IPL 2023: RCB ಗೆ ಜಡೇಜಾ, CSK ಗೆ ಡುಪ್ಲೆಸಿಸ್: ಹೀಗೊಂದು ಲೆಕ್ಕಾಚಾರ..!
IPL 2023: ಐಪಿಎಲ್ ಸೀಸನ್ 16 ಹರಾಜಿಗಾಗಿ ಫ್ರಾಂಚೈಸಿಗಳ ಹರಾಜು ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಕಳೆದ ಬಾರಿ 90 ಕೋಟಿಯಿದ್ದ ಹರಾಜು ಮೊತ್ತವು ಈ ಬಾರಿ 5 ಕೋಟಿ ಏರಿಕೆಯಾಗಲಿದೆ.
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ರಿಟೈನ್ ಮಾಡಲಾಗುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿದೆ. ಅದರಂತೆ ನವೆಂಬರ್ 15 ರೊಳಗೆ 10 ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗೆಯೇ ಉಳಿದ ಆಟಗಾರರು ರಿಲೀಸ್ ಆಗಲಿದ್ದಾರೆ. ವಿಶೇಷ ಎಂದರೆ ಈ ರಿಟೈನ್ ಪ್ರಕ್ರಿಯೆಗೂ ಮುನ್ನ ಟ್ರೇಡಿಂಗ್ ನಡೆಸುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ.
ಏನಿದು ಐಪಿಎಲ್ ಟ್ರೇಡಿಂಗ್?
ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಟ್ರೇಡ್ ಮಾಡುವ ಆಯ್ಕೆ ನೀಡಲಾಗುತ್ತದೆ. ಅಂದರೆ ಎರಡು ಫ್ರಾಂಚೈಸಿಗಳು ಪರಸ್ಪರ ಒಪ್ಪಿ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಅಥವಾ ಒಂದು ಫ್ರಾಂಚೈಸಿಯು ತನ್ನಲ್ಲಿರುವ ಆಟಗಾರರನ್ನು ಹೆಚ್ಚಿನ ಮೊತ್ತಕ್ಕೆ ಬೇರೊಂದು ತಂಡಕ್ಕೆ ಮಾರಾಟ ಮಾಡಬಹುದು. ಇಲ್ಲಿ ಎರಡು ಫ್ರಾಂಚೈಸಿಗಳು ಒಪ್ಪಿದರೆ ಮಾತ್ರ ಟ್ರೇಡ್ ಪ್ರಕ್ರಿಯೆ ನಡೆಯಲಿದೆ.
ಇದೀಗ ಟ್ರೇಡ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟ್ರೇಡ್ ವಿಷಯವಾಗಿ ಸಂಪರ್ಕಿಸಿದೆ ಎಂದು ವರದಿಯಾಗಿದೆ. ಇತ್ತ ಸಿಎಸ್ಕೆ ತಂಡದಿಂದ ರವೀಂದ್ರ ಜಡೇಜಾ ಹೊರಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಆರ್ಸಿಬಿ ಟ್ರೇಡಿಂಗ್ ಬಗ್ಗೆ ಸಿಎಸ್ಕೆ ಜೊತೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏಕೆಂದರೆ ಚೆನ್ನೈ ತಂಡದ ಖಾಯಂ ಸದಸ್ಯರಾಗಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಕಳೆದ ಸೀಸನ್ನಲ್ಲಿ ಆರ್ಸಿಬಿ ಖರೀದಿಸಿತ್ತು. ಇದೀಗ ಫಾಫ್ ಡುಪ್ಲೆಸಿಸ್ ಹಾಗೂ ರವೀಂದ್ರ ಜಡೇಜಾ ನಡುವೆ ಟ್ರೇಡ್ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅಂದರೆ ಟ್ರೇಡ್ ವಿಂಡೋ ಪ್ರಕ್ರಿಯೆಯ ಮೂಲಕ ಇಬ್ಬರು ಆಟಗಾರರನ್ನು ಬದಲಿಸಿಕೊಳ್ಳುವ ಅವಕಾಶ ಕೂಡ ಇದೆ.
ಈ ಆಯ್ಕೆಯ ಮೂಲಕ ಆರ್ಸಿಬಿ ಜಡೇಜಾ ಅವರನ್ನು ಖರೀದಿಸಿ, ಫಾಫ್ ಡುಪ್ಲೆಸಿಸ್ ಅವರನ್ನು ಸಿಎಸ್ಕೆಗೆ ಮರಳಿಸಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಒಟ್ಟಿನಲ್ಲಿ ಆರ್ಸಿಬಿ-ಸಿಎಸ್ಕೆ ನಡುವಣ ಟ್ರೇಡಿಂಗ್ ಚರ್ಚೆಗಳು ಶುರುವಾದ ಬೆನ್ನಲ್ಲೇ ರವೀಂದ್ರ ಜಡೇಜಾ ಹಾಗೂ ಫಾಫ್ ಡುಪ್ಲೆಸಿಸ್ ಹೆಸರುಗಳು ಕೂಡ ಮುನ್ನಲೆಗೆ ಬಂದಿದೆ. ಹೀಗಾಗಿ ರವೀಂದ್ರ ಜಡೇಜಾ ಅವರನ್ನು ಆರ್ಸಿಬಿ ಟ್ರೇಡ್ ಮಾಡಲಿದೆಯಾ ಎಂಬುದೇ ಈಗ ಕುತೂಹಲ.
ಈ ಬಾರಿ ಮಿನಿ ಹರಾಜು:
ಐಪಿಎಲ್ನಲ್ಲಿ ಪ್ರತಿ ಮೂರು ಸೀಸನ್ಗೊಮ್ಮೆ ಮೆಗಾ ಹರಾಜನ್ನು ನಡೆಸಲಾಗುತ್ತದೆ. ಇದರ ನಡುವಿನ 2 ಸೀಸನ್ಗಳಲ್ಲಿ ಮಿನಿ ಹರಾಜು ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವುದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಅಂದರೆ ಪ್ರತಿ ತಂಡಗಳು 25 ಆಟಗಾರರಲ್ಲಿ ಬಿಡುಗಡೆ ಮಾಡಲಾದ ಆಟಗಾರ ಸ್ಥಾನದಲ್ಲಿ ಬದಲಿ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶ ಇರಲಿದೆ.
ಇದನ್ನೂ ಓದಿ: IPL 2023: CSK ಕೊನೆಯ ಕಸರತ್ತು: ಮಿನಿ ಹರಾಜಿನತ್ತ ರವೀಂದ್ರ ಜಡೇಜಾ
ಹರಾಜು ಮೊತ್ತ ಹೆಚ್ಚಳ:
ಐಪಿಎಲ್ ಸೀಸನ್ 16 ಹರಾಜಿಗಾಗಿ ಫ್ರಾಂಚೈಸಿಗಳ ಹರಾಜು ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಕಳೆದ ಬಾರಿ 90 ಕೋಟಿಯಿದ್ದ ಹರಾಜು ಮೊತ್ತವು ಈ ಬಾರಿ 5 ಕೋಟಿ ಏರಿಕೆಯಾಗಲಿದೆ. ಅಂದರೆ ಐಪಿಎಲ್ ಸೀಸನ್ 16 ಹರಾಜು ಪ್ರಕ್ರಿಯೆಯು ಒಟ್ಟು 95 ಕೋಟಿಯಲ್ಲಿ ನಡೆಯಲಿದೆ.