U19 World Cup 2024: ಮುಶೀರ್ ಖಾನ್ ಶತಕ; ಭಾರತಕ್ಕೆ 201 ರನ್‌ಗಳ ಭರ್ಜರಿ ಜಯ
U19 World Cup 2024: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 2024ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ 201 ರನ್‌ಗಳ ಬೃಹತ್ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 2024ರ ಅಂಡರ್-19 ವಿಶ್ವಕಪ್‌ನಲ್ಲಿ (ICC U19 World Cup 2024) ಭಾರತ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತ (India U19 vs Ireland U19) 201 ರನ್‌ಗಳ ಬೃಹತ್ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ್ದ ಉದಯ್ ಸಹಾರನ್ (Uday Saharan) ಪಡೆ, ಐರ್ಲೆಂಡ್ ವಿರುದ್ಧವೂ ಸುಲಭ ಜಯ ದಾಖಲಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮುಶೀರ್ ಖಾನ್ (Musheer Khan) ಅವರ ಶತಕ ಹಾಗೂ ನಾಯಕ ಉದಯ್ ಸಹಾರನ್ ಅವರ ಅರ್ಧಶತಕದ ಆಧಾರದ ಮೇಲೆ ಏಳು ವಿಕೆಟ್ ಕಳೆದುಕೊಂಡು 301 ರನ್ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಕೇವಲ 100 ರನ್‌ಗಳಿಗೆ ಆಲೌಟ್ ಆಗುವ ಮೂಲಕ 201 ರನ್‌ಗಳ ಬೃಹತ್ ಸೋಲು ಅನುಭವಿಸಿದೆ.
156 ರನ್‌ಗಳ ಜೊತೆಯಾಟ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆದರ್ಶ್ ಸಿಂಗ್ 17 ರನ್‌ಗಳಿಗೆ ಸುಸ್ತಾದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಅರ್ಶಿನ್ ಕುಲಕರ್ಣಿ 32 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಆ ಬಳಿಕ ಜೊತೆಯಾದ ಭಾರತ ತಂಡದ ನಾಯಕ ಉದಯ್ ಸಹರಾನ್ ಹಾಗೂ ಮುಶೀರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮುಶೀರ್ ಮುಂದಿನ 34 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ನಾಯಕ ಉದಯ್ ಸಹರನ್ (84 ಎಸೆತಗಳಲ್ಲಿ 75 ರನ್) ಅವರೊಂದಿಗೆ 156 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
U19 World Cup 2024: ಸಿಡಿಲಬ್ಬರದ ಶತಕ ಸಿಡಿಸಿದ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್..!
ಇವರಿಬ್ಬರನ್ನು ಹೊರತುಪಡಿಸಿ ಸಚಿನ್ ದಾಸ್ ಒಂಬತ್ತು ಎಸೆತಗಳಲ್ಲಿ 21 ರನ್ ಕಲೆಹಾಕುವ ಮೂಲಕ ಭಾರತದ ಸ್ಕೋರ್ ಅನ್ನು 300 ರನ್‌ಗಳ ಗಡಿ ದಾಟಿಸಿದರು. ಇದು ಈ ಮೈದಾನದಲ್ಲಿ ಅಂಡರ್-19 ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಅತ್ಯಧಿಕ ಸ್ಕೋರ್ ಕೂಡ ಆಯಿತು. ಅದರಲ್ಲೂ ಕೊನೆಯ 10 ಓವರ್‌ಗಳಲ್ಲಿ ಭಾರತ 119 ರನ್ ಗಳಿಸಿದ್ದು, ತಂಡದ ಸ್ಫೋಟಕ ಬ್ಯಾಟಿಂಗ್ಗೆ ಹಿಡಿದ ಕೈಗನ್ನಡಿಯಾಗಿತ್ತು.
ಐರ್ಲೆಂಡ್ 100 ರನ್‌ಗಳಿಗೆ ಆಲೌಟ್
302 ರನ್‌ಗಳಿಗೆ ಉತ್ತರವಾಗಿ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ಕೇವಲ 100 ರನ್‌ಗಳಿಗೆ ಆಲೌಟ್ ಆಯಿತು. 22 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ ತಂಡ 45 ರನ್ ಆಗುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಂತರ ಜೊತೆಯಾದ ಒಲಿ ರಿಲೆ ಮತ್ತು ಡೇನಿಯಲ್ ಫೋರ್ಕಿನ್ 10ನೇ ವಿಕೆಟ್‌ಗೆ 49 ರನ್ ಕಲೆಹಾಕಿದರು. ಇನ್ನು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಫಿನ್ ಲುಟನ್ ಕೂಡ 7 ರನ್ ಗಳಿಸಿದರು. ಈ ಮೂಲಕ ತಂಡ 100 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಭಾರತದ ಪರ ನಮನ್ ತಿವಾರಿ ನಾಲ್ಕು ವಿಕೆಟ್ ಪಡೆದರೆ, ಸೌಮ್ಯ ಪಾಂಡೆ 3 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 pm, Thu, 25 January 24