IPL 2025: ಹೀನಾಯ ಪ್ರದರ್ಶನ; 8 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡ ಸಿಎಸ್ಕೆ
CSK vs PBKS IPL 2025: ಚೆಪಾಕ್‌ನಲ್ಲಿ ನಡೆದ ಐಪಿಎಲ್ 49ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 190 ರನ್ ಗಳಿಸಿತು. ಯುಜ್ವೇಂದ್ರ ಚಾಹಲ್ ಅವರು 19ನೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಪಡೆಯುವುದರೊಂದಿಗೆ ಹ್ಯಾಟ್ರಿಕ್ ಕೂಡ ಸಾಧಿಸಿದರು. ಅಲ್ಲದೆ ಚೆನ್ನೈ ತಂಡ ಕೊನೆಯ 8 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಕಲೆಹಾಕುವುದನ್ನು ತಪ್ಪಿಸಿಕೊಂಡಿತು.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ನ (IPL 2025) 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ (CSK vs PBKS) ಮುಖಾಮುಖಿಯಾಗಿದ್ದವು. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ಬಹುಮುಖ್ಯವಾಗಿದ್ದ ಕಾರಣ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ 190 ರನ್ ಕಲೆಹಾಕಿತು. ವಾಸ್ತವವಾಗಿ ಒಂದು ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 220 ರನ್ ಗಳಿಸುವ ನಿರೀಕ್ಷೆಯಿತ್ತು. ಆದರೆ ಪಂಜಾಬ್ ತಂಡವು ಕೊನೆಯ 8 ಎಸೆತಗಳಲ್ಲಿ ಚೆನ್ನೈ ತಂಡದ 5 ವಿಕೆಟ್ ಉರುಳಿಸುವ ಮೂಲಕ ಇಡೀ ತಂಡವನ್ನು ಕೇವಲ 190 ರನ್‌ಗಳಿಗೆ ಸೀಮಿತಗೊಳಿಸಿತು.
ಮೇಲೆ ಹೇಳಿದಂತೆ 18 ಓವರ್‌ಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 177 ರನ್‌ಗಳಾಗಿತ್ತು. ಹೀಗಾಗಿ ಚೆನ್ನೈ ಈ ಪಂದ್ಯದಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸುತ್ತದೆ ಎಂದು ತೋರುತ್ತಿತ್ತು. ಇದಕ್ಕೆ ಪೂರಕವಾಗಿ ಫಿನಿಶರ್ ಖ್ಯಾತಿಯ ಎಂ ಎಸ್ ಧೋನಿ ಹಾಗೂ ಸ್ಫೋಟಕ ದಾಂಟಿಗ ಶಿವಂ ದುಬೆ ಕ್ರೀಸ್ನಲ್ಲಿದ್ದರು. ಹೀಗಾಗಿ ಕೊನೆಯ 12 ಎಸೆತಗಳಲ್ಲಿ ಸಿಎಸ್ಕೆ ಭರ್ಜರಿ ಬ್ಯಾಟಿಂಗ್ ಮಾಡಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಸಿಎಸ್ಕೆ ಬ್ಯಾಟರ್ಗಳು ಹುಸಿಗೊಳಿಸಿದರು.
ಚಾಹಲ್‌ಗೆ ಒಂದೇ ಓವರ್‌ನಲ್ಲಿ 4 ವಿಕೆಟ್
ವಾಸ್ತವವಾಗಿ 19ನೇ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಾಹಲ್‌ಗೆ ವಹಿಸಿದರು. ಈ ವೇಳೆ ಎಂಎಸ್ ಧೋನಿ ಸ್ಟ್ರೈಕ್ನಲ್ಲಿದ್ದರು. ನಿರೀಕ್ಷೆಯಂತೆ ಚಾಹಲ್ ಅವರ ಮೊದಲ ಎಸೆತವನ್ನು ಧೋನಿ ಸಿಕ್ಸರ್ ಬಾರಿಸಿದರು. ಮೊದಲ ಎಸೆತವೇ ಸಿಕ್ಸರ್ ಹೋದ ಕಾರಣ , ಮತ್ತೊಮ್ಮೆ ಧೋನಿ ಅಬ್ಬರಿಸಬಹುದು ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಮುಂದಿನ ಎಸೆತದಲ್ಲೇ ಚಾಹಲ್, ಧೋನಿಯನ್ನು ಔಟ್ ಮಾಡಿದರು. ಆ ನಂತರ ಬಂದ ದೀಪಕ್ ಹೂಡಾ ಕೂಡ ಯಾವುದೇ ಪರಿಣಾಮ ಬೀರದೆ ಕ್ಯಾಚಿತ್ತು ಔಟಾದರು.
IPL 2025 Hat-trick: ಈ ಸೀಸನ್ನ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಚದುರಂಗಿ ಚಾಹಲ್; ವಿಡಿಯೋ
8 ಎಸೆತಗಳಲ್ಲಿ 5 ವಿಕೆಟ್ ಪತನ
ಹೂಡಾ ವಿಕೆಟ್ ಬಳಿಕ ಬಂದ ಇಂಪ್ಯಾಕ್ಟ್ ಪ್ಲೇಯರ್ ಅನ್ಶುಲ್ ಕಾಂಬೋಜ್ ಕೂಡ ತಾವು ಎದುರಿಸಿದ ಮೊದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. 9ನೇ ಕ್ರಮಾಂಕದಲ್ಲಿ ಬಂದ ನೂರ್ ಅಹ್ಮದ್ ಕೂಡ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಚಾಹಲ್ ಐಪಿಎಲ್‌ನಲ್ಲಿ 2ನೇ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದರೆ, ಸಿಎಸ್ಕೆ ವಿರುದ್ಧ ಬೌಲರ್ ಒಬ್ಬ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯನ್ನು ಬರೆದರು. ಆ ನಂತರ ಅಂದರೆ 20ನೇ ಓವರ್ ಬೌಲ್ ಮಾಡಿದ ಅರ್ಶ್ದೀಪ್ ಸಿಂಗ್, ಶಿವಂ ದುಬೆ ಅವರನ್ನು ಔಟ್ ಮಾಡುವ ಮೂಲಕ ಚೆನ್ನೈ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಹೀಗಾಗಿ ಚೆನ್ನೈ ತಂಡದ ಕೊನೆಯ ಐದು ವಿಕೆಟ್‌ಗಳು ಕೇವಲ 8 ಎಸೆತಗಳಲ್ಲಿ ಪತನಗೊಂಡವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
