AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSLಗೆ ಕೈಕೊಟ್ಟು IPLಗೆ ಬರ್ತಾರಾ ಗ್ಲೆನ್ ಮ್ಯಾಕ್ಸ್​ವೆಲ್?

ಆಸ್ಟ್ರೇಲಿಯಾದ ದೈತ್ಯ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವುದು ಜಾಗತಿಕ ಕ್ರಿಕೆಟ್ ಲೋಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗ 'ಬಿಗ್ ಶೋ' ಇಂತಹದ್ದೊಂದು ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನ ಹಾಗೂ ಕುತೂಹಲಗಳಿಗೆ ಕಾರಣವಾಗಿದೆ.

PSLಗೆ ಕೈಕೊಟ್ಟು IPLಗೆ ಬರ್ತಾರಾ ಗ್ಲೆನ್ ಮ್ಯಾಕ್ಸ್​ವೆಲ್?
Glenn MaxwellImage Credit source: IPL
ಝಾಹಿರ್ ಯೂಸುಫ್
|

Updated on: Nov 03, 2026 | 12:05 PM

Share

ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅದೂ ಸಹ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ! ಕಳೆದ ಸೀಸನ್‌ನಲ್ಲಿ ಐಪಿಎಲ್‌ನಿಂದ ಸ್ವಯಂಪ್ರೇರಿತರಾಗಿ ಹಿಂದೆ ಸರಿದಿದ್ದ ‘ಬಿಗ್ ಶೋ’, ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಮತ್ತೆ ಐಪಿಎಲ್​ಗೆ ಎಂಟ್ರಿ ಕೊಡಲು ಪ್ಲ್ಯಾನ್ ರೂಪಿಸಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಪ್ರಶ್ನೆಗೆ ಸದ್ಯ ಉತ್ತರ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ ಹರಾಜಿನಲ್ಲಿ ಎಂದಿಗೂ ‘ಅನ್‌ಸೋಲ್ಡ್’ ಆದ ಆಟಗಾರನಲ್ಲ. ಫಾರ್ಮ್ ಅಥವಾ ಬೇಡಿಕೆಯ ಕೊರತೆಯಿಂದಾಗಿ ಅವರು ಐಪಿಎಲ್‌ನಿಂದ ಹೊರಗುಳಿದಿಲ್ಲ, ಬದಲಿಗೆ ಡಿಸೆಂಬರ್ 2025ರಲ್ಲಿ ನಡೆದ ಐಪಿಎಲ್ 2026ರ ಹರಾಜಿನಿಂದ ತಾವೇ ಸ್ವತಃ ಮುಂಬರುವ ಸೀಸನ್‌ನಿಂದ ಹಿಂದೆ ಸರಿಯುವ ದೊಡ್ಡ ನಿರ್ಧಾರ ಕೈಗೊಂಡಿದ್ದರು.

2025ರ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 4.20 ಕೋಟಿಗೆ ಆಡಿದ್ದ ಮ್ಯಾಕ್ಸ್‌ವೆಲ್ ತೀವ್ರ ಕಳಪೆ ಫಾರ್ಮ್ ಎದುರಿಸಿದ್ದರು (7 ಪಂದ್ಯಗಳಲ್ಲಿ ಕೇವಲ 48 ರನ್). ಇದರ ನಡುವೆ ಅವರು ಬೆರಳಿನ ಗಾಯಕ್ಕೂ ತುತ್ತಾಗಿ ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರು.

ಸತತ ಕ್ರಿಕೆಟ್ ಮತ್ತು ಗಾಯಗಳಿಂದಾಗಿ ಅವರ ದೇಹದ ಮೇಲಿನ ಒತ್ತಡ ಹೆಚ್ಚಾಗಿದ್ದರಿಂದ, ತಮ್ಮ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಮತ್ತು ಮಾನಸಿಕ ವಿಶ್ರಾಂತಿಗಾಗಿ ಅವರು ಹರಾಜಿನಿಂದ ದೂರ ಉಳಿದರು. ಜೊತೆಗೆ, ಸತತ ಕಳಪೆ ಪ್ರದರ್ಶನಗಳಿಂದಾಗಿ ಫ್ರಾಂಚೈಸಿಗಳು ಹರಾಜಿನಲ್ಲಿ ದೊಡ್ಡ ಮೊತ್ತ ಹೂಡಲು ಹಿಂದೇಟು ಹಾಕುವ ಸಾಧ್ಯತೆ ಇದ್ದಿದ್ದರಿಂದ, ಹರಾಜಿಗೆ ಹೆಸರು ನೀಡುವ ಬದಲು ಲೀಗ್‌ಗೆ ಗೌರವಪೂರ್ವಕವಾಗಿ ಧನ್ಯವಾದ ತಿಳಿಸಿ ತಾವೇ ಹಿಂದೆ ಸರಿದು ತಮ್ಮ ಮಾರುಕಟ್ಟೆ ಮೌಲ್ಯ ಮತ್ತು ಗೌರವವನ್ನು ಕಾಯ್ದುಕೊಂಡಿದ್ದರು.

