Hardik Pandya: ಭಾರತೀಯ ಬೌಲರ್ಗಳನ್ನು ಚೆಂಡಾಡಿದ ಐರ್ಲೆಂಡ್ ಬ್ಯಾಟರ್ಗೆ ಗಿಫ್ಟ್ ನೀಡಿದ ಪಾಂಡ್ಯ..!
Hardik Pandya: ಐರ್ಲೆಂಡ್ ಕ್ರಿಕೆಟ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಭಾವಿಸುತ್ತೇನೆ. ಅವರ ಪ್ರದರ್ಶನ ಗಮನಿಸಿದ್ರೆ ಐಪಿಎಲ್ನಲ್ಲೂ ಅವಕಾಶ ಪಡೆಯಬಹುದು ಎಂದು ಭಾವಿಸುತ್ತೇನೆ.
ಭಾರತ-ಐರ್ಲೆಂಡ್ (India vs Ireland) ನಡುವಣ ಮೊದಲ ಟಿ20 ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಳೆಯ ಕಾರಣ ಕೇವಲ 12 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅತ್ತ ಟೀಮ್ ಇಂಡಿಯಾ ಪಾಲಿಗೆ ಸುಲಭ ತುತ್ತಾಗಲಿದೆ ಎಂದು ಭಾವಿಸಿದ್ದ ಐರ್ಲೆಂಡ್ ತಂಡವು ಉತ್ತಮ ಪ್ರದರ್ಶನವನ್ನೇ ನೀಡಿತು. ಪಂದ್ಯದ ಮೊದಲ ಓವರ್ನಲ್ಲಿ ನಾಯಕ ಬಾಲ್ಬಿರ್ನಿಯನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡಿ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಪಾಲ್ ಸ್ಟಿರ್ಲಿಂಗ್ (4) ಅವರನ್ನು ಪೆವಿಲಿಯನ್ಗೆ ಕಳುಹಿಸಿದ್ದರು. ತಂಡದ ಮೊತ್ತ 23 ರನ್ ಆಗಿದ್ದ ವೇಳೆ ಡೆಲಾನಿ (8) ಕೂಡ ಅವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದ್ದರು. ಟೀಮ್ ಇಂಡಿಯಾ ಬೌಲರ್ಗಳು ಆರಂಭದಲ್ಲೇ ಪರಾಕ್ರಮ ಮೆರೆದರೂ, ಹ್ಯಾರಿ ಟೆಕ್ಟರ್ ಮಾತ್ರ ಮಂಡಿಯೂರಿರಲಿಲ್ಲ.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹ್ಯಾರಿ ಟೆಕ್ಟರ್ ಮಾತ್ರ ಟೀಮ್ ಇಂಡಿಯಾ ಬೌಲರುಗಳ ಬೆಂಡೆತ್ತಿದರು. ಸಿಕ್ಸ್-ಫೋರ್ಗಳ ಮೂಲಕ ಅಬ್ಬರಿಸಿದ್ದ ಟೆಕ್ಟರ್ ಕೇವಲ 33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 64 ರನ್ ಬಾರಿಸಿದರು. ಹೀಗೆ ಭಾರತೀಯ ಬೌಲರುಗಳನ್ನು ಚೆಂಡಾಡುವ ಮೂಲಕ ಹ್ಯಾರಿ ಟೆಕ್ಟರ್ ತಂಡದ ಮೊತ್ತವನ್ನು 12 ಓವರ್ಗಳಲ್ಲಿ 108 ರನ್ಗೆ ಕೊಂಡೊಯ್ದಿದ್ದರು. ಇದಾಗ್ಯೂ ಟೀಮ್ ಇಂಡಿಯಾದ ಅನುಭವಿ ಬೌಲರ್ಗಳಿಗೆ ಟೆಕ್ಟರ್ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ ಎಂಬುದು ವಿಶೇಷ. ಇನ್ನು ಈ ಮೊತ್ತವನ್ನು ಟೀಮ್ ಇಂಡಿಯಾ 9.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದ ಬಳಿಕ ಐರಿಷ್ ಬ್ಯಾಟ್ಸ್ಮನ್ ಟೆಕ್ಟರ್ ಅವರನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ವಿಶೇಷ ಉಡುಗೊರೆ ನೀಡಿದರು. ಅಲ್ಲದೆ ಟೆಕ್ಟರ್ ಅವರ ಪ್ರದರ್ಶನವನ್ನು ಮನಬಿಚ್ಚಿ ಕೊಂಡಾಡಿದರು. ಈ ಬಗ್ಗೆ ಮಾತನಾಡಿದ ಪಾಂಡ್ಯ, ಟೆಕ್ಟರ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು. 