ಯಾವುದೇ ತಂಡವಿರಲಿ ಸೋಲಿಸುತ್ತೇವೆ: ನ್ಯೂಜಿಲೆಂಡ್ ಸರಣಿಗೂ ಮುನ್ನ ಗಿಲ್ ಖಡಕ್ ಹೇಳಿಕೆ

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ನವೆಂಬರ್ 4 ರಿಂದ ಆರಂಭವಾಗಲಿದೆ. ನಾಯಕ ಶುಭ್​ಮನ್ ಗಿಲ್ ತಂಡದ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರಿಗೆ ಇದು 2027ರ ವಿಶ್ವಕಪ್‌ಗೆ ಉತ್ತಮ ಸಿದ್ಧತೆ ಹಾಗೂ ಅನುಭವ ನೀಡಲಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಬೌಲರ್‌ಗಳ ಸಾಮರ್ಥ್ಯ ಪರೀಕ್ಷೆಗೆ ಇದು ಉತ್ತಮ ಅವಕಾಶ ಎಂದು ಗಿಲ್ ಹೇಳಿದ್ದಾರೆ.

ಯಾವುದೇ ತಂಡವಿರಲಿ ಸೋಲಿಸುತ್ತೇವೆ: ನ್ಯೂಜಿಲೆಂಡ್ ಸರಣಿಗೂ ಮುನ್ನ ಗಿಲ್ ಖಡಕ್ ಹೇಳಿಕೆ
ಶುಭ್​ಮನ್ ಗಿಲ್

Updated on: Nov 03, 2026 | 4:29 PM

ಇದೇ ನವೆಂಬರ್ 4ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಟಿ20 ಸರಣಿಯಂತೆ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಈ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ತಂಡದ ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈದಾನಕ್ಕಿಳಿಯುವ ಯಾವುದೇ ಭಾರತೀಯ ತಂಡ ಎದುರಾಳಿಯನ್ನು ಸೋಲಿಸುವ ಗುಣಮಟ್ಟ ಮತ್ತು ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯು ತಂಡದ ಸಾಮರ್ಥ್ಯ ಪರೀಕ್ಷಿಸಲು ಉತ್ತಮ ಅವಕಾಶವಾಗಿದೆ. ಜೊತೆಗೆ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತಕ್ಕೆ ಈ ಸರಣಿ ಸಾಕಷ್ಟು ಅನುಭವ ನೀಡಲಿದೆ ಎಂದಿದ್ದಾರೆ.

ಯುವ ಆಟಗಾರರ ಆತ್ಮವಿಶ್ವಾಸ ಹೆಚ್ಚಲಿದೆ

ವಿಶೇಷವಾಗಿ ತಂಡದಲ್ಲಿರುವ ಯುವ ಆಟಗಾರರಿಗೆ ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ಯಶಸ್ಸು ಸಾಧಿಸಿದರೆ ಯುವ ಆಟಗಾರರ ಆತ್ಮವಿಶ್ವಾಸ ಹೆಚ್ಚಲಿದೆ. ಅಲ್ಲದೆ, ವಿಶ್ವಕಪ್‌ಗೆ ಬೇಕಾದ ಬಲಿಷ್ಠ ತಂಡ ಲಭ್ಯವಿಲ್ಲದ ಸಂದರ್ಭದಲ್ಲೂ ಬೇರೆ ಆಟಗಾರರ ನೆರವಿನಿಂದ ಗೆಲುವು ಸಾಧಿಸಬಹುದು ಎಂಬ ನಂಬಿಕೆ ತಂಡದಲ್ಲಿ ಮೂಡಲಿದೆ ಎಂದು ಗಿಲ್ ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾದಿನ ಮಂಗಳವಾರ ಆಕ್ಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಿಲ್, ‘ನನ್ನ ಪ್ರಕಾರ ಮೈದಾನಕ್ಕಿಳಿಯುವ ಯಾವುದೇ ಭಾರತೀಯ ತಂಡ ಎದುರಾಳಿಯನ್ನು ಸೋಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ಸಿಗಲಿದೆ. ವಿಶ್ವಕಪ್‌ಗೆ ನಾವು ಬಯಸಿದ ಸಂಪೂರ್ಣ ತಂಡ ಯಾವುದಾದರೂ ಕಾರಣಕ್ಕೆ ಲಭ್ಯವಿಲ್ಲದಿದ್ದರೂ, ವಿಭಿನ್ನ ಪರಿಸ್ಥಿತಿಗಳಲ್ಲಿ ಎದುರಾಳಿಗಳನ್ನು ಸೋಲಿಸುವ ಸಾಮರ್ಥ್ಯ ನಮ್ಮ ತಂಡಕ್ಕಿದೆ ಎಂಬ ವಿಶ್ವಾಸವೂ ಮೂಡಲಿದೆ. ಈ ದೃಷ್ಟಿಯಿಂದ ನ್ಯೂಜಿಲೆಂಡ್‌ನಲ್ಲಿ ಸರಣಿ ಗೆಲ್ಲುವುದು ನಮಗೆ ದೊಡ್ಡ ಆತ್ಮವಿಶ್ವಾಸ ನೀಡಲಿದೆ’ ಎಂದು ಹೇಳಿದ್ದಾರೆ.