ಯಾವಾಗಲೂ ಅಚ್ಚರಿಗಳ ಸರದಾರನಾಗಿರುವ ‘ಬಿಗ್ ಶೋ’, ಈ ಸ್ವಯಂಪ್ರೇರಿತ ಬಿಡುವಿನ ನಂತರ ಮತ್ತೆ ಐಪಿಎಲ್ ಅಖಾಡಕ್ಕೆ ರಗಡ್ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಮ್ಯಾಕ್ಸ್‌ವೆಲ್ ನಿವೃತ್ತಿ ಘೋಷಿಸಿರುವುದು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಆಸ್ಟ್ರೇಲಿಯಾದ ದೇಶಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮಾತ್ರ.

ಅವರು ಜಾಗತಿಕ ಫ್ರಾಂಚೈಸಿ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಸರಿದಿಲ್ಲ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಲು 2027-28ರ ಸೀಸನ್‌ವರೆಗೆ ಒಪ್ಪಂದ ವಿಸ್ತರಿಸಿಕೊಂಡಿದ್ದಾರೆ. ಅಂದರೆ, ಅವರಲ್ಲಿ ಇನ್ನೂ ಕ್ರಿಕೆಟ್ ಆಡುವ ಹಸಿವು ಮತ್ತು ಟಿ20 ಕ್ರಿಕೆಟ್‌ಗೆ ಬೇಕಾದ ಬ್ಯಾಟಿಂಗ್ ಶಕ್ತಿ ಜೀವಂತವಾಗಿದೆ.

ಅಂತಾರಾಷ್ಟ್ರೀಯ ಪಂದ್ಯಗಳ ಒತ್ತಡವಿಲ್ಲದೆ, ಕೇವಲ ಫಿಟ್‌ನೆಸ್ ಕಡೆ ಗಮನ ಹರಿಸಲಿರುವ ಮ್ಯಾಕ್ಸ್‌ವೆಲ್, ಮುಂಬರುವ ಸೀಸನ್‌ಗಳಲ್ಲಿ ಯಾವುದೇ ತಂಡಕ್ಕೆ ಬಿರುಸಿನ ಆಲ್‌ರೌಂಡರ್ ಅಗತ್ಯ ಬಿದ್ದರೆ ಮರಳಿ ಮೈದಾನಕ್ಕಿಳಿಯುವ ನಿರ್ಧಾರ ಮಾಡಿದರೂ ಆಶ್ಚರ್ಯವಿಲ್ಲ.

ಪಿಎಸ್​ಎಲ್​ಗೆ ಕೈ ಕೊಡ್ತಾರಾ?

ಮತ್ತೊಂದೆಡೆ, ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದರೂ, ಮ್ಯಾಕ್ಸಿ ಕೊನೆ ಕ್ಷಣದಲ್ಲಿ ಅದಕ್ಕೆ ಕೈಕೊಟ್ಟು ಮತ್ತೆ ಭಾರತದ ಕಡೆಗೆ ಮುಖ ಮಾಡುವ ಸಾಧ್ಯತೆಯನ್ನೂ ಕ್ರಿಕೆಟ್ ಪಂಡಿತರು ತಳ್ಳಿಹಾಕುತ್ತಿಲ್ಲ. ಐಪಿಎಲ್ ನೀಡುವ ಭಾರಿ ಸಂಭಾವನೆ, ಜಾಗತಿಕ ಸ್ಟಾರ್‌ಡಮ್ ಹಾಗೂ ಭಾರತದಲ್ಲಿ ಅವರಿಗಿರುವ ಅಪಾರ ಅಭಿಮಾನಿ ಬಳಗಕ್ಕೆ ಹೋಲಿಸಿದರೆ ಪಿಎಸ್‌ಎಲ್‌ನ ಆಕರ್ಷಣೆ ತೀರಾ ಕಡಿಮೆ.

