
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ನವೆಂಬರ್ 1ರ ಭಾನುವಾರ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ಕೊನೆಯ ಪಂದ್ಯವನ್ನೂ ಗೆದ್ದು ಸರಣಿಯನ್ನು ಗೆಲುವಿನೊಂದಿಗೆ ಮುಗಿಸುವ ಗುರಿ ಹೊಂದಿದೆ. ಆದರೆ, ಈಗಾಗಲೇ ಸರಣಿ ಕೈವಶವಾಗಿರುವುದರಿಂದ ಈ ಪಂದ್ಯದಲ್ಲಿ ಭಾರತಕ್ಕೆ ಸೋಲು-ಗೆಲುವಿನ ಒತ್ತಡವಿಲ್ಲ. ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್‌ಗಳ ಬೆವರಿಳಿಸಿ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಸಜ್ಜಾಗಿದೆ. ಇದೇ ವೇಳೆ ಅಂತಿಮ ಪಂದ್ಯದಲ್ಲಿ ಬೆಂಚ್ ಬಲವನ್ನು ಪರೀಕ್ಷಿಸಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಮುಂದಾಗುವ ಸಾಧ್ಯತೆಯಿದೆ.
ನಾಲ್ಕನೇ ಪಂದ್ಯದಲ್ಲಿ ಇಶಾನ್ ಕಿಶನ್ ತಂಡಕ್ಕೆ ಮರಳಿದ್ದರಿಂದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಅಂತಿಮ ಪಂದ್ಯದಲ್ಲಿ ವೈಭವ್‌ಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ. ಇತ್ತ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಭಿಷೇಕ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಅಭಿಷೇಕ್ ಹೊರಗುಳಿದರೆ, ಸಂಜು ಸ್ಯಾಮ್ಸನ್ ಜೊತೆ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಐದನೇ ಟಿ20 ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಿವಂ ದುಬೆ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಅಗತ್ಯವಿದ್ದಾಗ ವೇಗದ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಕಳೆದ ನಾಲ್ಕು ಪಂದ್ಯಗಳಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಹೆಚ್ಚು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಬೌಲಿಂಗ್ ಮಾಡಿದ ಸಂದರ್ಭದಲ್ಲೂ ಅವರು ನಿರೀಕ್ಷಿತ ಪರಿಣಾಮ ಬೀರಿಲ್ಲ. ಮತ್ತೊಂದೆಡೆ, ಶಿವಂ ದುಬೆ ತಂಡದಲ್ಲಿ ಫಿನಿಷರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡುವುದು ತಂಡದ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಬಹುದು.
ಸರಣಿ ಗೆದ್ದರೂ ಸಮಾಧಾನವಿಲ್ಲ: ಅಂತಿಮ ಟಿ20 ಗೆದ್ದು ಕಿವೀಸ್‌ಗೆ ಶಾಕ್ ನೀಡುತ್ತಾ ಭಾರತ?
ಐದನೇ ಪಂದ್ಯ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿದ್ದು, ಇಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಭಾರತದ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದರರ್ಥ ಭುವನೇಶ್ವರ್ ಕುಮಾರ್ ಅವರಿಗೆ ಅಂತಿಮ ಪಂದ್ಯದಲ್ಲೂ ಅವಕಾಶ ಸಿಗುವುದು ಅನುಮಾನ. ತಂಡವು ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್ ಮತ್ತು ಮಯಾಂಕ್ ಯಾದವ್ ಒಳಗೊಂಡ ಮೂವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಬಹುದು.
ಇನ್ನು ಅಕ್ಷರ್ ಪಟೇಲ್ ಏಕೈಕ ಪ್ರಮುಖ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇವರ ಜೊತೆಗೆ ಶಿವಂ ದುಬೆ ಮತ್ತು ನಮನ್ ಧೀರ್ ಕೂಡ ಹೆಚ್ಚುವರಿ ಬೌಲಿಂಗ್ ಆಯ್ಕೆಗಳಾಗಿ ತಂಡಕ್ಕೆ ನೆರವಾಗಬಹುದು.
ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗ: ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ಅಕ್ಷರ್ ಪಟೇಲ್, ಶಿವಂ ದುಬೆ, ತಿಲಕ್ ವರ್ಮಾ, ನಮನ್ ಧೀರ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್.