U19 World Cup 2024: ಸಿಡಿಲಬ್ಬರದ ಶತಕ ಸಿಡಿಸಿದ ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್..!
U19 World Cup 2024: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ಭರ್ಜರಿ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ (ICC U19 World Cup 2024) ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರ ಸಹೋದರ ಮುಶೀರ್ ಖಾನ್ (Musheer Khan) ಭರ್ಜರಿ ಶತಕ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಐರ್ಲೆಂಡ್ ವಿರುದ್ಧ (India U19 vs Ireland U19) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಮುಶೀರ್ 118 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 106 ಎಸೆತಗಳನ್ನು ಎದುರಿಸಿದ ಮುಶೀರ್ 9 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಸಹ ಬಾರಿಸಿದರು. ಮುಶೀರ್ ಅವರ ಈ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 301 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಭಾರತದ ಇನ್ನಿಂಗ್ಸ್ ನಿಭಾಯಿಸಿದ ಉದಯ್ ಹಾಗೂ ಮುಶೀರ್
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆದರ್ಶ್ ಸಿಂಗ್ 17 ರನ್ಗಳಿಗೆ ಸುಸ್ತಾದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಅರ್ಶಿನ್ ಕುಲಕರ್ಣಿ 32 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಆ ಬಳಿಕ ಜೊತೆಯಾದ ಭಾರತ ತಂಡದ ನಾಯಕ ಉದಯ್ ಸಹರಾನ್ ಹಾಗೂ ಮುಶೀರ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಟೀಂ ಇಂಡಿಯಾ ಪರ ನಾಯಕ ಉದಯ್ 84 ಎಸೆತಗಳಲ್ಲಿ 5 ಬೌಂಡರಿ ಸಹಿತ 75 ರನ್‌ಗಳ ಬಲಿಷ್ಠ ಇನ್ನಿಂಗ್ಸ್ ಆಡಿದರು. ಹಾಗೆಯೇ ಮುಶೀರ್ ಅವರೊಂದಿಗೆ ಮೂರನೇ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ಕೂಡ ಹಂಚಿಕೊಂಡರು. ಇವರೊಂದಿಗೆ ಮುಶೀರ್ ಖಾನ್ ಕೂಡ 106 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 118 ರನ್ ಗಳಿಸಿದರು. ಉಳಿದಂತೆ ಕೆಳ ಕ್ರಮಾಂಕದಲ್ಲಿ ಟೀಂ ಇಂಡಿಯಾ ಪರ ಅರಾವಳಿ ಅವಿನಾಶ್ 22 ರನ್ ಗಳಿಸಿದರೆ, ಸಚಿನ್ ದಾಸ್ 21 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.
A fantastic TON!
Young Musheer Khan impresses everyone at the big stage with a splendid century 👏👏
He departs for 118 off just 106 deliveries.
Follow the match ▶️ https://t.co/x26Ah72jqU#TeamIndia | #INDvIRE | #U19WorldCup pic.twitter.com/XfL7NIwOF4
— BCCI (@BCCI) January 25, 2024
ಭಾರತದ ವಿರುದ್ಧದ ಈ ಪಂದ್ಯದಲ್ಲಿ ಐರ್ಲೆಂಡ್ ಪರ ಜಾನ್ ಮೆಕ್ ಎಲ್ ಹಿನ್ನಿ ಮತ್ತು ಒಲಿವರ್ ರಿಲೆ ತಲಾ ಎರಡು ವಿಕೆಟ್ ಪಡೆದರೆ, ಫಿನ್ ಲೂಟನ್ ಖಾತೆಗೆ ಒಂದು ವಿಕೆಟ್ ಬಂತು. ಮಧ್ಯಮ ಕ್ರಮಾಂಕದಲ್ಲಿ ಐರ್ಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡಿತು. ಆದರೆ ಮುಶೀರ್ ಖಾನ್ ಮತ್ತು ನಾಯಕ ಉದಯ್ ತಮ್ಮ ಪ್ರಬಲ ಬ್ಯಾಟಿಂಗ್‌ನಿಂದ ತಂಡದ ಸ್ಕೋರ್ ಅನ್ನು 300 ರನ್‌ಗಳ ಗಡಿ ದಾಟಿಸಿದರು.
ಒಂದೇ ದಿನ ಶತಕದ ಸಿಡಿಸಿದ ಸಹೋದರರು
ಜನವರಿ 25 ರ ದಿನವು ಭಾರತದ ಯುವ ಬ್ಯಾಟ್ಸ್‌ಮನ್‌ಗಳಾದ ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ಗೆ ಸ್ಮರಣೀಯ ದಿನವಾಗಿದೆ. ಏಕೆಂದರೆ ಪ್ರಸ್ತುತ ಭಾರತ ಎ ಪರ ಆಡುತ್ತಿರುವ ಸರ್ಫರಾಜ್ ಖಾನ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ಶತಕ ಬಾರಿಸಿದ್ದರೆ, ಮತ್ತೊಂದೆಡೆ, ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಆಡುತ್ತಿರುವ ಸಹೋದರ ಮುಶೀರ್ ಖಾನ್ ಕೂಡ ಅದ್ಭುತ ಶತಕ ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 25 January 24