ಅದರಲ್ಲೂ  ಕಳೆದ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ಪರ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ 9 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 99 ರನ್ ಮಾತ್ರ. ಟೂರ್ನಿಯುದ್ದಕ್ಕೂ ತೀವ್ರ ಫಾರ್ಮ್ ಕೊರತೆಯಿಂದ ತಡಬಡಾಯಿಸಿದ್ದ ಮ್ಯಾಕ್ಸಿ, ರಾವಲ್ಪಿಂಡಿ ವಿರುದ್ಧದ ಒಂದೇ ಒಂದು ಪಂದ್ಯದಲ್ಲಿ 37 ಎಸೆತಗಳಲ್ಲಿ 70 ರನ್ ಚಚ್ಚಿ ಅಬ್ಬರಿಸಿದ್ದನ್ನು ಹೊರತುಪಡಿಸಿದರೆ ಉಳಿದ ಇನಿಂಗ್ಸ್‌ಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು.

ಇನ್ನು ಪ್ಲಾಟಿನಂ ವರ್ಗದ ಒಪ್ಪಂದದಡಿ ಈ ಟೂರ್ನಿಗಾಗಿ ಅವರಿಗೆ ಸಿಕ್ಕ ಸಂಭಾವನೆ ಸುಮಾರು ₹1.47 ಕೋಟಿ ಮಾತ್ರ. ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನಿಂದ ಬರೋಬ್ಬರಿ ₹4.20 ಕೋಟಿ ಹಾಗೂ ಆರ್‌ಸಿಬಿಯಿಂದ ₹11 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಮ್ಯಾಕ್ಸಿ ಅವರಿಗೆ, ಪಿಎಸ್‌ಎಲ್‌ನ ಈ ಆದಾಯ ತೀರಾ ಕಡಿಮೆಯದ್ದಾಗಿದೆ. ಹೀಗಾಗಿ, ಈ ಕಡಿಮೆ ಸಂಭಾವನೆ ಮತ್ತು ಅಲ್ಲಿನ ಕಳಪೆ ಪ್ರದರ್ಶನವೂ ಸಹ ಅವರು ಪಾಕಿಸ್ತಾನ್ ಸೂಪರ್​ ಲೀಗ್‌ನಿಂದ ಹಿಂದೆ ಸರಿಯುವಂತೆ ಮಾಡಬಹುದು.

ಸದ್ಯ ಇಂಟರ್ನ್ಯಾಷನಲ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ಸದ್ಯ ಫ್ರೀ ಆಗಿರುವ ಮ್ಯಾಕ್ಸಿ,  ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಮುಂಬರುವ ಐಪಿಎಲ್‌ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಅಥವಾ ಗಾಯಗೊಂಡ ಆಟಗಾರರ ಬದಲಿಯಾಗಿ ಮರಳಿ ಐಪಿಎಲ್​ಗೆ ಲಗ್ಗೆ ಇಡುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: ಭಾರತ vs ನ್ಯೂಝಿಲೆಂಡ್ ಏಕದಿನ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

ಈಗಾಗಲೇ ಮುಂಬರುವ ಐಪಿಎಲ್ ಮಿನಿ ಹರಾಜಿಗಾಗಿ ಆಟಗಾರರ ಹೆಸರು ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಒಂದು ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ ಈ ನೋಂದಣಿ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೀಡಿದ್ದೇ ಆದಲ್ಲಿ, ಬಿಸಿಸಿಐ ಬಿಡುಗಡೆ ಮಾಡಲಿರುವ ಅಂತಿಮ ಶಾರ್ಟ್‌ಲಿಸ್ಟ್‌ನಲ್ಲಿ ಅವರ ಹೆಸರು ಕಾಣಿಸಿಕೊಳ್ಳುವುದು ನೂರಕ್ಕೆ ನೂರರಷ್ಟು ಖಚಿತ. ಹೀಗಾಗಿ, ‘ಬಿಗ್ ಶೋ’ ನಿಜವಾಗಿಯೂ ಪಾಕಿಸ್ತಾನ್ ಸೂಪರ್ ಲೀಗ್‌ಗೆ ಕೈಕೊಟ್ಟು ಮತ್ತೆ ಐಪಿಎಲ್ ಅಖಾಡಕ್ಕೆ ಧುಮುಕಲಿದ್ದಾರಾ ಎಂಬ ಕುತೂಹಲಕ್ಕೆ ಅಧಿಕೃತ ತೆರೆ ಬೀಳಬೇಕಾದರೆ, ಬಿಸಿಸಿಐ ಹರಾಜಿನ ಅಂತಿಮ ಆಟಗಾರರ ಪಟ್ಟಿಯನ್ನು ಹೊರಬಿಡುವವರೆಗೂ ಅಭಿಮಾನಿಗಳು ಕಾಯಲೇಬೇಕಿದೆ!

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More