ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಸ್ಟಾರ್ ಆಟಗಾರರಲ್ಲಿ ಶಾರ್ದೂಲ್ ಠಾಕೂರ್ (Shardul Thakur) ಕೂಡ ಒಬ್ಬರು. ಆದರೆ ಸೋಮವಾರ ರಾತ್ರಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮೊದಲ ಪಂದ್ಯದಲ್ಲಿ ಶಾರ್ದೂಲ್ ಕಣಕ್ಕಿಳಿದಿದ್ದರು. ಅರೇ, ಬಿಕರಿಯಾಗದೇ ಉಳಿದ ಆಟಗಾರ ಕಣಕ್ಕಿಳಿದಿರುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಮೊಹ್ಸಿನ್ ಖಾನ್ ಹೊರಗುಳಿದಿರುವುದು.
ಹೌದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ಎಡಗೈ ವೇಗಿ ಮೊಹ್ಸಿನ್ ಖಾನ್ ಗಾಯದ ಕಾರಣ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇತ್ತ ಎಲ್ಎಸ್ಜಿ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ ಅವರನ್ನು ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಅಧಿಕೃತವಾಗಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.
ಅದರಂತೆ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊದಲ ಪಂದ್ಯದಲ್ಲೇ ಶಾರ್ದೂಲ್ ಅವರನ್ನು ಕಣಕ್ಕಿಳಿಸಲಾಗಿದೆ. ಈ ಮೂಲಕ ಬದಲಿಯಾಗಿ ಬಂದ ಲಾರ್ಡ್ ಶಾರ್ದೂಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಎರಡು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿ 2 ವಿಕೆಟ್ಗಳನ್ನು ಸಹ ಕಬಳಿಸಿ ಮಿಂಚಿದ್ದಾರೆ.
ಶಾರ್ದೂಲ್ ಠಾಕೂರ್ ಐಪಿಎಲ್ನಲ್ಲಿ ಈವರೆಗೆ 6 ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. 2015 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ಶಾರ್ದೂಲ್ ಆ ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು.
ಈ ವೇಳೆ ಒಟ್ಟು 96 ಪಂದ್ಯಗಳನ್ನಾಡಿದ್ದ ಶಾರ್ದೂಲ್ 37 ಇನಿಂಗ್ಸ್ಗಳಿಂದ 307 ರನ್ ಕಲೆಹಾಕಿದ್ದಾರೆ. ಹಾಗೆಯೇ 93 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು 96 ವಿಕೆಟ್ ಕಬಳಿಸಿದ್ದಾರೆ.
ಇದೀಗ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಶಾರ್ದೂಲ್ ಠಾಕೂರ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ 6 ತಂಡಗಳ ಪರ ಕಣಕ್ಕಿಳಿದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಶಾರ್ದೂಲ್ ಠಾಕೂರ್ ಹೆಸರು ಕೂಡ ಸೇರ್ಪಡೆಯಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.3 ಓವರ್ಗಳಲ್ಲಿ 211 ರನ್ ಬಾರಿಸಿ 1 ವಿಕೆಟ್ನ ರೋಚಕ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಪಡೆದ ಈ ಬಾರಿಯ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಮಿಚೆಲ್ ಮಾರ್ಷ್ , ನಿಕೋಲಸ್ ಪೂರನ್ , ಆಯುಷ್ ಬದೋನಿ , ರಿಷಭ್ ಪಂತ್ (ನಾಯಕ) ಡೇವಿಡ್ ಮಿಲ್ಲರ್ , ಪ್ರಿನ್ಸ್ ಯಾದವ್ , ದಿಗ್ವೇಶ್ ರಾಠಿ , ಶಹಬಾಝ್ ಅಹ್ಮದ್ , ಶಾರ್ದೂಲ್ ಠಾಕೂರ್ , ರವಿ ಬಿಷ್ಣೋಯ್.
ಇದನ್ನೂ ಓದಿ: IPL 2025: ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೂ ಬಿಸಿ ಮುಟ್ಟಿಸಿದ ಸಂಜೀವ್ ಗೊಯೆಂಕಾ
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಫಾಫ್ ಡು ಪ್ಲೆಸಿಸ್ , ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್) , ಸಮೀರ್ ರಿಜ್ವಿ , ಅಕ್ಷರ್ ಪಟೇಲ್ (ನಾಯಕ) , ಟ್ರಿಸ್ಟನ್ ಸ್ಟಬ್ಸ್ , ವಿಪ್ರಜ್ ನಿಗಮ್ , ಮಿಚೆಲ್ ಸ್ಟಾರ್ಕ್ , ಕುಲ್ದೀಪ್ ಯಾದವ್ , ಮೋಹಿತ್ ಶರ್ಮಾ , ಮುಖೇಶ್ ಕುಮಾರ್.