ನಮ್ಮ ಸೋಲಿಗೆ ಮೊದಲ ದಿನವೇ ಮುನ್ನಡಿ ಬರೆದಿದ್ದರು: ಪ್ಯಾಟ್ ಕಮಿನ್ಸ್
Australia vs Bangladesh: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 198 ರನ್ಗಳಿಸಿದರೆ, ಬಾಂಗ್ಲಾದೇಶ್ ತಂಡ 426 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 284 ರನ್ಗಳಿಸಿ ಆಲೌಟ್ ಆಯಿತು. ಇತ್ತ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ಕೇವಲ 57 ರನ್ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಡಾರ್ವಿನ್ನ ಮರಾರಾ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಈ ಪರಾಜಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಪಂದ್ಯದ ಮೊದಲ ದಿನವೇ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಮೊದಲ ದಿನದ ಮುನ್ನುಡಿ!
ಪಂದ್ಯದ ನಂತರ ಮಾತನಾಡಿದ ಕಮಿನ್ಸ್, “ಪಂದ್ಯದ ಮೊದಲ ದಿನವೇ ನಾವು ಹಿನ್ನಡೆ ಅನುಭವಿಸಿದೆವು. ಪಂದ್ಯಕ್ಕೆ ನಮ್ಮ ಸಿದ್ಧತೆಗಳು ಅತ್ಯುತ್ತಮವಾಗಿದ್ದವು. ಆದ್ದರಿಂದ ಸೋಲಿಗೆ ಯಾವುದೇ ನೆಪಗಳನ್ನು ಹೇಳಲು ಬಯಸುವುದಿಲ್ಲ. ಬಾಂಗ್ಲಾದೇಶ್ ಅತ್ಯುತ್ತಮವಾಗಿ ಆಡಿತು. ಮೊದಲ ದಿನ ಪಿಚ್‌ನಲ್ಲಿ ಬೌಲರ್‌ಗಳಿಗೆ ಕೊಂಚ ನೆರವಿತ್ತು ನಿಜ, ಆದರೆ ನಮ್ಮ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವ ದಾರಿ ಹುಡುಕಬೇಕಿತ್ತು. ಬಳಿಕ ನಮಗೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ,
ಬಾಂಗ್ಲಾ ಶಿಸ್ತಿನ ಆಟಕ್ಕೆ ಶ್ಲಾಘನೆ:
ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿದ ಬಾಂಗ್ಲಾದೇಶ್ ತಂಡದ ಆಟವನ್ನು ಕಮಿನ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. “ಅವರು ಪಂದ್ಯದ ಎಲ್ಲಾ ವಿಭಾಗಗಳಲ್ಲೂ ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ತೋರಿದ ತಾಳ್ಮೆ ಮತ್ತು ಶಿಸ್ತು ಅದ್ಭುತವಾಗಿತ್ತು. ಒಮ್ಮೆ ನಾವು ಪಂದ್ಯದಲ್ಲಿ ಹಿಂದೆ ಬಿದ್ದ ನಂತರ, ಮರಳಿ ಕಮ್‌ಬ್ಯಾಕ್ ಮಾಡುವುದು ನಮಗೆ ತುಂಬಾ ಕಷ್ಟವಾಯಿತು” ಎಂದರು.
ತಂಡದಲ್ಲಿ ಬದಲಾವಣೆಯ ಸುಳಿವು:
ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಗಳಾಗಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಿನ್ಸ್, “ಇಂತಹ ಪಂದ್ಯಗಳು ಮುಗಿದಾಗ ಮುಂದಿನ ಪಂದ್ಯಕ್ಕಾಗಿ ತಂಡದ ಸಂಯೋಜನೆ ಮತ್ತು ಆಟಗಾರರ ಮ್ಯಾಚ್-ಅಪ್‌ಗಳನ್ನು ಪರಿಶೀಲಿಸುವುದು ಸಹಜ. ಪಂದ್ಯ ಈಗಷ್ಟೇ ಮುಗಿದಿರುವುದರಿಂದ ಈ ಬಗ್ಗೆ ನಾವು ಯೋಚಿಸುತ್ತೇವೆ.
