MS Dhoni: 16 ರನ್ ಬೇಕಿದ್ದಾಗ ‘ತಲಾ’ ಪಾತಾಳ
IPL 2025 MS Dhoni: ಇಂಡಿಯನ್ ಪ್ರೀಮಿಯರ್ ಲೀಗ್ 2025ರ 8ನೇ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ 16 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಆದರೆ ಧೋನಿ ಅಬ್ಬರಿಸಲು ಶುರುವಾಗುವ ಮುಂಚೆಯೇ ಸಿಎಸ್ಕೆ ತಂಡ ಸೋಲೊಪ್ಪಿಕೊಂಡಿತ್ತು. ಹೀಗಾಗಿಯೇ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿಯ ನಿರ್ಧಾರವನ್ನು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಸಿಎಸ್ಕೆ ತಂಡದ ತಂತ್ರಗಾರಿಕೆ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ (MS Dhoni) 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದೇಕೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಏಕೆಂದರೆ ಎಂಎಸ್ ಧೋನಿ ತನ್ನ ಐಪಿಎಲ್ ಕೆರಿಯರ್ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು ಕೇವಲ 2 ಬಾರಿ ಮಾತ್ರ. ಇದಕ್ಕೂ ಮುನ್ನ 2024 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಆಡಿದ್ದರು. ಅಂದು ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಈ ವೈಫಲ್ಯದ ಹೊರತಾಗಿಯೂ ಮಹತ್ವದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವಶ್ಯಕತೆ ಏನಿತ್ತು ಎಂಬುದೇ ಪ್ರಶ್ನೆ.
ಧೋನಿಯ ಅಚ್ಚರಿಯ ನಿರ್ಧಾರ:
ಚೆಪಾಕ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ರತಿ ಓವರ್ಗೆ 3 ರನ್ ಬೇಕಿದ್ದಾಗ ಮಹೇಂದ್ರ ಸಿಂಗ್ ಧೋನಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ ಆರ್ಸಿಬಿ ವಿರುದ್ಧ ರವಿಚಂದ್ರನ್ ಅಶ್ವಿನ್ ಔಟಾದ ಬಳಿಕ ಆಗಮಿಸಿದ್ದಾರೆ.
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಪ್ರತಿ ಓವರ್ಗೆ 16 ರನ್ ಬೇಕಿದ್ದರೂ ಮಹೇಂದ್ರ ಸಿಂಗ್ ಧೋನಿ ಮಾತ್ರ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಪಾತಾಳಕ್ಕೆ ಇಳಿಸಿದ್ದರು. ಹೀಗಾಗಿಯೇ ಕಡಿಮೆ ಸ್ಕೋರ್ ಬೇಕಿದ್ದಾಗ ಮಾತ್ರವೇಕೆ ಧೋನಿ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ಪ್ರಶ್ನಿಸಲಾರಂಭಿಸಿದ್ದಾರೆ.
ಏಕೆಂದರೆ ಈ ಹಿಂದೆ ಧೋನಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 5 ಇನಿಂಗ್ಸ್ ಆಡಿದ್ದಾರೆ. ಅಲ್ಲದೆ 4ನೇ ಕ್ರಮಾಂಕದಲ್ಲಿ 44 ಬಾರಿ ಬ್ಯಾಟ್ ಬೀಸಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಆಡಿದಾಗ 41 ಇನಿಂಗ್ಸ್ಗಳಿಂದ ಒಟ್ಟು 1230 ರನ್ ಕಲೆಹಾಕಿದ್ದಾರೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ 10 ಓವರ್ಗಳಲ್ಲಿ ಕೇವಲ 65 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದರೂ ಮಹೇಂದ್ರ ಸಿಂಗ್ ಧೋನಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮನಸ್ಸು ಮಾಡಲಿಲ್ಲ ಎಂಬುದೇ ಸತ್ಯ.
ಅದರಲ್ಲೂ ಗೆಲುವಿಗಾಗಿ ರನ್ ರೇಟ್ ಹೆಚ್ಚುತ್ತಿದ್ದರೂ ಮಹೇಂದ್ರ ಸಿಂಗ್ ಧೋನಿ ಅಶ್ವಿನ್ಗಿಂತ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದಿಲ್ಲ ಎಂಬುದೇ ಅಚ್ಚರಿ. ಒಟ್ಟಿನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಿದ್ದ ಪಂದ್ಯದಲ್ಲಿ ‘ತಲಾ’ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳೇ ನಿರಾಸೆ ಮೂಡಿಸಿರುವುದಂತು ನಿಜ.
ಇದನ್ನೂ ಓದಿ: 2 ವರ್ಷ ಬ್ಯಾನ್… CSKಯನ್ನು ಗೇಲಿ ಮಾಡಿದ್ರಾ ವಿರಾಟ್ ಕೊಹ್ಲಿ?
ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆಯುತ್ತಿದ್ದು, ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅಥವಾ ಸಿಎಸ್ಕೆ ಫ್ರಾಂಚೈಸಿ ಧೋನಿಯ ಕ್ರಮಾಂಕದ ಬಗ್ಗೆ ಏನು ಸ್ಪಷ್ಟನೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.