ಅನುಭವಿಗಳ ಬ್ಯಾಟಿಂಗ್ ಯುವ ಬೌಲಿಂಗ್ ಪಡೆ

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣದೊಂದಿಗೆ ಕಣಕ್ಕಿಳಿಯುತ್ತಿದೆ. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಅನುಭವಿ ಆಟಗಾರರಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಯುವ ಆಟಗಾರರೇ ಹೆಚ್ಚಾಗಿದ್ದಾರೆ. ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಭಾರತದ ವೈಟ್‌ಬಾಲ್ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ಮತ್ತೊಬ್ಬ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೂ ನ್ಯೂಜಿಲೆಂಡ್ ಸರಣಿಯಲ್ಲಿ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಅಂಶುಲ್ ಕಾಂಬೋಜ್, ಗುರ್ನೂರ್ ಬ್ರಾರ್, ಔಕಿಬ್ ನಬಿ ಹಾಗೂ ಕುಲ್ದೀಪ್ ಯಾದವ್ ಅವರನ್ನು ಒಳಗೊಂಡ ಬೌಲಿಂಗ್ ಪಡೆ ಈ ಸರಣಿಯಲ್ಲಿ ಕಣಕ್ಕಿಳಿಯಲಿದೆ.

2027ರ ವಿಶ್ವಕಪ್‌ಗೆ ತಯಾರಿ

2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ನ್ಯೂಜಿಲೆಂಡ್ ಪ್ರವಾಸ ಭಾರತಕ್ಕೆ ಮಹತ್ವದ್ದಾಗಿದೆ ಎಂದು ಗಿಲ್ ಹೇಳಿದ್ದಾರೆ. ಈ ಸರಣಿಯಲ್ಲಿ ಎದುರಾಗುವ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳು ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ಹೆಚ್ಚು ಹೋಲಿಕೆಯಾಗಲಿವೆ ಎಂಬುದು ಅವರ ಅಭಿಪ್ರಾಯ. ‘ವಿಶ್ವಕಪ್ ನಮ್ಮ ಮನಸ್ಸಿನಲ್ಲಂತೂ ಇದ್ದೇ ಇರುತ್ತದೆ. ನ್ಯೂಜಿಲೆಂಡ್‌ನಲ್ಲಿನ ಪರಿಸ್ಥಿತಿಗಳು ನಾವು ಆಡಲಿರುವ ಇತರ ಕೆಲವು ದೇಶಗಳಿಗಿಂತ ದಕ್ಷಿಣ ಆಫ್ರಿಕಾದ ಪರಿಸ್ಥಿತಿಗಳಿಗೆ ಹೆಚ್ಚು ಹೋಲಿಕೆಯಾಗಲಿವೆ. ಈ ಅನುಭವ ನಮ್ಮ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ಉಪಯುಕ್ತವಾಗಲಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿರುವ ಬಿಸಿಲಿನ ವಾತಾವರಣಕ್ಕಿಂತ ಈ ಸಮಯದ ಹವಾಮಾನ ದಕ್ಷಿಣ ಆಫ್ರಿಕಾದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಹತ್ತಿರವಾಗಿರಲಿದೆ. ಹೀಗಾಗಿ ಈ ಪ್ರವಾಸ ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ನೆರವಾಗಲಿದೆ’ ಎಂದು ಗಿಲ್ ತಿಳಿಸಿದ್ದಾರೆ.

ಭಾರತ- ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ; ಪೂರ್ಣ ವಿವರ ಇಲ್ಲಿದೆ

ಯುವ ಬೌಲರ್‌ಗಳ ಸಾಮರ್ಥ್ಯದ ಮೇಲೆ ಗಿಲ್ ವಿಶ್ವಾಸ

ನ್ಯೂಜಿಲೆಂಡ್‌ನ ವಿವಿಧ ಕ್ರೀಡಾಂಗಣಗಳಲ್ಲಿ ಆಡುವುದರಿಂದ ತಂಡಕ್ಕೆ ಹೆಚ್ಚಿನ ಅನುಭವ ಸಿಗಲಿದೆ ಎಂದು ಗಿಲ್ ಹೇಳಿದ್ದಾರೆ. ಇಲ್ಲಿನ ಪಿಚ್‌ಗಳಲ್ಲಿ ಉತ್ತಮ ಬೌನ್ಸ್ ಇರುವುದರಿಂದ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ಸವಾಲು ಎದುರಾಗಲಿದೆ. ಯುವ ಬೌಲಿಂಗ್ ಪಡೆ ಹೊಂದಿದ್ದರೂ ಈ ಪರಿಸ್ಥಿತಿಗಳಲ್ಲಿ ಯಶಸ್ಸು ಸಾಧಿಸಲು ಬೇಕಾದ ಎಲ್ಲಾ ಸಾಮರ್ಥ್ಯ ತಂಡದಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನಾವು ವಿಭಿನ್ನ ಕ್ರೀಡಾಂಗಣಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದಷ್ಟು ಅನುಭವ ಹೆಚ್ಚಾಗುತ್ತದೆ. ನಾನು ಗಮನಿಸಿದಂತೆ ಇಲ್ಲಿನ ಪಿಚ್‌ಗಳಲ್ಲಿ ಉತ್ತಮ ಬೌನ್ಸ್ ಸಿಗುತ್ತದೆ. ಇದು ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಬ್ಬರಿಗೂ ಸವಾಲಾಗಲಿದೆ. ಎರಡೂ ತಂಡಗಳಿಗೂ ಇದು ಉತ್ತಮ ಪರೀಕ್ಷೆಯಾಗಲಿದೆ. ನಮ್ಮ ಬೌಲಿಂಗ್ ಪಡೆ ಯುವ ಆಟಗಾರರನ್ನು ಒಳಗೊಂಡಿದ್ದರೂ, ಈ ಪರಿಸ್ಥಿತಿಗಳಲ್ಲಿ ಯಶಸ್ಸು ಸಾಧಿಸಲು ಬೇಕಾದ ಎಲ್ಲಾ ಗುಣಗಳು ನಮ್ಮಲ್ಲಿವೆ. ಈ ಅನುಭವದಿಂದ ಪಾಠ ಕಲಿತು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದು ಗಿಲ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us