ಆಟಗಾರರಿಗೆ ಶೇಕ್ ಹ್ಯಾಂಡ್ ನೀಡುವ ಮುನ್ನ ಸ್ಯಾನಿಟೈಸ್ ಮಾಡಿಸಿದ ನೀತಾ ಅಂಬಾನಿ
IPL 2025 MI vs DC: ಐಪಿಎಲ್ನ 63ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 180 ರನ್ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 121 ರನ್ಗಳಿಸಲಷ್ಟೇ ಶಕ್ತರಾದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಹಂಗಾಮಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅಜೇಯ 73 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ 18.2 ಓವರ್ಗಳಲ್ಲಿ 121 ರನ್ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 59 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಪಡೆ ಪ್ಲೇಆಫ್ಗೇರಿದೆ.
ಸ್ಯಾನಿಟೈಸ್ ಮಾಡಿದ ನೀತಾ ಅಂಬಾನಿ:
ಪ್ಲೇಆಫ್ಗೇರಿದ ಖುಷಿಯಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರನ್ನು ಭೇಟಿಯಾಗಲು ಬಂದ ತಂಡದ ಮಾಲಕಿ ನೀತಾ ಅಂಬಾನಿ ಅವರು ಎಲ್ಲರಿಗೂ ಸ್ಯಾನಿಟೈಸ್ ಮಾಡುವ ಮೂಲಕ ಗಮನ ಸೆಳೆದರು. ಪ್ರತಿ ಆಟಗಾರರಿಗೂ ಸ್ಯಾನಿಟೈಸ್ ಮಾಡುವಂತೆ ಸೂಚಿಸಿದರಲ್ಲದೆ, ಕೆಲವರಿಗೆ ಖುದ್ದು ಸ್ಯಾನಿಟೈಸ್ ನೀಡಿದರು. ಇದಾದ ಬಳಿಕವಷ್ಟೇ ಶೇಕ್ ಹ್ಯಾಂಡ್ ಮಾಡಿದ್ದರು.
ಸ್ಯಾನಿಟೈಝರ್ ನೀಡುತ್ತಿರುವ ನೀತಾ ಅಂಬಾನಿ:
ಸ್ಯಾನಿಟೈಸ್ ಮಾಡಲು ಕಾರಣವೇನು?
ಭಾರತದ ವಿವಿಧ ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೆ ಕಂಡು ಬಂದಿದೆ. ಅದರಲ್ಲೂ ಮುಂಬೈನಲ್ಲಿ ಕೆಲ ದಿನಗಳ ಹಿಂದೆ ಕೋವಿಡ್ ಕಾರಣದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಕೋವಿಡ್ ಕಾರಣದಿಂದ ಸನ್ರೈಸರ್ಸ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಕಳೆದ ಪಂದ್ಯದಿಂದ ಹೊರಗುಳಿದಿದ್ದರು.
ಇತ್ತ ಎಲ್ಲೆಡೆ ಕೋರೋನಾ ಭೀತಿ ಎದುರಾಗಿರುವ ಕಾರಣ ಮುಂಬೈ ಇಂಡಿಯನ್ಸ್ ಆಟಗಾರರು ಎಚ್ಚರಿಕೆವಹಿಸುವಂತೆ ಸೂಚಿಸಲಾಗಿದೆ. ಅದರ ಮುನ್ನೆಚ್ಚರಿಕೆಯಾಗಿ ಆಟಗಾರರಿಗೆ ಸ್ಯಾನಿಟೈಸ್ ಮಾಡುವಂತೆ ಸೂಚಿಸಲಾಗಿದೆ. ಇದೇ ಕಾರಣದಿಂದಾಗಿ ನೀತಾ ಅಂಬಾನಿ ಅವರು ಆಟಗಾರರಿಗೆ ಹಸ್ತಲಾಘವ ನೀಡುವ ಮುನ್ನ ಸ್ಯಾನಿಟೈಸ್ ಮಾಡುವಂತೆ ತಿಳಿಸಿದ್ದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಪಂದ್ಯ ಯಾವಾಗ?
ಈಗಾಗಲೇ ಪ್ಲೇಆಪ್ಗೆ ಎಂಟ್ರಿ ಕೊಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲಿ ಇನ್ನೂ ಒಂದು ಪಂದ್ಯವಾಡಬೇಕಿದೆ. ಮೇ 26 ರಂದು ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಲೀಗ್ ಹಂತದ ಮ್ಯಾಚ್ಗಳು ಪೂರ್ಣಗೊಳ್ಳಲಿದೆ.
Published On - 1:24 pm, Thu, 22 May 25