22 ವರ್ಷದ ಯುವ ಆಟಗಾರನ ಪ್ರದರ್ಶನ ನಿಜವಾಗಿಯೂ ಮೆಚ್ಚತಕ್ಕದ್ದು. ಹೀಗಾಗಿ ನಾನು ಆತನಿಗೆ ನನ್ನ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂಬರುವ ಪಂದ್ಯಗಳಲ್ಲಿ ಹ್ಯಾರಿ ಟೆಕ್ಟರ್ನಿಂದ ಭರ್ಜರಿ ಸಿಕ್ಸರ್‌ಗಳನ್ನು ನಿರೀಕ್ಷಿಸಬಹುದು. ಅಲ್ಲದೆ ಹ್ಯಾರಿ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಭಾವಿಸುತ್ತೇನೆ. ಅವರ ಪ್ರದರ್ಶನ ಗಮನಿಸಿದ್ರೆ ಐಪಿಎಲ್ನಲ್ಲೂ ಅವಕಾಶ ಪಡೆಯಬಹುದು ಎಂದು ಭಾವಿಸುತ್ತೇನೆ. ಸರಿಯಾದ ದಿಕ್ಕಿನಲ್ಲಿ ಶ್ರಮಿಸಿ ಯಶಸ್ಸು ಸಾಧಿಸಿದರೆ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಇತರ ಹಲವು ಲೀಗ್‌ಗಳಲ್ಲೂ ಯುವ ಆಟಗಾರ ಕಾಣಿಸಿಕೊಳ್ಳಬಹುದು. ನನ್ನ ಕಡೆಯಿಂದ ಹ್ಯಾರಿ ಟೆಕ್ಟರ್ಗೆ ಅಭಿನಂದನೆಗಳು ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಇದೀಗ ಎದುರಾಳಿ ತಂಡದ ಆಟಗಾರನ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿ ಬ್ಯಾಟ್ ಗಿಫ್ಟ್ ನೀಡಿರುವ ಹಾರ್ದಿಕ್ ಪಾಂಡ್ಯ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಯುವ ಪ್ರತಿಭೆಗಳಿಗೆ ಸ್ಟಾರ್ ಆಟಗಾರರಿಂದ ಇಂತಹ ಬೆಂಬಲ ವ್ಯಕ್ತವಾದರೆ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಅದ್ಭುತ ಫಾರ್ಮ್ನಲ್ಲಿರುವ ಹ್ಯಾರಿ ಟೆಕ್ಟರ್: ಹ್ಯಾರಿ ಟೆಕ್ಟರ್ ಈಗಷ್ಟೇ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಈ ಯುವ ಆಟಗಾರನನ್ನು ಐರ್ಲೆಂಡ್‌ನ ಭವಿಷ್ಯ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದುವರೆಗೆ 33 ಟಿ20 ಪಂದ್ಯಗಳನ್ನಾಡಿರುವ ಟೆಕ್ಟರ್ 604 ರನ್ ಗಳಿಸಿದ್ದಾರೆ. ಹಾಗೆಯೇ 20 ಏಕದಿನ ಪಂದ್ಯಗಳನ್ನು ಆಡಿದ್ದು, ಈ ವೇಳೆ 7 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಟಿ20 ಕ್ರಿಕೆಟ್ 3 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಕೆರಿಯರ್ ಆರಂಭದಲ್ಲೇ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ 22 ವರ್ಷದ ಹ್ಯಾರಿ ಟೆಕ್ಟರ್ ಮುಂಬರುವ ದಿನಗಳಲ್ಲಿ ಐರ್ಲೆಂಡ್ ತಂಡವನ್ನು ಮುಗಿಲೆತ್ತರಕ್ಕೇರಿಸುವ ಭರವಸೆ ಮೂಡಿಸಿದ್ದಾರೆ.