ಕೊಹ್ಲಿ ದೊಡ್ಡ ಸೂಪರ್‌ಸ್ಟಾರ್, ಆದರೂ ತುಂಬಾ ಸರಳ ವ್ಯಕ್ತಿ: ಡಫಿ ಮೆಚ್ಚುಗೆ

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ಕಾತರರಾಗಿದ್ದಾರೆ. ಆರ್‌ಸಿಬಿ ಸಹ ಆಟಗಾರ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಡಫಿ, ಅವರ ಸರಳತೆ ಮತ್ತು ವೃತ್ತಿಪರತೆಗೆ ಮಾರುಹೋಗಿದ್ದಾರೆ. ಭಾರತದ ಪಿಚ್‌ಗಳಲ್ಲಿ ಕೊಹ್ಲಿ ನೀಡಿದ್ದ ಸಲಹೆಗಳನ್ನು ಸ್ಮರಿಸಿರುವ ಡಫಿ, ಈ ಕದನಕ್ಕೆ ಉತ್ತಮ ತಯಾರಿ ನಡೆಸಿಕೊಂಡಿದ್ದು, ಇಬ್ಬರ ನಡುವಿನ ಕದನ ರೋಚಕವಾಗಲಿದೆ.

ಕೊಹ್ಲಿ ದೊಡ್ಡ ಸೂಪರ್‌ಸ್ಟಾರ್, ಆದರೂ ತುಂಬಾ ಸರಳ ವ್ಯಕ್ತಿ: ಡಫಿ ಮೆಚ್ಚುಗೆ
ಜೇಕಬ್ ಡಫಿ. ವಿರಾಟ್ ಕೊಹ್ಲಿ

Updated on: Nov 01, 2026 | 3:39 PM

ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಜೇಕಬ್ ಡಫಿ ಅವರು ನವೆಂಬರ್ 4ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ತಮ್ಮ ಆರ್‌ಸಿಬಿ ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಎದುರಿಸಲು ಕಾತರರಾಗಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ಅನುಭವ ಹೊಂದಿರುವ ಡಫಿ, 37 ವರ್ಷದ ಈ ಅನುಭವಿ ಬ್ಯಾಟರ್ ವಿರುದ್ಧ 50 ಓವರ್‌ಗಳ ಪಂದ್ಯದಲ್ಲಿ ಕಣಕ್ಕಿಳಿಯಲು ಉತ್ತಮ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಆಕ್ಲೆಂಡ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಡಫಿ, ವಿರಾಟ್ ಕೊಹ್ಲಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ‘ನಾನು ನಿನ್ನೆ ಅವರನ್ನು ಭೇಟಿಯಾಗಿದ್ದೆ. ಅವರು ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಅಲ್ಲಿ ಅವರನ್ನು ಭೇಟಿಯಾಗಿದ್ದು ಖುಷಿ ನೀಡಿತು. ಅವರು ನನ್ನೊಂದಿಗೆ ತುಂಬಾ ಆತ್ಮೀಯವಾಗಿ ನಡೆದುಕೊಂಡರು’ ಎಂದು ಡಫಿ ಹೇಳಿದ್ದಾರೆ.

