IND vs ENG: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಅನಾವರಣ ಮುಂದೂಡಿಕೆ; ಕಾರಣವೇನು?
Anderson-Tendulkar Trophy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಹೊಸ ಹೆಸರು "ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ" ಎಂದು ನಾಮಕರಣ ಮಾಡಲಾಗಿದೆ. ಆದರೆ, ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಈ ಟ್ರೋಫಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಪೂರ್ವ ನಿಗದಿತ WTC ಫೈನಲ್ ಸಮಯದಲ್ಲಿ ಲಾರ್ಡ್ಸ್‌ನಲ್ಲಿ ಟ್ರೋಫಿ ಅನಾವರಣಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ಎರಡೂ ಕ್ರಿಕೆಟ್ ಮಂಡಳಿಗಳು ತಿಳಿಸಿವೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20 ರಿಂದ ಹೆಡಿಂಗ್ಲಿ ಟೆಸ್ಟ್‌ನೊಂದಿಗೆ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು, ಈ ಸರಣಿಗೆ ಯಾವ ಹೆಸರಿಡಬೇಕು ಎಂಬುದು ಇದುವರೆಗೂ ನಿರ್ಧಾರವಾಗಿಲ್ಲ. ವಾಸ್ತವವಾಗಿ ಉಭಯ ತಂಡಗಳ ಈ ಟೆಸ್ಟ್ ಸರಣಿಯನ್ನು ಇದುವರೆಗೆ ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಆದರೀಗ ಈ ಸರಣಿಯ ಹೆಸರನ್ನು ಬದಲಿಸಲು ಎರಡೂ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದ್ದು, ಎರಡೂ ತಂಡಗಳ ಲೆಜೆಂಡರಿ ಆಟಗಾರರಾದ ಜೇಮ್ಸ್ ಆಂಡರ್ಸನ್ ಹಾಗೂ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರನ್ನೊಳಗೊಂಡಂತೆ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದಿಡಲು ನಿರ್ಧರಿಸಿವೆ. ಪೂರ್ವ ನಿಗದಿಯಂತೆ ಈ ಟ್ರೋಫಿಯನ್ನು ಸರಣಿಗೆ ಸ್ವಲ್ಪ ಮೊದಲು ಉದ್ಘಾಟಿಸಬೇಕಿತ್ತು ಆದರೆ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಅದನ್ನು ಸದ್ಯಕ್ಕೆ ಮುಂದೂಡಲು ನಿರ್ಧರಿಸಿವೆ.
WTC ಫೈನಲ್ನಲ್ಲಿ ಅನಾವರಣಗೊಳ್ಳಬೇಕಿತ್ತು
ಕಳೆದ ಹಲವಾರು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಪಟೌಡಿ ಟ್ರೋಫಿಗಾಗಿ ಆಡಲಾಗುತ್ತಿದ್ದ ಈ ಸರಣಿಯ ಹೆಸರನ್ನು ಈ ಬಾರಿ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಮಯದಲ್ಲಿ ಈ ಟ್ರೋಫಿಯನ್ನು ಅನಾವರಣಗೊಳಿಸಲು ಯೋಜನೆ ಹಾಕಿಕೊಂಡಿದ್ದವು ಆದರೆ ಈಗ ಅದನ್ನು ಮುಂದೂಡಲಾಗಿದೆ. ಇದಕ್ಕೆ ಕಾರಣ, ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತ. ಈ ಅಪಘಾತದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸುತ್ತಾ ಎರಡೂ ಮಂಡಳಿಗಳು ಈ ಅನಾವರಣ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿವೆ ಎಂದು ಕ್ರಿಕ್‌ಬಜ್ ವರದಿ ಬಹಿರಂಗಪಡಿಸಿದೆ.
ಸಾವನಪ್ಪಿದವರಿಗೆ ಸಂತಾಪ ಸೂಚನೆ
ವರದಿಯ ಪ್ರಕಾರ, ಡಬ್ಲ್ಯುಟಿಸಿ ಫೈನಲ್‌ನ ನಾಲ್ಕನೇ ದಿನದಂದು ಲಾರ್ಡ್ಸ್‌ನಲ್ಲಿ ಈ ಟ್ರೋಫಿಯನ್ನು ಬಿಡುಗಡೆ ಮಾಡಲು ಇಂಗ್ಲಿಷ್ ಮಂಡಳಿ ನಿರ್ಧರಿಸಿತ್ತು. ಆದರೆ ಇದಕ್ಕೂ ಎರಡು ದಿನಗಳ ಮೊದಲು, ಜೂನ್ 12 ರಂದು, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು. ಈ ವಿಮಾನವು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. 169 ಭಾರತೀಯ ನಾಗರಿಕರಲ್ಲದೆ, ಅದರಲ್ಲಿ 53 ಬ್ರಿಟಿಷ್ ನಾಗರಿಕರೂ ಇದ್ದರು. ವಿಮಾನದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಾತ್ರವಲ್ಲದೆ, ವಿಮಾನ ಅಪಘಾತಕ್ಕೀಡಾದ ವೈದ್ಯಕೀಯ ಕಾಲೇಜಿನಲ್ಲಿ ಹಾಜರಿದ್ದ ಅನೇಕ ವೈದ್ಯರು ಸೇರಿದಂತೆ 33 ಜನರು ಸಹ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
IND vs ENG: ವಿವಾದ ಹುಟ್ಟಿಸಿದ ಗಿಲ್ ಬ್ಯಾಟ್; ಸಚಿನ್- ಕೊಹ್ಲಿಯನ್ನು ನೋಡಿ ಕಲಿ ಎಂದ ಫ್ಯಾನ್ಸ್
ಇಷ್ಟರಲ್ಲೇ ಹೊಸ ದಿನಾಂಕ ಘೋಷಣೆ
ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಸಲುವಾಗಿ, ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಮುಂದುಡಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ಇಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯು ಮುಂಬರುವ ದಿನಗಳಲ್ಲಿ ಈ ಟ್ರೋಫಿಯನ್ನು ಹೊಸ ದಿನಾಂಕದಂದು ಬಿಡುಗಡೆ ಮಾಡಲಿವೆ. ಎರಡೂ ಮಂಡಳಿಗಳು ಶೀಘ್ರದಲ್ಲೇ ಹೊಸ ದಿನಾಂಕವನ್ನು ನಿರ್ಧರಿಸುತ್ತವೆ ಎಂದು ವರದಿ ಹೇಳಿದೆ. ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಜೇಮ್ಸ್ ಆಂಡರ್ಸನ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಸಹ ಆಹ್ವಾನಿಸಲಾಗಿತ್ತು. ಟ್ರೋಫಿ ಬಿಡುಗಡೆಯಾದ ದಿನದಂದು ಇಬ್ಬರೂ ಈ ಕಾರ್ಯಕ್ರಮದ ಭಾಗವಾಗುವ ನಿರೀಕ್ಷೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Sat, 14 June 25
