10 ಸಿಕ್ಸರ್, 183 ರನ್..! 21 ವರ್ಷಗಳ ಹಿಂದೆ ಧೋನಿ ಅಬ್ಬರಕ್ಕೆ ಬೆಚ್ಚಿಬಿದ್ದಿತ್ತು ಶ್ರೀಲಂಕಾ
ಅಕ್ಟೋಬರ್ 31, 2005ರಂದು ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ 183* ರನ್ ಗಳಿಸಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದರು. ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ 299 ರನ್ ಗುರಿಯನ್ನು ಬೆನ್ನಟ್ಟುವಾಗ ಧೋನಿ 3ನೇ ಕ್ರಮಾಂಕದಲ್ಲಿ ಕೇವಲ 145 ಎಸೆತಗಳಲ್ಲಿ 15 ಬೌಂಡರಿ, 10 ಸಿಕ್ಸರ್ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಇದು ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದ ಇನ್ನಿಂಗ್ಸ್.

2005ರ ಅಕ್ಟೋಬರ್ 31.. ಈ ದಿನ ಮಹೇಂದ್ರ ಸಿಂಗ್ ಧೋನಿ ಹಾಗೂ ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ ದಿನ. ಉದ್ದನೆಯ ಕೂದಲು ಹೊಂದಿದ್ದ 24 ವರ್ಷದ ಯುವ ಆಟಗಾರ ಧೋನಿ ಅಂದು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದರು. ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 183 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕೇವಲ 145 ಎಸೆತಗಳಲ್ಲಿ ಧೋನಿ ಈ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 299 ರನ್‌ಗಳ ಕಠಿಣ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತ್ತು. ಅಂದಿನ ಪಂದ್ಯ ಧೋನಿಯ ಕ್ರಿಕೆಟ್ ಜೀವನಕ್ಕೆ ಮಹತ್ವದ ತಿರುವು ನೀಡಿತ್ತು.
ಸಚಿನ್ ಬೇಗ ಔಟ್, ಧೋನಿಗೆ ಸಿಕ್ಕಿತು ಬಡ್ತಿ
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 298 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಶ್ರೀಲಂಕಾ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕರ 147 ಎಸೆತಗಳಲ್ಲಿ ಅಜೇಯ 138 ರನ್ ಸಿಡಿಸಿ ಮಿಂಚಿದ್ದರು. ಮಹೇಲ ಜಯವರ್ಧನೆ ಕೂಡ 71 ರನ್‌ಗಳ ಕಾಣಿಕೆ ನೀಡಿದ್ದರು. ಇದರೊಂದಿಗೆ ಭಾರತ ತಂಡಕ್ಕೆ 299 ರನ್‌ಗಳ ಕಠಿಣ ಗುರಿ ಎದುರಾಗಿತ್ತು. ಆ ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಸುಲಭದ ಮಾತಾಗಿರಲಿಲ್ಲ.
ಇನ್ನು ಗುರಿ ಬೆನ್ನಟ್ಟಿದ ಭಾರತ ತಂಡಕ್ಕೂ ಆರಂಭದಲ್ಲೇ ಆಘಾತ ಎದುರಾಗಿತ್ತು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೊದಲ ಓವರ್‌ನಲ್ಲೇ ಚಾಮಿಂದಾ ವಾಸ್ ಬೌಲಿಂಗ್‌ನಲ್ಲಿ ಕೇವಲ 2 ರನ್ ಗಳಿಸಿ ಔಟಾಗಿದ್ದರು. ಆಗ ನಾಯಕ ರಾಹುಲ್ ದ್ರಾವಿಡ್ ಮತ್ತು ಕೋಚ್ ಗ್ರೆಗ್ ಚಾಪೆಲ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡರು. ಸಾಮಾನ್ಯ ಬ್ಯಾಟಿಂಗ್ ಕ್ರಮವನ್ನು ಬದಲಿಸಿ ಯುವ ಆಟಗಾರ ಮಹೇಂದ್ರ ಸಿಂಗ್ ಧೋನಿಯನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದರು. ಈ ಒಂದು ನಿರ್ಧಾರ ಭಾರತೀಯ ಕ್ರಿಕೆಟ್ ಇತಿಹಾಸದ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ ಉಳಿಯಿತು.
A KNOCK FOR THE AGES! 🤯🔥
On this day in 2005, MS Dhoni announced his arrival as a batting superstar with an unbeaten 183 off just 145 balls against Sri Lanka in Jaipur.
#MSDhoni #TeamIndia #CricketMatlabCREX https://t.co/JgKs4XAGki
— CREX (@Crex_live) October 31, 2026
85 ಎಸೆತಗಳಲ್ಲಿ ಶತಕ ಬಾರಿಸಿದ ಧೋನಿ
ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಧೋನಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಶ್ರೀಲಂಕಾ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೆ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕೂಡ ಧೋನಿಯ ಅಬ್ಬರದ ಮುಂದೆ ಮಂಕಾದರು. ಕೇವಲ 85 ಎಸೆತಗಳಲ್ಲಿ ಶತಕ ಪೂರೈಸಿದ ಧೋನಿ, ತಮ್ಮ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಮೈದಾನದಾದ್ಯಂತ ಸಿಕ್ಸರ್‌ಗಳ ಸುರಿಮಳೆಗೈದು ಶ್ರೀಲಂಕಾ ಬೌಲರ್‌ಗಳನ್ನು ಕಂಗೆಡಿಸಿದ್ದರು.
ಧೋನಿ ಚೇಷ್ಟೆಗೆ ಹೈರಾಣಾದ ಸಾಕ್ಷಿ; ವಿಡಿಯೋ ವೈರಲ್
ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಧೋನಿಗೆ ಕಾಲುಗಳಲ್ಲಿ ತೀವ್ರ ಸೆಳೆತ ಕಾಣಿಸಿಕೊಂಡಿತ್ತು. ಆದರೂ ಅವರು ತಮ್ಮ ಆಕ್ರಮಣಕಾರಿ ಆಟವನ್ನು ನಿಲ್ಲಿಸಲಿಲ್ಲ. ಕೊನೆಯವರೆಗೂ ಅಜೇಯವಾಗಿ ಉಳಿದು ಭಾರತಕ್ಕೆ ಗೆಲುವು ತಂದುಕೊಟ್ಟರು. ತಿಲಕರತ್ನೆ ದಿಲ್ಶನ್ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಪಂದ್ಯಕ್ಕೆ ತೆರೆ ಎಳೆದಿದ್ದರು. ಭಾರತ ತಂಡ 46.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 303 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇನ್ನೂ 23 ಎಸೆತಗಳು ಬಾಕಿ ಇರುವಾಗಲೇ ಭಾರತ ಗುರಿ ತಲುಪಿತ್ತು. ಧೋನಿಯ ಈ 183 ರನ್‌ಗಳ ಅಜೇಯ ಇನ್ನಿಂಗ್ಸ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Sat, 31 October 26