ಆರಾಧ್ಯ ದೈವದಂತಿರುವ ಕೊಹ್ಲಿ

ಭಾರತದಲ್ಲಿ ಕೊಹ್ಲಿ ಹೊಂದಿರುವ ಜನಪ್ರಿಯತೆ ಮತ್ತು ಅವರ ಸರಳ ವ್ಯಕ್ತಿತ್ವದ ಬಗ್ಗೆಯೂ ಡಫಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವದಂತಿರುವ ಕೊಹ್ಲಿ, ವಿದೇಶಿ ಆಟಗಾರರೊಂದಿಗೂ ಆತ್ಮೀಯವಾಗಿ ಬೆರೆಯುತ್ತಾರೆ. ಭಾರತದಲ್ಲಿ ಕೊಹ್ಲಿ ಒಬ್ಬ ದೊಡ್ಡ ಸೂಪರ್‌ಸ್ಟಾರ್. ಅವರನ್ನು ಕ್ರಿಕೆಟ್ ದೇವರಂತೆ ಆರಾಧಿಸುವ ಅಭಿಮಾನಿಗಳಿದ್ದಾರೆ. ಅಷ್ಟೊಂದು ಜನಪ್ರಿಯತೆ ಹೊಂದಿದ್ದರೂ ಅವರು ತುಂಬಾ ಸರಳ ವ್ಯಕ್ತಿ. ಆರ್‌ಸಿಬಿ ತಂಡದಲ್ಲಿದ್ದ ನಮ್ಮಂತಹ ವಿದೇಶಿ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು. ಅವರ ಈ ಗುಣ ನನಗೆ ತುಂಬಾ ಇಷ್ಟವಾಯಿತು. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಬಳಿಕ ಇದೀಗ ಎದುರಾಳಿಯಾಗಿ ಆಡುವ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ’ ಎಂದು ಡಫಿ ತಿಳಿಸಿದ್ದಾರೆ.

ಅವರ ಬ್ಯಾಟಿಂಗ್ ಬಗ್ಗೆ ಅರಿವಿದೆ

‘ಕೊಹ್ಲಿ ಅವರ ಕೆಲಸದ ಮೇಲಿನ ಶ್ರದ್ಧೆ ಅದ್ಭುತವಾಗಿದೆ. ನೆಟ್ಸ್‌ನಲ್ಲಿ ಅವರು ಯಾವಾಗಲೂ ಮೊದಲು ಬ್ಯಾಟಿಂಗ್ ಅಭ್ಯಾಸಕ್ಕೆ ಬರುತ್ತಿದ್ದರು. ನಾನು ಕೂಡ ಮೊದಲ ಬೌಲರ್ ಆಗಿ ಅಭ್ಯಾಸ ಆರಂಭಿಸುತ್ತಿದ್ದೆ. ಹೀಗಾಗಿ ನಾವಿಬ್ಬರೂ ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಪರಸ್ಪರ ಎದುರಾಗಿದ್ದೇವೆ. ಇದು ಉತ್ತಮ ಅನುಭವವಾಗಿತ್ತು. ಈಗ ಅವರಿಗೆ ನನ್ನ ಬೌಲಿಂಗ್ ಬಗ್ಗೆ ಸಾಕಷ್ಟು ತಿಳಿದಿದೆ. ಹಾಗೆಯೇ ನನಗೂ ಅವರ ಬ್ಯಾಟಿಂಗ್ ಬಗ್ಗೆ ಅರಿವಿದೆ. ಹೀಗಾಗಿ ಈ ಮುಖಾಮುಖಿಗೆ ಇಬ್ಬರೂ ಉತ್ತಮ ತಯಾರಿ ಮಾಡಿಕೊಂಡಿದ್ದೇವೆ’.

‘ಇದು ನನ್ನ ಕೊನೆಯ ವಿಶ್ವಕಪ್..!’: ನಿವೃತ್ತಿ ಖಚಿತಪಡಿಸಿದ ವಿರಾಟ್ ಕೊಹ್ಲಿ

‘ಭಾರತದ ಪ್ರತಿಯೊಂದು ಪಿಚ್‌ನ ಸ್ವರೂಪವೂ ವಿಭಿನ್ನವಾಗಿರುತ್ತದೆ. ಅಂತಹ ಪಿಚ್‌ಗಳಲ್ಲಿ ಯಾವ ರೀತಿಯ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಬೇಕು, ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೊಹ್ಲಿ ಸಾಕಷ್ಟು ಮಾಹಿತಿ ನೀಡಿದ್ದರು. ನಾನು ಯಾವ ರೀತಿ ಬೌಲಿಂಗ್ ಮಾಡಬಹುದು ಎಂಬ ಸಲಹೆಗಳನ್ನೂ ನೀಡಿದ್ದರು. ಅವರಿಂದ ಸಿಕ್ಕ ಇಂತಹ ಸಣ್ಣಪುಟ್ಟ ಸಲಹೆಗಳು ನನಗೆ ಸಾಕಷ್ಟು ಉಪಯುಕ್ತವಾಗಿವೆ’ ಎಂದು ಡಫಿ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us