ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ವಿಡಿಯೋವೊಂದು ವೈರಲ್ ಆಗಿದೆ. ಹೀಗೆ ಏಕಾಏಕಿ ಧೋನಿಯ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಅವರು ಬಾರ್ನಲ್ಲಿ ಕಾಣಿಸಿಕೊಂಡಿರುವುದು. ಆರ್ಸಿಬಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋತ ಬಳಿಕ ಸಿಎಸ್ಕೆ ತಂಡವು ಐಪಿಎಲ್ 2024 ರಿಂದ ಹೊರಬಿದ್ದಿದೆ. ಈ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟ್ಯಾಗ್ಲೈನ್ನೊಂದಿಗೆ ವಿಡಿಯೋ ವೈರಲ್ ಆಗಿದೆ.
ಮೇಲ್ನೋಟಕ್ಕೆ ಈ ವಿಡಿಯೋ ಇತ್ತೀಚಿನದಲ್ಲ. ಏಕೆಂದರೆ ಸಿಎಸ್ಕೆ ತಂಡದ ಸೋಲಿನ ಬಳಿಕ ಹತಾಶರಾಗಿದ್ದ ಧೋನಿ ಅಂದೇ ತವರಿಗೆ ತೆರಳಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಆರ್ಸಿಬಿ ವಿರುದ್ಧದ ಸೋಲಿನ ಬಳಿಕ ಜಡೇಜಾ ಜೊತೆ ಬಾರ್ನಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿಲ್ಲ.
ಇದಾಗ್ಯೂ ಈ ವಿಡಿಯೋ ಈ ಬಾರಿಯ ಐಪಿಎಲ್ ಸಂದರ್ಭದ್ದು ಎಂಬುದು ವಿಶೇಷ. ಏಕೆಂದರೆ ಧೋನಿ ಹಲವು ವರ್ಷಗಳ ಬಳಿಕ ಉದ್ದನೆಯ ಕೂದಲಿನೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋದಲ್ಲೂ ಲಾಂಗ್ ಹೇರ್ ಸ್ಟೈಲ್ ಅನ್ನು ಕಾಣಬಹುದು. ಹೀಗಾಗಿ ಇದು ಈ ಬಾರಿಯ ಐಪಿಎಲ್ ವೇಳೆ ಸೆರೆ ಹಿಡಿಯಲಾದ ವಿಡಿಯೋ ಎಂಬುದು ಸ್ಪಷ್ಟ.
ಸದ್ಯ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಬಾರ್ನಲ್ಲಿ ಚಿಲ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ನಾನಾ ರೀತಿಯ ಮೀಮ್ಸ್ಗಳು ಕೂಡ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ: MS Dhoni: ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದ ಧೋನಿ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 18 ರಂದು ನಡೆದ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 27 ರನ್ಗಳ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಪ್ಲೇಆಫ್ಗೆ ಪ್ರವೇಶಿಸಿದರೆ, ಅತ್ತ ಸಿಎಸ್ಕೆ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಈ ರಣರೋಚಕ ಪಂದ್ಯದ ಬಳಿಕ ಸಿಎಸ್ಕೆ ತಂಡದ ಮಾಜಿ ನಾಯಕ ಧೋನಿ ಆರ್ಸಿಬಿ ಆಟಗಾರರೊಂದಿಗೆ ಹಸ್ತಲಾಘವ ಮಾಡಿರಲಿಲ್ಲ ಎಂಬುದೇ ಅಚ್ಚರಿ.
ಪಂದ್ಯ ಮುಗಿದ ಬಳಿಕ ಸಿಎಸ್ಕೆ ಆಟಗಾರರು ಹಸ್ತಲಾಘವ ನೀಡಲು ಸರದಿ ಸಾಲಿನಲ್ಲಿ ನಿಂತಿದ್ದರು. ಈ ಸಾಲಿನಲ್ಲಿ ಧೋನಿ ಮುಂಚೂಣಿಯಲ್ಲಿದ್ದರು. ಆದರೆ ಅತ್ತ ಪಂದ್ಯ ಗೆದ್ದ ಖುಷಿಯಲ್ಲಿದ್ದ ಆರ್ಸಿಬಿ ಆಟಗಾರರು ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಆರ್ಸಿಬಿ ಆಟಗಾರರನ್ನು ಕಾಯದೇ ಮಹೇಂದ್ರ ಸಿಂಗ್ ಧೋನಿ ಪೆವಿಲಿಯನ್ನತ್ತ ಮರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೋನಿ ನಡೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.