
ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ನಡೆಯುತ್ತಿರುವ ಗಾಲೆ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಕೊನೆಗೂ ಆರಂಭವಾಗಿದೆ. ಮಳೆಯಿಂದಾಗಿ ಎರಡನೇ ದಿನದಾಟವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಮೊದಲ ದಿನವೂ ಮಳೆಯಿಂದಾಗಿ ಸಂಪೂರ್ಣ 90 ಓವರ್ಗಳ ಆಟವನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟವನ್ನು ಬೇಗನೇ ಶುರು ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಆಟ ಬೆಳಿಗ್ಗೆ 9:45 ಕ್ಕೆ ಆರಂಭವಾಗಬೇಕಿತ್ತು. ಆದರೆ ಎರಡನೇ ದಿನದಂದು ಮಳೆ ಸುರಿದ ಕಾರಣದಿಂದ ಮೊದಲ ಸೆಷನ್ ಸಂಪೂರ್ಣವಾಗಿ ರದ್ದಾಯಿತು. ಇದೀಗ ಎರಡನೇ ಸೆಷನ್‌ನ ಅಂತ್ಯಕ್ಕೂ ಮುನ್ನ ಆಟ ಮತ್ತೆ ಆರಂಭವಾಗಿದೆ.
288 ರನ್ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಮೊದಲ ದಿನದಾಟವನ್ನು ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದಂದು ತನ್ನ ಸ್ಕೋರ್ಗೆ 46 ರನ್ ಸೇರಿಸುವಷ್ಟರಲ್ಲಿ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ಮೊದಲ ದಿನ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದ ರಿಷಭ್ ಪಂತ್, ಎರಡನೇ ದಿನ ತಮ್ಮ ಖಾತೆಗೆ 12 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. 62 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 39 ರನ್ ಬಾರಿಸಿದ ಪಂತ್, ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿದರು.
ಇನ್ನು ಮೊದಲ ದಿನದಂದು ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್ಗೆ ಮರಳಿದ್ದ ಕೆಎಲ್ ರಾಹುಲ್, ಪಂತ್ ವಿಕೆಟ್ ಬಳಿಕ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಇಳಿದರು. ಆದರೆ ರಾಹುಲ್ಗೆ ಎರಡನೇ ದಿನ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಮೊದಲ ದಿನ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮೊದಲು 162 ಎಸೆತಗಳಲ್ಲಿ 77 ರನ್ಗಳ ಇನ್ನಿಂಗ್ಸ್ ಆಡಿದ್ದ ರಾಹುಲ್ ಎರಡನೇ ದಿನ 13 ಎಸೆತಗಳನ್ನು ಹೆಚ್ಚುವರಿಯಾಗಿ ಆಡಿ ತಮ್ಮ ಖಾತೆಗೆ 5 ರನ್ ಸೇರಿಸಲಷ್ಟೇ ಶಕ್ತರಾದರು. ಈ ಮೂಲಕ ರಾಹುಲ್ 175 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 82 ರನ್ ಬಾರಿಸಿ ಔಟಾದರು.
IND vs SL: ದೇವದತ್ ಪಡಿಕ್ಕಲ್ ಶತಕ, ರಾಹುಲ್ ಅರ್ಧಶತಕ; ಭಾರತಕ್ಕೆ ಮೊದಲ ದಿನದ ಗೌರವ
ಮೊದಲ ದಿನದಂದು ಭಾರತದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಆರಂಭಿಕ ಯಶಸ್ವಿ ಜೈಸ್ವಾಲ್ 32 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಶುಭ್ಮನ್ ಗಿಲ್ ಅವರ ಇನ್ನಿಂಗ್ಸ್ ಕೇವಲ 16 ರನ್ಗಳಿಗೆ ಅಂತ್ಯವಾಯಿತು. ಮೊದಲ ದಿನ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಎರಡನೇ ದಿನವೂ ತಮ್ಮ ಆಟವನ್ನು ಮುಂದುವರೆಸಿದ್ದು 150 ರನ್ಗಳ ಗಡಿ ದಾಟಿದ್ದಾರೆ. ಪಡಿಕ್ಕಲ್ ಅವರ ಈ ಆಟದಿಂದಾಗಿ ತಂಡದ ಮೊತ್ತ 325 ರನ್ಗಳ ಗಡಿ ದಾಟಿದೆ.
Published On - 3:11 pm, Sun, 16 August 26