IND vs ENG: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಅನಾವರಣ ಮುಂದೂಡಿಕೆ; ಕಾರಣವೇನು?

Anderson-Tendulkar Trophy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಹೊಸ ಹೆಸರು "ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ" ಎಂದು ನಾಮಕರಣ ಮಾಡಲಾಗಿದೆ. ಆದರೆ, ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಈ ಟ್ರೋಫಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಪೂರ್ವ ನಿಗದಿತ WTC ಫೈನಲ್ ಸಮಯದಲ್ಲಿ ಲಾರ್ಡ್ಸ್‌ನಲ್ಲಿ ಟ್ರೋಫಿ ಅನಾವರಣಗೊಳ್ಳಬೇಕಿತ್ತು. ಮುಂದಿನ ದಿನಗಳಲ್ಲಿ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ಎರಡೂ ಕ್ರಿಕೆಟ್ ಮಂಡಳಿಗಳು ತಿಳಿಸಿವೆ.

IND vs ENG: ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಅನಾವರಣ ಮುಂದೂಡಿಕೆ; ಕಾರಣವೇನು?
Ind Vs eng

Updated on: Jun 14, 2025 | 8:56 PM

ಭಾರತ ಮತ್ತು ಇಂಗ್ಲೆಂಡ್‌ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20 ರಿಂದ ಹೆಡಿಂಗ್ಲಿ ಟೆಸ್ಟ್‌ನೊಂದಿಗೆ ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲು, ಈ ಸರಣಿಗೆ ಯಾವ ಹೆಸರಿಡಬೇಕು ಎಂಬುದು ಇದುವರೆಗೂ ನಿರ್ಧಾರವಾಗಿಲ್ಲ. ವಾಸ್ತವವಾಗಿ ಉಭಯ ತಂಡಗಳ ಈ ಟೆಸ್ಟ್ ಸರಣಿಯನ್ನು ಇದುವರೆಗೆ ಪಟೌಡಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಆದರೀಗ ಈ ಸರಣಿಯ ಹೆಸರನ್ನು ಬದಲಿಸಲು ಎರಡೂ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದ್ದು, ಎರಡೂ ತಂಡಗಳ ಲೆಜೆಂಡರಿ ಆಟಗಾರರಾದ ಜೇಮ್ಸ್ ಆಂಡರ್ಸನ್ ಹಾಗೂ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರನ್ನೊಳಗೊಂಡಂತೆ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದಿಡಲು ನಿರ್ಧರಿಸಿವೆ. ಪೂರ್ವ ನಿಗದಿಯಂತೆ ಈ ಟ್ರೋಫಿಯನ್ನು ಸರಣಿಗೆ ಸ್ವಲ್ಪ ಮೊದಲು ಉದ್ಘಾಟಿಸಬೇಕಿತ್ತು ಆದರೆ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಅದನ್ನು ಸದ್ಯಕ್ಕೆ ಮುಂದೂಡಲು ನಿರ್ಧರಿಸಿವೆ.

WTC ಫೈನಲ್​ನಲ್ಲಿ ಅನಾವರಣಗೊಳ್ಳಬೇಕಿತ್ತು

ಕಳೆದ ಹಲವಾರು ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಪಟೌಡಿ ಟ್ರೋಫಿಗಾಗಿ ಆಡಲಾಗುತ್ತಿದ್ದ ಈ ಸರಣಿಯ ಹೆಸರನ್ನು ಈ ಬಾರಿ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಬದಲಾಯಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಮಯದಲ್ಲಿ ಈ ಟ್ರೋಫಿಯನ್ನು ಅನಾವರಣಗೊಳಿಸಲು ಯೋಜನೆ ಹಾಕಿಕೊಂಡಿದ್ದವು ಆದರೆ ಈಗ ಅದನ್ನು ಮುಂದೂಡಲಾಗಿದೆ. ಇದಕ್ಕೆ ಕಾರಣ, ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತ. ಈ ಅಪಘಾತದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸುತ್ತಾ ಎರಡೂ ಮಂಡಳಿಗಳು ಈ ಅನಾವರಣ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿವೆ ಎಂದು ಕ್ರಿಕ್‌ಬಜ್ ವರದಿ ಬಹಿರಂಗಪಡಿಸಿದೆ.

ಸಾವನಪ್ಪಿದವರಿಗೆ ಸಂತಾಪ ಸೂಚನೆ

ವರದಿಯ ಪ್ರಕಾರ, ಡಬ್ಲ್ಯುಟಿಸಿ ಫೈನಲ್‌ನ ನಾಲ್ಕನೇ ದಿನದಂದು ಲಾರ್ಡ್ಸ್‌ನಲ್ಲಿ ಈ ಟ್ರೋಫಿಯನ್ನು ಬಿಡುಗಡೆ ಮಾಡಲು ಇಂಗ್ಲಿಷ್ ಮಂಡಳಿ ನಿರ್ಧರಿಸಿತ್ತು. ಆದರೆ ಇದಕ್ಕೂ ಎರಡು ದಿನಗಳ ಮೊದಲು, ಜೂನ್ 12 ರಂದು, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ, ಅದರಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು. ಈ ವಿಮಾನವು ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು. 169 ಭಾರತೀಯ ನಾಗರಿಕರಲ್ಲದೆ, ಅದರಲ್ಲಿ 53 ಬ್ರಿಟಿಷ್ ನಾಗರಿಕರೂ ಇದ್ದರು. ವಿಮಾನದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಾತ್ರವಲ್ಲದೆ, ವಿಮಾನ ಅಪಘಾತಕ್ಕೀಡಾದ ವೈದ್ಯಕೀಯ ಕಾಲೇಜಿನಲ್ಲಿ ಹಾಜರಿದ್ದ ಅನೇಕ ವೈದ್ಯರು ಸೇರಿದಂತೆ 33 ಜನರು ಸಹ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

IND vs ENG: ವಿವಾದ ಹುಟ್ಟಿಸಿದ ಗಿಲ್ ಬ್ಯಾಟ್; ಸಚಿನ್- ಕೊಹ್ಲಿಯನ್ನು ನೋಡಿ ಕಲಿ ಎಂದ ಫ್ಯಾನ್ಸ್

ಇಷ್ಟರಲ್ಲೇ ಹೊಸ ದಿನಾಂಕ ಘೋಷಣೆ

ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುವ ಸಲುವಾಗಿ, ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಮುಂದುಡಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ಎಂದು ಇಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯು ಮುಂಬರುವ ದಿನಗಳಲ್ಲಿ ಈ ಟ್ರೋಫಿಯನ್ನು ಹೊಸ ದಿನಾಂಕದಂದು ಬಿಡುಗಡೆ ಮಾಡಲಿವೆ. ಎರಡೂ ಮಂಡಳಿಗಳು ಶೀಘ್ರದಲ್ಲೇ ಹೊಸ ದಿನಾಂಕವನ್ನು ನಿರ್ಧರಿಸುತ್ತವೆ ಎಂದು ವರದಿ ಹೇಳಿದೆ. ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಜೇಮ್ಸ್ ಆಂಡರ್ಸನ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಸಹ ಆಹ್ವಾನಿಸಲಾಗಿತ್ತು. ಟ್ರೋಫಿ ಬಿಡುಗಡೆಯಾದ ದಿನದಂದು ಇಬ್ಬರೂ ಈ ಕಾರ್ಯಕ್ರಮದ ಭಾಗವಾಗುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:55 pm, Sat, 14 June 25