AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಓಲಿ ಪೋಪ್ ಅಜೇಯ ಶತಕ; ಭಾರತಕ್ಕೆ ಆಂಗ್ಲರ ತಿರುಗೇಟು

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇಂದು ಸ್ಪರ್ಧೆಯ ಮೂರನೇ ದಿನವಾಗಿದ್ದು, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 316 ರನ್ ಕಲೆಹಾಕಿದೆ. ಇದರೊಂದಿಗೆ 126 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.

IND vs ENG: ಓಲಿ ಪೋಪ್ ಅಜೇಯ ಶತಕ; ಭಾರತಕ್ಕೆ ಆಂಗ್ಲರ ತಿರುಗೇಟು
ಭಾರತ- ಇಂಗ್ಲೆಂಡ್
ಪೃಥ್ವಿಶಂಕರ
|

Updated on:Jan 27, 2024 | 5:28 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯವು ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಇಂದು ಸ್ಪರ್ಧೆಯ ಮೂರನೇ ದಿನವಾಗಿದ್ದು, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 316 ರನ್ ಕಲೆಹಾಕಿದೆ. ಇದರೊಂದಿಗೆ 126 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ತಂಡದ ಪರ ಓಲಿ ಪೋಪ್ (Ollie Pope) ಅಜೇಯ 148 ರನ್ ಹಾಗೂ ರೆಹಾನ್ ಅಹ್ಮದ್ ಅಜೇಯ 16 ರನ್ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್​ನಲ್ಲಿ ವೇಗಿ ಜಸ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದ್ದರೆ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಲಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯಮ ಕ್ರಮಾಂಕ ಮತ್ತೆ ವಿಫಲ

ಭಾರತವನ್ನು 436 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಕೈಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ 47 ರನ್ ಕೊಡುಗೆ ನೀಡಿದರೆ, ಜಾಕ್ ಕ್ರೌಲಿ ಅವರೊಂದಿಗೆ 45 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಈ ಇಬ್ಬರ ನಂತರ ಬಂದ ಜೋ ರೂಟ್, ಜಾನಿ ಬೈರ್‌ಸ್ಟೋ ಮತ್ತು ನಾಯಕ ಬೆನ್ ಸ್ಟೋಕ್ಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ಶತಕದಂಚಿನಲ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಜಡೇಜಾ; ಅಂಪೈರ್ ವಿರುದ್ಧ ನೆಟ್ಟಿಗರ ಆಕ್ರೋಶ

ಸತತವಾಗಿ ಬೀಳುತ್ತಿರುವ ವಿಕೆಟ್‌ಗಳ ನಡುವೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಓಲಿ ಪೋಪ್ ತಂಡದ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆಯೇ ತಂಡದ ವಿಕೆಟ್‌ಕೀಪರ್ ಬೆನ್ ಫಾಕ್ಸ್ ಜತೆಗೂಡಿ ಒಲಿ ಪೋಪ್ 100ಕ್ಕೂ ಹೆಚ್ಚು ರನ್ ಜೊತೆಯಾಟ ನಡೆಸಿದರು. ಈ ವೇಳೆ ಪೋಪ್ ಕೂಡ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಒಲಿ ಪೋಪ್ ಅವರ 5ನೇ ಶತಕ ಹಾಗೂ ಭಾರತದ ವಿರುದ್ಧ ಮೊದಲ ಟೆಸ್ಟ್ ಶತಕವಾಯಿತು.

ಐದನೇ ಶತಕ ಸಿಡಿಸಿದ ಪೋಪ್

ಒಲಿ ಪೋಪ್ ಭಾರತದ ವಿರುದ್ಧ ಮೊದಲ ಬಾರಿಗೆ ಶತಕ ಬಾರಿಸಿದ್ದಾರೆ. ಅಲ್ಲದೆ ಇದು ಭಾರತದ ನೆಲದಲ್ಲಿ ಅವರ ಮೊದಲ ಶತಕ ಕೂಡ ಆಗಿದೆ. ವಾಸ್ತವವಾಗಿ ಪೋಪ್ ಭಾರತ ಹಾಗೂ ಇಂಗ್ಲೆಂಡ್‌ ಮುಖಾಮುಖಿಯಲ್ಲಿ ಎಂದೂ ಸಹ ಇಂತಹ ಇನ್ನಿಂಗ್ಸ್ ಆಡಿರಲಿಲ್ಲ. ಭಾರತ ಅಥವಾ ಇಂಗ್ಲೆಂಡ್‌ನ ಪಿಚ್ ಆಗಿರಲಿ, ಎಲ್ಲೆಡೆ ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳ ಮುಂದೆ ಪೋಪ್ ಆಟ ನಡೆಯುತ್ತಿರಲಿಲ್ಲ. ಆದರೆ ಹೈದರಾಬಾದ್‌ನಲ್ಲಿ ಪೋಪ್ ವಿಭಿನ್ನ ಶೈಲಿಯಲ್ಲಿ ಆಡಿದರು. ದಿನದಾಟದಂತ್ಯಕ್ಕೆ ಪೋಪ್ 208 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಿತ ಅಜೇಯ 148 ರನ್ ಕಲೆಹಾಕಿದ್ದಾರೆ.

436ರನ್​ಗಳಿಗೆ ಭಾರತ ಆಲೌಟ್

ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 436 ರನ್ ಕಲೆಹಾಕಿತು. ಇದರೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಮುನ್ನಡೆ ಸಾಧಿಸಿತು. ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದರು. ಆರಂಭಿಕ ಯಶಸ್ವಿ ಜೈಸ್ವಾಲ್ 74 ಎಸೆತಗಳಲ್ಲಿ 80 ರನ್, ಕೆಎಲ್ ರಾಹುಲ್ 86 ರನ್ ಮತ್ತು ರವೀಂದ್ರ ಜಡೇಜಾ 87 ರನ್​ಗಳ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 27 January 24