3 ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ವೈಟ್ ವಾಶ್ ಮಾಡಿರುವ ಟೀಂ ಇಂಡಿಯಾ (India Vs New Zealand) ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಹೈದರಾಬಾದ್, ರಾಯ್‌ಪುರ ನಂತರ ಇಂದೋರ್‌ನಲ್ಲೂ ರೋಹಿತ್ ಶರ್ಮಾ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಮೂರನೇ ಏಕದಿನ ಪಂದ್ಯವನ್ನು 90 ರನ್‌ಗಳಿಂದ ಗೆದ್ದುಕೊಂಡ ಭಾರತ ಈ ಗೆಲುವಿನೊಂದಿಗೆ ಸರಣಿಯಲ್ಲೂ ಕ್ಲೀನ್ ಸ್ವೀಪ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ರೋಹಿತ್ ಶರ್ಮಾ (Rohit Sharma) ಹಾಗೂ ಶುಭ್ಮನ್ ಗಿಲ್ (Shubman Gill) ಅವರ ಅಬ್ಬರದ ಶತಕದ ನೆರವಿನಿಂದಾಗಿ 386 ರನ್‌ಗಳ ಬೃಹತ್ ಗುರಿ ಸೆಟ್ ಮಾಡಿತು. ಇದಕ್ಕುತ್ತರವಾಗಿ ಭಾರತದ ದಾಳಿಯ ಮುಂದೆ ತತ್ತರಿಸಿದ ಕಿವೀಸ್ ತಂಡ 41.2 ಓವರ್ಗಳಲ್ಲಿ 295 ರನ್ಗಳಿಗೆ ಆಲೌಟಾಯಿತು.
ಇದರೊಂದಿಗೆ ಭಾರತ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ ಒನ್ ತಂಡ ಎನಿಸಿಕೊಂಡಿದೆ. ಮೊದಲು ಬ್ಯಾಟಿಂಗ್ನಲ್ಲಿ ರೋಹಿತ್ ಹಾಗೂ ಶುಭ್ಮನ್ ಶತಕ ಸಿಡಿಸಿದರೆ, ನಂತರ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ಈ ಪಂದ್ಯದ ಹೀರೋಗಳೆನಿಸಿಕೊಂಡರು. ಅಲ್ಲದೆ ಈ ಗೆಲುವಿನೊಂದಿಗೆ ಬರೋಬ್ಬರಿ 13 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ ಸಾಧನೆಯನ್ನೂ ಮಾಡಿದೆ.
IND vs NZ: ಕಿವೀಸ್ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಹಾರ್ದಿಕ್ ಪಡೆಗೆ ಬಿಗ್ ಶಾಕ್..!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇಬ್ಬರೂ ಶತಕ ಬಾರಿಸುವ ಮೂಲಕ 212 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಶತಕ ಸಿಡಿಸಿದ ನಾಯಕ ರೋಹಿತ್ ರೂಪದಲ್ಲಿ ಭಾರತಕ್ಕೆ ಮೊದಲ ಹೊಡೆತ ಬಿದ್ದರೆ, ನಾಯಕನ ಜೊತೆಗಿನ ಜೊತೆಯಾಟ ಮುರಿದ ತಕ್ಷಣ ಗಿಲ್ ಕೂಡ ಲಯ ಕಳೆದುಕೊಂಡರು. 230 ರನ್ ಗಳಿಸಿದ ಭಾರತಕ್ಕೆ ಗಿಲ್ ರೂಪದಲ್ಲಿ ಎರಡನೇ ಹೊಡೆತ ಬಿದ್ದಿತು. 112 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಗಿಲ್ ಔಟಾದ ಬಳಿಕ ಭಾರತದ ಇನ್ನಿಂಗ್ಸ್ ತತ್ತರಿಸಲಾರಂಭಿಸಿತು. ಇಶಾನ್ ಕಿಶನ್ 17 ರನ್, ವಿರಾಟ್ ಕೊಹ್ಲಿ 36 ರನ್, ಸೂರ್ಯಕುಮಾರ್ ಯಾದವ್ 14 ರನ್ ಗಳಿಸಲಷ್ಟೇ ಶಕ್ತರಾದರು.
ಮಧ್ಯಮ ಕ್ರಮಾಂಕದ ವೈಫಲ್ಯದ ಬಳಿಕ ತಂಡಕ್ಕೆ ನೆರವಾದ ಹಾರ್ದಿಕ್ ಪಾಂಡ್ಯ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ತತ್ತರಿಸಿದ ಇನ್ನಿಂಗ್ಸ್ ನಿಭಾಯಿಸಿದರು. 54 ರನ್ ಗಳಿಸಿದ ಪಾಂಡ್ಯ ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ 9, ಶಾರ್ದೂಲ್ ಠಾಕೂರ್ 25 ಮತ್ತು ಕುಲ್ದೀಪ್ ಯಾದವ್ 3 ರನ್‌ಗಳ ಕೊಡುಗೆ ನೀಡಿದರು.
ಭಾರತ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ಗೆ ಆರಂಭದಲ್ಲಿ ಆಘಾತ ಎದುರಾಯಿತು. ಆರಂಭಿಕ ಫಿನ್ ಅಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಮಾತ್ರ ಏಕಾಂಗಿಯಾಗಿ ಭಾರತದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದರು. ತಂಡದ ಪರ ಅಬ್ಬರದ ಶತಕ ಸಿಡಿಸಿದ ಕಾನ್ವೇ ಹೊರತುಪಡಿಸಿ ತಂಡದಿಂದ ಮತ್ತ್ಯಾವ ಆಟಗಾರನೂ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇದರಿಂದಾಗಿ ನ್ಯೂಜಿಲೆಂಡ್‌ಗೆ ಪೂರ್ಣ 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಠಾಕೂರ್ ಮತ್ತು ಕುಲ್ದೀಪ್ ತಲಾ 3 ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ 2 ಮತ್ತು ಪಾಂಡ್ಯ ಮತ್ತು ಉಮ್ರಾನ್ ಮಲಿಕ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