ನಮ್ಮ ತಂಡವು ಬಲಿಷ್ಠವಾಗಿ ಪುನರಾಗಮನ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ಬ್ಯಾಟಿಂಗ್ ವಿಭಾಗ ಸೇರಿದಂತೆ ಇಡೀ ತಂಡ ಒಟ್ಟಾಗಿ ಕುಳಿತು ನಾವು ಎಲ್ಲೆಲ್ಲಿ ಸುಧಾರಿಸಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ” ಎಂದು ಪ್ಯಾಟ್ ಕಮಿನ್ಸ್ ತಿಳಿಸಿದ್ದಾರೆ.
ಹೇಝಲ್‌ವುಡ್ ಹಾಗೂ ಗ್ರೀನ್ ಸಾಧನೆಗೆ ಮೆಚ್ಚುಗೆ:
ಆಸ್ಟ್ರೇಲಿಯಾ ತಂಡದ ಸೋಲಿನ ನಡುವೆಯೂ ಪ್ಯಾಟ್ ಕಮಿನ್ಸ್ ಇಬ್ಬರು ಆಟಗಾರರ ವೈಯಕ್ತಿಕ ಸಾಧನೆಯನ್ನು ಕೊಂಡಾಡಿದರು. ಕಳೆದ ಎರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ, ಈ ಪಂದ್ಯದಲ್ಲಿ 6 ಪ್ರಮುಖ ವಿಕೆಟ್ ಪಡೆದು ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಮೈಲಿಗಲ್ಲು ತಲುಪಿದ ಜೋಶ್ ಹೇಝಲ್‌ವುಡ್ ಅವರನ್ನು ಶ್ಲಾಘಿಸಿದರು.
ಹಾಗೆಯೇ, ಜವಾಬ್ದಾರಿಯುತ ಶತಕ ಸಿಡಿಸಿದ ಕ್ಯಾಮರೂನ್ ಗ್ರೀನ್ ಅವರ ಆಟದ ಶೈಲಿಯನ್ನು ಕೊಂಡಾಡಿದ ಕಮಿನ್ಸ್, “ಗ್ರೀನ್‌ಗೆ ಮತ್ತೊಂದು ತುದಿಯಲ್ಲಿ ಇತರ ಬ್ಯಾಟರ್‌ಗಳು ಸೂಕ್ತ ಸಾಥ್ ನೀಡಬೇಕಿತ್ತು. ಆದರೆ, ನಮ್ಮ ಬ್ಯಾಟರ್‌ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಇದಾಗ್ಯೂ, ಗ್ರೀನ್ ಅವರ ಹೋರಾಟದ ಆಟವೇ ಪಂದ್ಯವನ್ನು 4ನೇ ಇನಿಂಗ್ಸ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು” ಎಂದು ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮೂರೇ 3 ಪಂದ್ಯಗಳಲ್ಲಿ ಭಾರತ, ಪಾಕ್ ದಾಖಲೆ ಮುರಿದ ಬಾಂಗ್ಲಾದೇಶ್!
ಒಟ್ಟಾರೆಯಾಗಿ ಹೇಳುವುದಾದರೆ, ಈ ಐತಿಹಾಸಿಕ ಸೋಲು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಆದರೆ, ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ಪಡೆ ಕಂಬ್ಯಾಕ್ ಮಾಡಲು ಹೆಸರುವಾಸಿ. ಮೆಕಾಯ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಬ್ಯಾಟಿಂಗ್ ವೈಫಲ್ಯಗಳನ್ನು ಸರಿಪಡಿಸಿಕೊಂಡು ಹೇಗೆ ತಿರುಗೇಟು ನೀಡಲಿದೆ ಮತ್ತು ಬಾಂಗ್ಲಾದೇಶf ತನ್ನ ಐತಿಹಾಸಿಕ ಗೆಲುವಿನ ಲಯವನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.




