
ವೆಸ್ಟ್ ಇಂಡೀಸ್ ಪರ ಮಾರಕ ದಾಳಿ ಸಂಘಟಿಸಿದ ಯುವ ವೇಗಿ ಶಮರ್ ಜೋಸೆಫ್ 11.5 ಓವರ್ಗಳಲ್ಲಿ 68 ರನ್ ನೀಡಿ 7 ವಿಕೆಟ್ ಉರುಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಐತಿಹಾಸಿಕ ಗೆಲುವು:
ಆಸ್ಟ್ರೇಲಿಯಾದಲ್ಲಿ ವೆಸ್ಟ್ ಇಂಡೀಸ್ ತಂಡ ಕೊನೆಯ ಬಾರಿ ಟೆಸ್ಟ್ ಪಂದ್ಯ ಗೆದ್ದಿದ್ದು 1997 ರಲ್ಲಿ. ಇದಾದ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ವೆಸ್ಟ್ ಇಂಡೀಸ್ ತಂಡ ಇದೀಗ 27 ವರ್ಷಗಳ ಬಳಿಕ ಐತಿಹಾಸಿಕ ಗೆಲುವು ಸಾಧಿಸಿರುವುದು ವಿಶೇಷ.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಸ್ಟೀವ್ ಸ್ಮಿತ್ , ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ನಾಥನ್ ಲಿಯಾನ್ , ಜೋಶ್ ಹ್ಯಾಝಲ್ವುಡ್.
ಇದನ್ನೂ ಓದಿ: Ravindra Jadeja: ಜಡ್ಡು ಜಾದೂ…ರೂಟ್ ಕ್ಲಿಯರ್ ದಾಖಲೆ
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕ್ರೈಗ್ ಬ್ರಾಥ್‌ವೈಟ್ (ನಾಯಕ) , ತೇಜ್ನರೈನ್ ಚಂದ್ರಪಾಲ್ , ಕಿರ್ಕ್ ಮೆಕೆಂಜಿ , ಅಲಿಕ್ ಅಥಾನಾಝ್, ಕವೆಮ್ ಹಾಡ್ಜ್ , ಜಸ್ಟಿನ್ ಗ್ರೀವ್ಸ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್) , ಕೆವಿನ್ ಸಿಂಕ್ಲೇರ್ , ಅಲ್ಝಾರಿ ಜೋಸೆಫ್ , ಕೆಮರ್ ರೋಚ್ , ಶಮರ್ ಜೋಸೆಫ್.
Published On - 12:52 pm, Sun, 28 January 24
