
ಭಾರತದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಕೊರೆತಯಿಲ್ಲ. ಹೀಗಾಗಿ ಟೀಂ ಇಂಡಿಯಾದ ಬೆಂಚ್ ಬಲ ಎಷ್ಟಿದೆಯೇಂದರೆ ಏಕಕಾಲದಲ್ಲಿ ಮೂರರಿಂದ ನಾಲ್ಕು ತಂಡವನ್ನು ಕಣಕ್ಕಿಳಿಸಬಹುದಾಗಿದೆ. ಆ ನಾಲ್ಕು ತಂಡಗಳು ಕೂಡ ಎಂತಹ ತಂಡವನ್ನು ಸೋಲಿಸುವಷ್ಟು ಬಲಿಷ್ಠವಾಗಿವೆ. ಹೀಗಾಗಿಯೇ ಬಿಸಿಸಿಐ ಕೆಲವು ಸಮಯದಲ್ಲಿ ಭಾರತ ಎ ಹಾಗೂ ಬಿ ತಂಡಗಳನ್ನು ಇತರ ಸರಣಿಗಳಿಗೆ ಕಳುಹಿಸಿಕೊಟ್ಟು ಮುಖ್ಯ ತಂಡವನ್ನು ಪ್ರಮುಖ ಸರಣಿಯಲ್ಲಿ ಆಡಿಸುತ್ತದೆ. ಇದೀಗ ಅಂತದೆ ಕೆಲಸಕ್ಕೆ ಬಿಸಿಸಿಐ ಮುಂದಾಗಿದೆ.
ವಾಸ್ತವವಾಗಿ ಅಕ್ಟೋಬರ್ 3 ರಂದು ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಆಡುವ ಸಾಧ್ಯತೆಗಳಿವೆ. ಒಂದು ತಂಡವು ನ್ಯೂ ಚಂಡೀಗಢದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದರೆ, ಇನ್ನೊಂದು ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಪಂದ್ಯವನ್ನು ಆಡಬಹುದು. ಅಕ್ಟೋಬರ್ 3, 2026 ರಂದು, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೂರನೇ ಏಕದಿನ ಪಂದ್ಯವನ್ನು ಆಡಲಿದೆ. ಇತ್ತ ಅದೇ ದಿನ, ಇನ್ನೊಂದು ತಂಡ ಜಪಾನ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಂದ್ಯವನ್ನು ಆಡಲಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ. ಹೀಗಾಗಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ, ಜಪಾನ್ ಮತ್ತು ನೇಪಾಳವನ್ನು ಒಳಗೊಂಡಿರುವ ಗ್ರೂಪ್ ಎ ನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಇದಾದ ಬಳಿಕ ಅಕ್ಟೋಬರ್ 1 ರಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಆ ನಂತರ ಫೈನಲ್ ಪಂದ್ಯ ಅಂದರೆ ಚಿನ್ನದ ಪದಕ ಪಂದ್ಯವು ಅಕ್ಟೋಬರ್ 3 ರಂದು ನಡೆಯಲಿದೆ. ಅದೇ ದಿನದಂದು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯವೂ ನಡೆಯಲಿದೆ.
ಏಷ್ಯನ್ ಗೇಮ್ಸ್ಗಾಗಿ ಈಗಾಗಲೇ ತಂಡವನ್ನು ಪ್ರಕಟಿಸಲಾಗಿದೆ. ಶ್ರೇಯಸ್ ಅಯ್ಯರ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರು ಇದ್ದಾರೆ. ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಕೂಡ ತಂಡದಲ್ಲಿದ್ದಾರೆ. ಇತ್ತ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದಾಗ್ಯೂ ಈ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕುಲ್ದೀಪ್ ಯಾದವ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಈ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೇವಲ 52 ಎಸೆತಗಳಲ್ಲಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ
ಗಮನಿಸಬೇಕಾದ ಅಂಶವೆಂದರೆ, ಟೀಂ ಇಂಡಿಯಾ ಒಂದೇ ದಿನ ಎರಡು ವಿಭಿನ್ನ ಸ್ಥಳಗಳಲ್ಲಿ ಪಂದ್ಯಗಳನ್ನು ಆಡುತ್ತಿರುವುದು ಇದೇ ಮೊದಲಲ್ಲ. 28 ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್ 12, 1998 ರಂದು ಕೂಡ ಟೀಂ ಇಂಡಿಯಾ ಒಂದೇ ದಿನ ಎರಡು ಪಂದ್ಯಗಳನ್ನು ಆಡಿತ್ತು. 1998 ರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಂತಹ ಆಟಗಾರರು ಕೌಲಾಲಂಪುರದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೆನಡಾ ವಿರುದ್ಧ ಆಡಿದ್ದರು. ಅದೇ ದಿನ, ಟೊರೊಂಟೊದಲ್ಲಿ ನಡೆದ ಸಹಾರಾ ಫ್ರೆಂಡ್‌ಶಿಪ್ ಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಅಜರುದ್ದೀನ್ ತಂಡವನ್ನು ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಗಂಗೂಲಿ, ದ್ರಾವಿಡ್ ಮತ್ತು ಸಿಧು ಅವರಂತಹ ಸ್ಟಾರ್ ಆಟಗಾರರು ಆಡಿದ್ದರು.