AUS vs IND: ದ್ವಿತೀಯ ದಿನದಾಟ ಅಂತ್ಯ: ಹೆಡ್, ಸ್ಮಿತ್ ಸೆಂಚುರಿ ನಡುವೆ ಮಿಂಚಿದ ಬುಮ್ರಾ
Australia vs India, 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಬ್ರಿಸ್ಬೇನ್ನಲ್ಲಿ ನಡೆಯುತ್ತಿದೆ. ಪರ್ತ್ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿತ್ತು. ಇನ್ನು ಅಡಿಲೇಡ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ 2ನೇ ದಿನದಾಟವು ಅಂತ್ಯಗೊಂಡಿದೆ. ದ್ವಿತೀಯ ದಿನದಾಟದಲ್ಲಿ ಆಸ್ಟ್ರೇಲಿಯನ್ ಬ್ಯಾಟರ್ಗಳು ಪರಾಕ್ರಮ ಮೆರೆದರೂ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವುದು ವಿಶೇಷ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಮಳೆಯ ಕಾರಣ ಮೊದಲ ದಿನದಾಟವು ಕೇವಲ 13.2 ಓವರ್ಗಳಿಗೆ ಸೀಮಿತವಾಗಿತ್ತು. 28 ರನ್ಗಳೊಂದಿಗೆ ದ್ವಿತೀಯ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಬುಮ್ರಾ ಯಶಸ್ವಿಯಾದರು.
ಉಸ್ಮಾನ್ ಖ್ವಾಜಾ (21) ಹಾಗೂ ನಾಥನ್ ಮೆಕ್ಸ್ವೀನಿ (9) ವಿಕೆಟ್ ಕಬಳಿಸಿ ಬುಮ್ರಾ ಟೀಮ್ ಇಂಡಿಯಾಗೆ ಆರಂಭಿಕ ಮೇಲುಗೈ ತಂದುಕೊಟ್ಟರು. ಈ ಹಂತದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ (12) ನಿತೀಶ್ ಕುಮಾರ್ ರೆಡ್ಡಿ ಎಸೆತದಲ್ಲಿ ಔಟಾದರು.
ಈ ವೇಳೆ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅಮೋಘ ಜೊತೆಯಾಟದೊಂದಿಗೆ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು. ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೆಡ್ ಕೇವಲ 115 ಎಸೆತಗಳಲ್ಲಿ ಶತಕ ಪೂರೈಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಸ್ಮಿತ್ 185 ಎಸೆತಗಳಲ್ಲಿ ತಮ್ಮ 33ನೇ ಟೆಸ್ಟ್ ಸೆಂಚುರಿ ಸಿಡಿಸಿದರು.
ಈ ಮೂಲಕ ಆಸ್ಟ್ರೇಲಿಯಾ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ ಶತಕ ಬಾರಿಸಿದ ಸ್ಟೀವ್ ಸ್ಮಿತ್ (101) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (5) ಕೂಡ ವಿಕೆಟ್ ಒಪ್ಪಿಸಿದರು.
ಇನ್ನು 160 ಎಸೆತಗಳಲ್ಲಿ 18 ಫೋರ್ಗಳೊಂದಿಗೆ 152 ರನ್ ಸಿಡಿಸಿ ಅಬ್ಬರಿಸಿದ್ದ ಟ್ರಾವಿಸ್ ಹೆಡ್ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಈ ಮೂಲಕ ಜಸ್ಪ್ರೀತ್ ಬುಮ್ರಾ 5 ವಿಕೆಟ್ಗಳ ಸಾಧನೆ ಮಾಡಿದರು.
ಟ್ರಾವಿಸ್ ಹೆಡ್ ಔಟಾದ ಬೆನ್ನಲ್ಲೇ ನಾಯಕ ಪ್ಯಾಟ್ ಕಮಿನ್ಸ್ (20) ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ನೊಂದಿಗೆ ದ್ವಿತೀಯ ದಿನದಾಟ ಅಂತ್ಯವಾಯಿತು. 2ನೇ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 7 ವಿಕೆಟ್ ಕಳೆದುಕೊಂಡು 405 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಅಲೆಕ್ಸ್ ಕ್ಯಾರಿ (45) ಹಾಗೂ ಮಿಚೆಲ್ ಸ್ಟಾರ್ಕ್ (7) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: W,W,W,W,W: ಟೆಸ್ಟ್ನಲ್ಲಿ ಇತಿಹಾಸ ನಿರ್ಮಿಸಿದ ಜಸ್ಪ್ರೀತ್ ಬುಮ್ರಾ
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 25 ಓವರ್ಗಳಲ್ಲಿ 72 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇನ್ನು 24.4 ಓವರ್ ಎಸೆದ ಆಕಾಶ್ ದೀಪ್ ಹಾಗೂ 16 ಓವರ್ ಮಾಡಿದ ರವೀಂದ್ರ ಜಡೇಜಾ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.